ಸಂಗೊಳ್ಳಿ ರಾಯಣ್ಣ ಭವನ ನಿರ್ಮಾಣಕ್ಕೆ 1 ಕೋಟಿ-ದರ್ಶನಾಪುರ
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಸ್ಥಾಪನೆಗೆ 10 ಲಕ್ಷ
ಯಾದಗಿರಿ,ಶಹಾಪುರಃ ದೇಶ ಪ್ರೇಮಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರ ಅಗಾಧ ದೇಶ ಪ್ರೇಮ ಇಂದು ದೇಶದೆಲ್ಲಡೆ ಮೊಳಗುತ್ತಿದೆ. ಪ್ರಸ್ತುತ ದಿನಗಳಲ್ಲಿ ರಾಯಣ್ಣ ಯುವಕರ ಐಕಾನ್ ಆಗಿದ್ದಾರೆ. ಅವರ ಆದರ್ಶ ದೇಶ ಭಕ್ತಿ ಯುವಕರ ಮೈಮನದಲ್ಲಿ ಪುಟಿದೇಳಲಿ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರ 221 ನೇ ಜಯಂತಿ ಅಂಗವಾಗಿ ಬುಧವಾರ ತಾಲೂಕು ಕರ್ನಾಟಕ ಕುರುಬರ ಸಂಘ ಮತ್ತು ಕನಕ ನೌಕರರ ಸಂಘ, ರಾಯಣ್ಣ ಯುವಕ ಸಂಘ ಆಶ್ರಯದಲ್ಲಿ ನಡೆದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಗರದಲ್ಲಿ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಸ್ಥಾಪನೆಗೆ ವಯಕ್ತಿವಾಗಿ 10 ಲಕ್ಷ ರೂ. ನೀಡುವದಲ್ಲದೆ ಶಾಸಕರ ಅನುದಾನದಡಿ 1 ಕೋಟಿ ರೂ.ವೆಚ್ಚದಲ್ಲಿ ಸಂಗೊಳ್ಳಿ ರಾಯಣ್ಣ ಭವನ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.
ರಾಯಣ್ಣನವರು ತಾಯ್ನಾಡಿಗಾಗಿ ತನ್ನ ಪ್ರಾಣವನ್ನು ಲೆಕ್ಕಿಸದೆ ವೀರ ಸೇನಾನಿಯಾಗಿ ಬಲಿದಾನವಾದರು. ಅವರ ಅಪ್ರತಿಮ ಹೋರಾಟ ಇಂದಿಗೂ ಭಾರತೀಯರ ಮನ ಮನೆಯಲ್ಲಿ ಅಚ್ಚಳಿಯದೆ ಅಜರಾಮರವಾಗಿ ಉಳಿದಿದೆ.
ರಾಯಣ್ಣ ದೇಶದ ಜನರ ಆಸ್ತಿ. ಕೇವಲ ಕುರುಬ ಸಮಾಜಕ್ಕೆ ಆತನನ್ನು ಸೀಮಿತಗೊಳಿಸಬೇಡಿ ಎಂದು ಕಿವಿ ಮಾತು ಹೇಳಿದರು. ರೇವಣ್ಣ ಸಿದ್ದೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಮುಖಂಡರಾದ ಮರಿಗೌಡ ಹುಲಕಲ್, ಶರಣಪ್ಪ ಸಲಾದಪುರ ಮಾತನಾಡಿದರು. ತಾಲೂಕಾ ಕುರುಬರ ಸಂಘದ ಅಧ್ಯಕ್ಷ ಡಾ.ಭೀಮಣ್ಣ ಮೇಟಿ ಅಧ್ಯಕ್ಷತೆ ವಹಿಸಿದ್ದರು. ಶಿವಮಾಂತಪ್ಪ ಚಂದಾಪುರ, ಡಾ.ಯಲ್ಲಪ್ಪ ಹುಲಕಲ್, ಡಾ.ಹಯ್ಯಾಳಪ್ಪ, ಶಾಂತಗೌಡ ಸಾದ್ಯಾಪುರ. ತಿರುಪತಿಗೌಡ ಬಾಣಿತಹಾಳ, ಈಶ್ವರ ಕಂದಕೂರ, ಅಯ್ಯಣ್ಣ ಇನಾಂದಾರ್, ಶಿವರಾಜ ಕಂದಕೂರ, ಮಲ್ಲಿಕಾರ್ಜುನ ಕಂದಕೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.