ಬಾಲ್ಯ ಮತ್ತು ಬದುಕು : ಸಹ್ಯಾದ್ರಿ ಮೇಷ್ಟ್ರು ಬರಹ
ಮಕ್ಕಳೆಂದರೆ ಸೊಗಸು – ಯೋಗೀಶ್ ಸಹ್ಯಾದ್ರಿ
ಪ್ರತಿಯೊಬ್ಬರ ವ್ಯಕ್ತಿತ್ವದ ಅಸಲಿ ಪ್ರತಿಭೆ ಅನಾವರಣಗೊಳ್ಳುವುದು ಬಾಲ್ಯದಿಂದಲೇ. ಬಾಲ್ಯ ಎಂದಾಕ್ಷಣ ನಮ್ಮೆಲ್ಲರಿಗೂ ನೆನಪಾಗುವುದು ನಾವು ಮಕ್ಕಳಾಗಿದ್ದಾಗ ನಮ್ಮ ತುಂಟಾಟ-ರಂಪಾಟಗಳು, ಸ್ನೇಹಿತರ ಜೊತೆಗಿನ ಜಟಾಪಟಿಗಳು, ಅಮ್ಮನ ಸೀರೆ ಸೆರಗು ಹಿಡಿದು ಪೀಡಿಸಿ ಕೊನೆಗೂ ಹಠ ತೊಟ್ಟು ಗಿಟ್ಟಿಸಿಕೊಂಡ ಸಿಹಿ-ತಿನಿಸುಗಳು, ಅಪ್ಪನ ಜೇಬಿಗೆ ಕತ್ತರಿ ಹಾಕಿ ಪಡೆದುಕೊಂಡ ಚಂದದ ಆಟಿಕೆಗಳು, ಅಜ್ಜನ ಹೆಗಲ ಮೇಲೆ ಕೂತು ಆನಂದಿಸಿದ ಸವಾರಿ, ಅಜ್ಜಿಯ ಕುತೂಹಲಕಾರಿ ಕಥೆಗಳು… ಹೀಗೆ ಹತ್ತು- ಹಲವು. ಜೊತೆ-ಜೊತೆಗೆ ಮೊದಲು ಗೀಚಿದ ಅಕ್ಷರಗಳು, ಅವಿಸ್ಮರಣೀಯ ಶಾಲೆ, ಮುಗ್ಧ ಗೆಳೆತನ, ಓದು ಮತ್ತು ನೆಚ್ಚಿನ ಗುರುಗಳು..! ಒಟ್ಟಿನಲ್ಲಿ ನಮ್ಮ ಬಾಲ್ಯದ ಪಟಗಳನ್ನು ತಿರುವಿ ನೋಡಿದರೆ ಬಿಗ್‍ಬಾಸ್ ಲಕ್ಜರಿ ಬಜೆಟ್ ಪ್ಯಾಕ್‍ನಂತೆ ಕಾಣಿಸುತ್ತದೆ. ಚಿಲಿ ದೇಶದ ಪ್ಯಾಬ್ಲೊ ನೆರುಡಾ ಕವಿಯ ‘ಸೇಬು ಹಣ್ಣು ಮತ್ತು ಅಂದದ ಹಾರಾಡುವ ಚಿಟ್ಟೆಯ’ ಕಲ್ಪನೆಯಂತೆ ಕೋಟಿ-ಕೋಟಿ ಕನಸುಗಳನ್ನು ಹೊತ್ತು ಕಾಣದಾ ಕಡಲಿಗೆ ಅದೆಷ್ಟೋ ಬಾರಿ ಹಂಬಲಿಸುವಂತೆ ಮಾಡಿದೆ ನಮ್ಮ ಮುದ್ದು ಬಾಲ್ಯ. ಮನದೊಳಗಡಗಿದ್ದ ನೂರಾರು ಪ್ರಶ್ನೆಗಳಿಗೆ ಉತ್ತರ ಸಿಗದೆ ಹಪಹಪಿಸಿದ ಕ್ಷಣಗಳು ಒಂದೆಡೆಯಾದರೆ, ಅಕ್ಕರೆಯ ಆಲಾಪದ ಜೊತೆ-ಜೊತೆಗೆ ಸಾಮಾಜಿಕ ಏರಿಳಿತಗಳನ್ನು ದೂರದಿಂದ ಕಂಡು ತವಕಪಟ್ಟಿದ್ದು ಮತ್ತೊಂದೆಡೆ. ಒಮ್ಮೆ ಈಗ ಯೋಚಿಸಿ ನೋಡಿ, ಪ್ರತಿಯೊಬ್ಬರ ಬಾಲ್ಯ ಬದುಕನ್ನೆ ಮೀರಿಸಿದೆ..! ಸೋಜಿಗವಲ್ಲವೇ…?
ನಿಜವಾಗಿಯೂ ಮಕ್ಕಳೆಂದರೆ ಸೊಗಸು. ಮಕ್ಕಳಿಲ್ಲದ ಮನೆ, ವಿದ್ಯಾರ್ಥಿಗಳಿಲ್ಲದ ಶಾಲೆ ಎಂದಿಗೂ ಭವಿಷ್ಯವಿಲ್ಲದ ದೇಶವಿದ್ದಂತೆ. ಸುಂದರವೂ ಅಲ್ಲ, ವಿಸ್ಮಿತೆಯೂ ಅಲ್ಲ, ಸತ್ಯವೂ ಅಲ್ಲ. ಹಾಗಾಗಿ ಮಕ್ಕಳೆಂದರೆ ಭವ್ಯ ಭವಿಷ್ಯ ಮಾತ್ರವಲ್ಲ ಬದಲಾಗಿ ಕಬ್ಬಿಣದ ಸಲಾಖೆಯಂತಹ ಗಟ್ಟಿ ಸಾಹಿತ್ಯದ ಪಂಜುಗಳು. ನಿಮ್ಮಲ್ಲಿ ಅಮೃತದ ಮನಸ್ಸಿದ್ದರೆ ಮಕ್ಕಳಲ್ಲಿ ದೇವರನ್ನು ಕಾಣಬಹುದು, ಸ್ವಾರ್ಥದ ಪೊರೆಯನ್ನು ಕಳಚಿ ಸತ್ಯದ ನೆಲೆಯನ್ನು ಕಾಣಬಹುದು, ಇಲ್ಲವಾದರೆ ಕೇವಲ ಜೀವದ ಬೊಂಬೆಗಳನ್ನು ಮಾತ್ರ ಬಿಂಬಿಸಬಹುದು. ಮಕ್ಕಳನ್ನು ಹೃದಯದಿಂದ ಪ್ರೀತಿಸಿ ನೋಡಿ. ಏಕೆಂದರೆ ಮಕ್ಕಳ ಪ್ರೀತಿ ಅಕ್ಕರೆಯ ಸ್ವಾಧ, ಅವರ ಮಾತು ಹಕ್ಕಿಗಳ ಚಿಲಿಪಿಲಿ, ಮಕ್ಕಳನ್ನು ಒಟ್ಟುಗೂಡಿಸಿ ಅವರಿಗಾಗಿ ಆಯೋಜಿಸುವ ಸಮ್ಮೇಳನ ನಿಜ ಅರ್ಥದಲ್ಲಿ ಪಕ್ಷಿಗಳ ಕಲರವ, ಜ್ಞಾನದ ಹಂಚಿಕೆ, ಪ್ರತಿಭೆಗಳ ಅನಾವರಣ… ಒಟ್ಟಿನಲ್ಲಿ ಮನಸ್ಸಿಗೆ ಹಬ್ಬವೇ ಸರಿ..!
ಇಂದಿನ ಆಧುನಿಕ ಬದುಕು ಮಕ್ಕಳ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಆತಂಕವನ್ನು ಸೃಷ್ಠಿಸುತ್ತಿದೆ. ಮೊಬೈಲ್/ಜಂಗಮವಾಣಿ, ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳು ಇನ್ನಿಲ್ಲದಂತೆ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಾ ಎಳೆಯ ಮನಸ್ಸುಗಳ ಮೇಲೆ ಅತಿಯಾದ ದುಷ್ಪರಿಣಾಮಗಳನ್ನು ಬೀರುತ್ತಿರುವ ಸೂಚನೆಗಳು ಸಂಸ್ಕೃತಿ-ಚಿಂತಕರ ನಿದ್ದೆಗೆಡಿಸುವಂತೆ ಮಾಡಿವೆ. ತಂದೆ-ತಾಯಂದಿರು ಮಕ್ಕಳ ತಾತ್ಕಾಲಿಕ ಆನಂದದ ಕ್ಷಣಗಳನ್ನು ಅನುಭವಿಸಲು ಬಯಸುವ ಬದಲಾಗಿ ಮಕ್ಕಳನ್ನು ಪುಸ್ತಕ ಪ್ರೀತಿಗೆ ಒರೆ ಹಚ್ಚಬೇಕಾಗಿದೆ. ಏಕೆಂದರೆ ಸಾಹಿತ್ಯ ಬದುಕನ್ನು ಪ್ರೀತಿಸುವ ಗುರಿಯ ಲೇಪನ ಹಚ್ಚಿ ಬದುಕು ರೂಪಿಸಿಕೊಳ್ಳುವ ಸ್ವಾವಲಂಬಿತನವನ್ನು ಕಟ್ಟಿಕೊಡುತ್ತದೆ. ವಿದ್ಯಾರ್ಥಿಗಳು ‘ಫಾಸ್ಟ್ ಫುಡ್’ ಸಂಸ್ಕೃತಿಯ ಗೀಳಿಗೆ ಬೀಳದೆ ಆರೋಗ್ಯಕರ ಸಮಾಜವನ್ನು ತಮಗಾಗಿ ನಿರ್ಮಾಣ ಮಾಡಿಕೊಳ್ಳಬೇಕಿದೆ. ಯಾವುದೇ ಟಿ.ವಿ ಚಾನೆಲ್‍ಗಳ ರಿಯಾಲಿಟಿ ಶೋಗಳು ಜೀವನದ ತತ್ವಾದರ್ಶಗಳನ್ನು ಮನಸ್ಸಿನಲ್ಲಿ ನೆಲೆಯೂರಿಸಲಾರವು, ಸ್ಪಷ್ಟ ನಿಲುವುಗಳನ್ನು ಬಿಂಬಿಸಲಾರವು, ಹಾಗೆಯೇ ಯಾವುದೇ ವಿದ್ಯಾರ್ಥಿಯ ಕನಸುಗಳನ್ನು ಚಿಗುರೊಡೆಸಿ ಪೋಷಿಸಲಾರವು ಎಂಬುದು ನೆನಪಿರಲಿ. ಪ್ರತಿಯೊಬ್ಬ ಮಕ್ಕಳು ಬಾಲ್ಯದ ಮೊಗ್ಗುಗಳು. ಸುವಾಸನೆ ಬೀರುವ ಹೂಗಳಂತಾಗಲು ಆಶಿಸಬೇಕಿದೆ, ಪೋಷಿಸಬೇಕಿದೆ, ಪ್ರೀತಿಸಬೇಕಿದೆ. ಹಾಳಾಗಿ ಕೆಟ್ಟು ಗಿಡದಿಂದ ಕೈತಪ್ಪಿ ಉದುರಿಹೋಗದಂತೆ ಕಾಪಾಡಬೇಕಿದೆ. ಶಿಕ್ಷಣ ಹಾಗೂ ಸಾಹಿತ್ಯಕ್ಕೆ ಆ ಶಕ್ತಿಯಿದೆ. ಶಿಕ್ಷಣ ಸ್ಥಾಯಿಯಾದರೆ ಸಾಹಿತ್ಯ ಚಿರಸ್ಥಾಯಿ ಮತ್ತು ಮಕ್ಕಳ ಸಾಹಿತ್ಯ ವಿದ್ಯಾರ್ಥಿಗಳ ಪಾಲಿನ ದೊರೆಸಾನಿಯಿದ್ದಂತೆ.
ವಿಲಿಯಂ ವಡ್ರ್ಸ್‍ವರ್ತ್ ಎಂಬ ಆಂಗ್ಲ ಕವಿಯ ಮಾತನ್ನು ನೆನಪಿಸಿಕೊಳ್ಳುವುದಾದರೆ ‘ನಾನು ಮತ್ತೆ ನನ್ನ ಬಾಲ್ಯಕ್ಕೆ ಹಿಂತಿರುಗಬೇಕಿದೆ’ ಹಾಗೂ ‘ಮಗು ಮನುಷ್ಯನ ತಂದೆಯಂತೆ ಎಂದು ಹೇಳುತ್ತಾನೆ. ಆದ್ದರಿಂದ ಬಾಲ್ಯ ಎಲ್ಲರಿಗೂ ಅಚ್ಚುಮೆಚ್ಚು. ಅನುಭವಿಸಿದ ಮೇಲೆ ಮತ್ತೆಂದೂ ಸಿಗದ ಒಲುಮೆಯ ಚಿಲುಮೆ. ಮಕ್ಕಳಲ್ಲಿ ದೈವತ್ವವಿದೆ ಮತ್ತು ಉತ್ತಮ ಆಲೋಚನೆಗಳನ್ನು ಅವರಲ್ಲಿ ಬೆಳೆಸುವುದರ ಮೂಲಕ ದೈವತ್ವದ ಸ್ವರೂಪವನ್ನು ಎಚ್ಚರಿಸಬೇಕಿದೆ. ವಿದ್ಯೆ ದೊರಕುವುದು ಮಕ್ಕಳಿಗೆ ಮಾತ್ರ, ನಂತರ ಮನುಷ್ಯ ಬೆಳೆದ ಹಾಗೆ ಅದರ ಆಂತರ್ಯ ಹಿರಿದಾಗುತ್ತಾ ಹೋಗುತ್ತದೆ. ವಿದ್ಯಾರ್ಥಿಗಳು ಆಧುನಿಕ ಮಾಧ್ಯಮಗಳ ಬಿಕ್ಕಟ್ಟಿನ ಇಕ್ಕಟ್ಟಿನಿಂದ ಹೊರಬಂದು ಪರಿಸರ ಪ್ರಜ್ಞೆಯನ್ನು ಅರಿತುಕೊಳ್ಳುವುದರ ಜೊತೆಗೆ ಸಾಹಿತ್ಯ ಪ್ರೇಮವನ್ನು ಬೆಳೆಸಿಕೊಂಡು ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ವೀರರಾಗಲಿ, ಹಾಗೆ ಆದಾಗ ಮಾತ್ರ ‘ಮಕ್ಕಳೆಂದರೆ ಸೊಗಸು..! ಎಂದು ಆಶಿಸುತ್ತಾ…
ಲೇಖಕರು:
ಯೋಗೀಶ್ ಸಹ್ಯಾದ್ರಿ
ಪ್ರಾಂಶುಪಾಲರು ಹಾಗೂ ಅಧ್ಯಕ್ಷರು,
ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು,
ಚಿತ್ರದುರ್ಗ.