ಅಂಧನ ಸತಿಯ ಕೋಪಕ್ಕೆ ಕರಗಿದ ಯದು ವಂಶ!
ಹದಿನೆಂಟು ದಿನದ ಮಹಾಯುದ್ಧದ ಮಹಾ ವಿನಾಶದ ನಂತರ ಶ್ರೀಕೃಷ್ಣನೊಡನೆ ಒಘವತಿ ನದಿಯಲ್ಲಿ ಶುದ್ಧ ರಾಗಿ ಚೈತನ್ಯ ಪೂರ್ಣರಾಗಿ ಮರಳುವುದಕ್ಕೆ ಬಂದ ಪಾಂಡವರು ವಿಜಯದ ಸಂತಸವನ್ನು ಅನುಭವಿಸುವ ಪರಿಸ್ಥಿತಿಯಲ್ಲಿರಲಿಲ್ಲ!
ಧರ್ಮರಾಯನ ಮುಖದಲ್ಲಿ ದುಗುಡ ಮನೆಮಾಡಿತ್ತು. ಇದಕ್ಕೆ ಮೂಲಕಾರಣ ಧೃತರಾಷ್ಟ್ರ ಮತ್ತು ಗಾಂಧಾರಿಯರನ್ನು ಹೇಗೆ ಎದುರಿಸುವುದು ಎನ್ನುವುದು! ಗಾಂಧಾರಿಗೆ ಮುಖತೊರಿಸುವುದು ಹೇಗೆ? ನಾಭಿಯಿಂದ ಕೆಳಗೆ ಹೋಡೆದು ನನ್ನ ಮಗನನ್ನು ಗಧಾಯುಧ್ಧದಲ್ಲಿ ಹೇಗೆ ಕೊಂದಿರಿ ಧರ್ಮನಂದನ? ದುರ್ಯೋಧನನನ್ನು ಮೊಸದಿಂದ ಕೊಂದು ಗೆದ್ದು ಮೆರೆಯುವಷ್ಟು ಸಿಂಹಾಸನದ ಮೋಹವಿತ್ತೇ ನಿನಗೆ? ಹಾಗಾದರೇ ನಿನ್ನ ಧರ್ಮ,ಸತ್ಯ ಎಲ್ಲವೂ ಸತ್ತು ಹೋಯಿತೇ? ದುಶ್ಯಾಸನನ ರಕ್ತ ಕುಡಿದನಂತಲ್ಲಾ ನಿನ್ನ ತಮ್ಮ ಭೀಮ! ಆಗ ನನ್ನ ಮಗ ಸತ್ತು ಹೋಗಿದ್ದನೋ ಅಥವಾ ಇನ್ನು ಸ್ವಲ್ಪ ಜೀವ ಉಳಿದಿತ್ತೋ? ಎಂದು ಕೇಳಿದರೇ… ? ನೂರು ಮಕ್ಕಳನ್ನು ಕಳೆದುಕೊಂಡ ಮಹಾಸಾಧ್ವಿ ದೊಡ್ಡಮ್ಮನನ್ನು ಹೇಗೆ ಎದುರಿಸುವುದು.. ಎನ್ನುವ ದುಗುಡ ಧರ್ಮರಾಯನನ್ನು ಕಾಡುತ್ತಿತು.! ವಿದ್ಯೆ ಕಲಿಸಿದ ಗುರು, ಎತ್ತಿ ಆಡಿಸಿದ ಅಜ್ಜ, ನೂರು ಜನ ದಾಯದಿಗಳು, ಅಸಂಖ್ಯ ರಾಜರು,ಸೈನಿಕರು ಇವರೆಲ್ಲರ ಶವದ ಮೇಲೆ ಕಟ್ಟುವ ಸಾಮ್ರಾಜ್ಯ ನೆಮ್ಮದಿಯನ್ನು ನೀಡಲು ಸಾಧ್ಯವೇ? ನಾಳೆ ಹಸ್ತಿನಾವತಿಯಲ್ಲಿ ಎಂಥಹಾ ಸ್ವಾಗತವನ್ನು ನೀರಿಕ್ಷಿಸಬಹುದು? ಎನ್ನುವ ಯೋಚನೆಗಳೆಲ್ಲಾ ಸೇರಿ ವಿಜಯದ ಸಂತೋಷದ ಸಂಕೇತವು ಅವನ ಮುಖದಲ್ಲಿ ಇಲ್ಲದಂತೆ ಮಾಡಿತ್ತು
ಅಷ್ಟರಲ್ಲೇ ಅಲ್ಲಿಗೆ ಬಂದ ಕೃಷ್ಣ, ಧರ್ಮರಾಯನ ಮುಖ ನೋಡುತ್ತಲೇ ಎಲ್ಲವನ್ನು ಅರಿತಿದ್ದ! ಕಣ್ಣಿನಲ್ಲೇ ಸಾಂತ್ವನ ಹೇಳಿದ್ದ!
ಮರುದಿನ ಹಸ್ತಿನಾವತಿಯಲ್ಲಿ ಧೃತರಾಷ್ಟ್ರನ ಕಾಲಿಗೆರಗಿದ ಧರ್ಮರಾಯನಿಗೆ ಅಂಧ ದೊರೆ ಹೇಳಿದ್ದು “ನನ್ನ ನೂರು ಮಕ್ಕಳನ್ನು ಕೊಂದ ಭೀಮನನ್ನು ತಬ್ಬಿಕೊಳ್ಳುವ ಆಸೆಯಿದೆ ನನಗೆ”! ಧರ್ಮರಾಯ ಭೀಮನನ್ನು ಕರೆದಾಗ ಕೃಷ್ಣ ಕಣ್ಣು ಸನ್ನೆ ಮಾಡಿ ಹೋಗದಂತೆ ತಡೆದ!
ಭೀಮನ ಬದಲು ಭೀಮನಷ್ಟೇ ಏತ್ತರ ಮತ್ತು ಗಾತ್ರದ ಲೋಹದ ಪ್ರತಿಮೆಯನ್ನು ಧೃತರಾಷ್ಟ್ರನ ಮುಂದೆ ನಿಲ್ಲಿಸಿದ ‘ನೂರು ಆನೆಗಳ ಬಲವನ್ನು ತೋಳಿನಲ್ಲಿ ಹೊಂದಿದ್ದ ಅಂಧ ರಾಜ ಆ ಪ್ರತಿಮೆಯನ್ನು ತಬ್ಬಿಕೊಂಡಾಗ ಅದು ಮುರಿದು ನೂರು ಚುರಾಗಿತ್ತು!
’ನಾನೇ ನನ್ನ ಕೈಯಾರೆ ಭೀಮನನ್ನು ಕೊಂದುಬಿಟ್ಟೆನಲ್ಲಾ‘ ಎಂದು ಪಶ್ಚಾತ್ತಾಪ ಪಡುತ್ತಿದ್ದ ಧೃತರಾಷ್ಟ್ರನನ್ನು ಕೃಷ್ಣ ಸಮಾಧಾನ ಮಾಡಿದ! ನಿಜ ವಿಷಯ ತಿಳಿಸಿದ! ಧರ್ಮರಾಯನಿಗೆ ಕೃಷ್ಣ ಹೇಳಿದ “ಕೃತಕ ಭೀಮನ ಕೊಂದು
ತಗ್ಗಿತು ಕ್ಷೀತಿಪತಿಯ ರೋಷಾಗ್ನಿ!!”
ಪುತ್ರಶೋಕ ನಿರಂತರ! ಆದರೆ ಧೃತರಾಷ್ಟ್ರನ ಕೋಪ ಕರಗಿತು ಎಂದ!
ಗಾಂಧಾರಿಯೂ ತನ್ನ ನೂರು ಪುತ್ರರ ಮರಣದಿಂದ ಅತ್ಯಂತ ಕರುಣಾಜನಕ ಸ್ಥಿತಿಯಲ್ಲಿದ್ದಳು! ಧರ್ಮರಾಯ ಗಾಂಧಾರಿಯ ಕಾಲಿಗೆರಗಿದ, ಕೈ ಮುಗಿದು ನಿಂತ! ತಾಯಿ ನಮ್ಮನ್ನು ಕ್ಷಮಿಸಿಬಿಡು ಎಂದು ಪರಿಪರಿಯಾಗಿ ಬೇಡಿಕೊಂಡ! ತಲೆತಗ್ಗಿಸಿ ಕಣ್ಣೀರು ಸುರಿಸುತ್ತಿದ್ದ ಗಾಂಧಾರಿಗೆ ಕಣ್ಣಿಗೆ ಕಟ್ಟಿದ ಪಟ್ಟಿಯ ತುದಿಯಿಂದ ಧರ್ಮರಾಯನ ಕಾಲಿನ ಕಿರುಬೆರಳು ಕಾಣಿಸಿತು! ಆಕೆಯ ಕಣ್ಣೀರಿಗೆ,ಕೋಪಕ್ಕೆ ಆಕೆ ನೋಡಿದ ಧರ್ಮರಾಯನ ಕಾಲುಬೆರಳು ಸುಟ್ಟು ಕರಕಲಾಯಿತು!
ಆದರೆ ಆಕೆಗೆ ಕೋಪವಿದ್ದದ್ದು ಪಾಂಡವರ ಮೇಲಲ್ಲ, ಏಕೆಂದರೆ ಆಕೆಗೆ ಗೊತ್ತಿತ್ತು ಪಾಂಡವರು ಕೇವಲ ಗೊಂಬೆಗಳು ಸೂತ್ರಧಾರಿ ಕೃಷ್ಣ ಎಂದು! ಆತ ಮನಸ್ಸು ಮಾಡಿದ್ದಿದ್ದರೆ ಖಂಡಿತವಾಗಿಯೂ ಎಲ್ಲರನ್ನೂ , ಎಲ್ಲವನ್ನೂ ಉಳಿಸಬಹುದಿತ್ತು! “ಮಮ ಪ್ರಾಣಾಹಿ ಪಾಂಡವ:“ ಎನ್ನುತ್ತಾ ಕುರುಕುಲದ ವಿನಾಶ ಮಾಡಿದ! ಇದೆಲ್ಲಾ ಮನಸ್ಸಿನಲ್ಲಿ ಓಡುತ್ತಿದ್ದಂತೆ ಗಾಂಧಾರಿ ಕೋಪದಿಂದ ಕುದಿಯತೊಡಗಿದಳು!
“ಹೇ, ಕೃಷ್ಣಾ ಒಮ್ಮೆ ಕುರುಕ್ಷೇತ್ರದ ಯುದ್ಧ ಭೂಮಿಯನ್ನು ನೋಡು. ಅತಿರಥ ಮಹಾರಥರು ಸತ್ತು ಬಿದ್ದಿದ್ದಾರೆ. ಅವರ ಪತ್ನಿಯರು ಮಕ್ಕಳು ಅನಾಥರಾಗಿ ಶವದ ಎದುರು ಕೂತು ರೋಧಿಸುತ್ತಿದ್ದಾರೆ. ಶವಗಳನ್ನು ತಿನ್ನಲು ನಾಯಿ, ನರಿಗಳು ಕಾಯುತ್ತಿವೆ. ರಣಹದ್ದುಗಳು ಆಗಸದಲ್ಲಿ ಹಾರಾಡುತ್ತಿವೆ. ಇದಕ್ಕೆಲ್ಲಾ ಕಾರಣ ಯಾರು ಗೊತ್ತೇ? ನೀನು. ತೊಡೆ ಮುರಿದುಕೊಂಡು ಸತ್ತು ಬಿದ್ದಿದ್ದ ದುರ್ಯೋಧನನ ಬಳಿ ಕುಳಿತು ಅಳುತ್ತಿರುವ ಭಾನುಮತಿಯನ್ನು ಯಾರು ಸಮಾಧಾನ ಮಾಡುವವರು? ತಮ್ಮನಿಂದ ಅಣ್ಣನನ್ನು ಕೊಲ್ಲಿಸಿ ಅಧ್ಯಾವ ಧರ್ಮವನ್ನು ಉಳಿಸಿದೆ? ಇದನ್ನೆಲ್ಲಾ ನೀನು ನಿಲ್ಲಿಸಬಹುದಿತ್ತು.
ಆದರೆ ನೀನು ಪಾಂಡವರ ಪರ ಪಕ್ಷಪಾತಿಯಾದೆ. ದಾಯಾದಿಗಳು ಪರಸ್ಪರ ಹೊಡೆದಾಡಿಕೊಂಡು ಸಾಯುವುದನ್ನು ನೀನು ಕಣ್ಣಾರೆ ನೋಡುತ್ತಾ ನಿಂತೆಯೇ ವಿನಹ ಅದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ನನ್ನ ನೂರು ಮಂದಿ ಮಕ್ಕಳು ಸತ್ತು ಹೋದರು. ನನ್ನ ನೂರು ಮಕ್ಕಳಲ್ಲಿ ಒಬ್ಬರೂ ಬದುಕುವುದಕ್ಕೆ ಅರ್ಹರಾಗಿರಲಿಲ್ಲವೇ? ನಿನ್ನ ಮೇಲೆ ಉಕ್ಕಿ ಬರುತ್ತಿರುವ ಕೋಪವನ್ನು ನಿಗ್ರಹಿಸುವ ಬಗೆ ನನಗೆ ತಿಳಿಯುತ್ತಿಲ್ಲ!
ಸಮಾಧಾನಿಸುವ ಧನಿಯಲ್ಲಿ ಕೃಷ್ಣ ನುಡಿದ. .ತಾಯಿ ನಾನು ಸಂಧಾನಕ್ಕೆ ಬಂದಾಗ ಸಾರಿ ಸಾರಿ ಹೇಳಿದೆ ಯುದ್ಧ ಬೇಡ ಎಂದು! ನಿನ್ನ ಮಗ ಕೇಳಲಿಲ್ಲ! ಪಾಂಚಾಲಿಯ ಸೆರಗಿಗೆ ಕೈ ಹಾಕಿದಾಗಲೇ ನಿನಗೆ ತಿಳಿದಿರಲಿಲ್ಲವೇ ತಾಯಿ ಕುರುಕುಲದ ವಿನಾಶ ನಿಶ್ಚಿತ ಎಂದು! ಕಪಟ ದ್ಯೂತ ವಿನಾಶದ ಮುನ್ನುಡಿಯಾಗಿರಲಿಲ್ಲವೇ ತಾಯಿ! ಕೈ ಮುಗಿದು ಕೇಳಿದ ಕೃಷ್ಣ!
ಆಗ ಗಾಂಧಾರಿ ಕಣ್ಣೀರು ಸುರಿಸುತ್ತಾ. .ಕೃಷ್ಣ, ನಿನಗೆ ಕೇವಲ ಸರಿ ತಪ್ಪಿನ ಲೆಕ್ಕ ಗೊತ್ತೇ ಹೊರತು ಕರುಳಿನ ಸಂಕಟದ ಲೆಕ್ಕ ಗೊತ್ತಿಲ್ಲಾ! ನನ್ನ ಒಂದೇ ಒಂದು ಮಗನನ್ನು ಉಳಿಸದ ನೀನು. .ನನ್ನ ಅಳಿಯ ಜಯದ್ರಥನನ್ನು ಕೊಲಿಸಿ ನನ್ನ ಮಗಳು ದುಶ್ಯಲೇಯ ವೈಧವ್ಯಕ್ಕೂ ಕಾರಣನಾದೆ!
ಕೃಷ್ಣ! ನನ್ನ ಪತಿವ್ರತಾ ಶಕ್ತಿ ನಿಜವಾಗಿದ್ದರೇ.. ನಾನು ಪರಶಿವನ ಪರಮ ಭಕ್ತೆಯಾಗಿದ್ದಾರೆ. . ಇಂದಿನಿಂದ 36 ವರುಷಕ್ಕೆ ನನ್ನ ಈ ಶಾಪ ನಿಜವಾಗಲಿ! ! ಎನ್ನುತ್ತಾ ಕಠೋರವಾಗಿ ಕಣ್ಣೀರು ಸುರಿಸುತ್ತಾ ನುಡಿದಳು! ಎಲೇ ಮುರಾಂತಕ! ದಾಯಾದಿ ಕಲಹದಿ ಕೊಲಿಸಿದೆ! ನನ್ನ ಮಕ್ಕಳ, ಕುಲವಧುಗಳ, ಅಷ್ಟಾದಶ,ಅಕ್ಷೌಹಿಣಿಯ ನಾಯಕರ!!
ಲಲನೆಯರ ಬಲೂಶೋಖ ನಿನ್ನಯ ಕುಲವ ನೀಗಿಸಲಿ!!
ನಿನ್ನ ಪ್ರೀತಿಯ ದ್ವಾರಾಕೆಯ ತುಂಬಾ ವಿಧವೆಯರೇ ತುಂಬಿ ಹೋಗಲಿ!
ನನ್ನ ಹಸ್ತಿನಾವತಿ ಹೇಗೆ ಕಣ್ಣೀರಿನಲ್ಲಿ ಮುಳುಗಿದೆಯೋ ಹಾಗೆ ನಿನ್ನ ದ್ವಾರಕೆಯೂ ಮುಳುಗಿಹೋಗಲಿ!
ಕಪಟ ಯುದ್ಧದಲ್ಲಿ ಎಲ್ಲರನ್ನೂ ಕೊಲಿಸಿದ ನಿನಗೆ .. ಯೋಧರಿಗೆ ಬರುವ ಸಾವು ಬಾರದಿರಲಿ!
ಕೃಷ್ಣ ಈ ಶಾಪದಿಂದ ತುಸು ಖಿನ್ನನಾದರೂ ಸಾವರಿಸಿಕೊಂಡು ನುಡಿದ. .ಮಾತೇ ! ನಿನ್ನ ಮಾತು ಸತ್ಯವಾಗಲಿ ಸಮಾಧಾನ ಚಿತ್ತಳಾಗು ಎನ್ನುತ್ತಾ ಗಾಂಧಾರಿಯ ಕಣ್ಣೀರು ಒರೆಸಿದ! ಕೃಷ್ಣನ ಕಣ್ಣುಗಳು ತುಂಬಿ ಬಂದಿತ್ತು! ನಿಟ್ಟುಸಿರಿನ ಶಬ್ಧ ಮಾತ್ರ ಕೇಳಿಸುತ್ತಿತ್ತು!
– ಸಂಗೀತಾ ವೈದ್ಯ




