ಪ್ರಮುಖ ಸುದ್ದಿ
ಮರಳು ಮಾಫಿಯಾ : ‘ಆಡಾಡತ’ ಜೀವ ಕಳೆದುಕೊಂಡ ಮೂವರು ಮಕ್ಕಳು!
ಕೊಪ್ಪಳ : ಕೆಲ ದಿನಗಳ ಹಿಂದಷ್ಟೇ ಕೊಪ್ಪಳ ನಗರದ ಹಾಸ್ಟಲ್ ಒಂದರಲ್ಲಿ ವಿದ್ಯುತ್ ಅವಘಡಕ್ಕೆ ಐವರು ಮಕ್ಕಳು ಬಲಿಯಾಗಿದ್ದರು. ಆ ಕಹಿ ಘಟನೆ ಹಸಿರಾಗಿರುವಾಗಲೇ ಕನಕಗಿರಿ ತಾಲೂಕಿನ ನವಲಿ ಗ್ರಾಮದ ಬಳಿ ಮರಳಿನ ದಿಬ್ಬ ಕುಸಿದು ಬಿದ್ದು ಆಟವಾಡುತ್ತಿದ್ದ ಮೂವರು ಮಕ್ಕಳು ಬಲಿಯಾದ ದಾರುಣ ಘಟನೆ ನಡೆದಿದೆ. ಇಟ್ಟಿಗೆ ಕಾರ್ಖಾನೆಯಲ್ಲಿ ಕೂಲಿ ಕೆಲಸಕ್ಕಾಗಿ ಬಂದಿದ್ದ ಪುನಾ ಮೂಲದ ಕುಟುಂಬದ ಮೂವರು ಮಕ್ಕಳು ಸಾವಿಗೀಡಾಗಿದ್ದಾರೆ. ಸೋನು (7) , ಸವಿತಾ (2) ಮತ್ತು ಕವಿತಾ (2) ಕುಸಿದು ಬಿದ್ದ ಮರಳಿನ ದಿಬ್ಬದ ಅಡಿಗೆ ಸಿಲುಕಿ ಕೊನೆಯುಸಿರೆಳೆದಿದ್ದಾರೆ.
ನವಲಿ ಗ್ರಾಮ ಭಾಗದಲ್ಲಿ ಅಕ್ರಮ ಮರಳು ಮಾಫಿಯಾ ತಡೆಗೆ ಅನೇಕ ಸಲ ಗ್ರಾಮೀಣ ಭಾಗದ ಜನ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ನಿಯಮ ಮೀರಿ ಮರಳು ದಂಧೆಕೋರರು ಮರಳು ದಂಧೆಯಲ್ಲಿ ತೊಡಗಿದ್ದು ದುರ್ಘಟನೆಗೆ ಕಾರಣವಾಗಿದೆ ಎಂಬುದು ಜನರ ಆರೋಪವಾಗಿದೆ. ಕನಕಗಿರಿ ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.