ಪುರ ಪ್ರವೇಶಿಸಿದ ಜೋಡು ಪಲ್ಲಕ್ಕಿಃ ಇಷ್ಟಾರ್ಥ ಈಡೇರಿಕೆಗೆ ಅಡ್ಡ ಮಲಗಿದ ಭಕ್ತಾಧಿಗಳು.!
ಪುರ ಪ್ರವೇಶಿಸಿದ ಜೋಡು ಪಲ್ಲಕ್ಕಿಗಳು, ಶಹಾಪುರದಲ್ಲಿ ಸಂಕ್ರಾಂತಿ ಸಂಭ್ರಮ
ಯಾದಗಿರಿಃ ಪ್ರತಿ ವರ್ಷದಂತೆ ಈ ವರ್ಷವು ಸಂಕ್ರಾಂತಿ ಹಬ್ಬದಂಗವಾಗಿ ಜಿಲ್ಲೆಯ ಶಹಾಪುರ ತಾಲೂಕಿನ ಭೀಮರಾಯನ ಗುಡಿಯ ಬಲಭೀಮೇಶ್ವರ ಮತ್ತು ದಿಗ್ಗಿ ಗ್ರಾಮದ ಸಂಗಮೇಶ್ವರರ ಪಲ್ಲಕ್ಕಿಗಳು ರವಿವಾರ ಬೆಳಗ್ಗೆ ಶಹಾಪುರ ನಗರದ ದಿಗ್ಗಿ ಅಗಸಿ ಮೂಲಕ ಪುರ ಪ್ರವೇಶ ಮಾಡಿದವು.
ಈ ಸಂದರ್ಭದಲ್ಲಿ ಭಕ್ತಾಧಿಗಳು ದಾರಿಯುದ್ದಕ್ಕೂ ನೀರು ನೀಡಿ ನಮಸ್ಕರಿಸಿದರು. ಸಂಪ್ರದಾಯದಂತೆ ಮಹಿಳೆಯರು ಮಕ್ಕಳು ದೇವರ ಪಲ್ಲಕ್ಕಿಗಳ ಮುಂದೆ ಅಡ್ಡಲಾಗಿ ಮಲಗುವ ಮೂಲಕ ತಮ್ಮ ಇಷ್ಟಾರ್ಥ ಈಡೇರಿಕೆಯ ಕೋರಿಕೆಯಿಟ್ಟರು.
ಪಲ್ಲಕ್ಕಿ ಹೊತ್ತ ಭಕ್ತಾಧಿಗಳು ದೇವರ ಹೆಸರಿನಲ್ಲಿ ಜಯಕಾರಿ ಹಾಕುತ್ತಾ ಮಲಗಿದ ಭಕ್ತರನ್ನು ಒಬ್ಬರನ್ನಾಗಿ ದಾಟುತ್ತಾ ಸಾಗಿದರು. ಪಲ್ಲಕ್ಕಿಯಲ್ಲಿದ್ದ ಉತ್ಸವ ಮೂರ್ತಿಗಳ ದರ್ಶನ ಪಡೆದ ಭಕ್ತಾಧಿಗಳು ಪುನೀತ ಭಾವ ವ್ಯಕ್ತಪಡಿಸಿದರು. ಪಲ್ಲಕ್ಕಿಗಳ ಮುಂದೆ ತಿತಿ ಆಡುವವರು, ತೊಗಲಿನ ಚೀಲದಲ್ಲಿ ತುಂಬಿದ ನೀರನ್ನು ಪಿಚಕಾರಿಯಂತೆ ಭಕ್ತರಿಗೆ ಚಿಮುಕಿಸುವ ಮೂಲಕ ಪವಿತ್ರ ಭಾವ ನಿರ್ಮಾಣ ಮಾಡುತ್ತಿದ್ದರು. ಅಲ್ಲದೆ ಪರಸ್ಪರರ ತಿತಿ ಆಡುವವರು ನೀರು ಚಿಮುಕಿಸುವ ಸ್ಪರ್ಧೆಗಿಳಿಯುವುದು ನೋಡಲು ಆಕರ್ಷಕವಾಗಿತ್ತು.
ಜೋಡು ಪಲ್ಲಕ್ಕಿಗಳು ಶಹಾಪುರ ತಾಲೂಕಿನ ಹುರಸಗುಂಡಗಿ ಸಮೀಪದ ಭೀಮಾ ನದಿಗೆ ತೆರಳಿದವು. ಅಲ್ಲಿ ಪವಿತ್ರ ಗಂಗಾ ಸ್ನಾನ ನಡೆಯಲಿದ್ದು, ಧಾರ್ಮಿಕ ಪೂಜಾ ವಿಧಿವಿಧಾನ ಜರುಗಲಿದೆ. ಪುಣ್ಯ ಸ್ನಾನದ ನಂತರ ಸಂಜೆ ವಾಪಾಸ್ ಮರಳುವಾಗ ಮಾರ್ಗ ಮಧ್ಯೆ ಮಡ್ನಾಳ, ಹಳಿಸಗರದಲ್ಲಿ ವಿಶ್ರಾಂತಿ ಪಡೆದು, ನಂತರ ನಗರದ ಮಾರುತಿ ಮಂದಿರದ ಆವರಣ ತಲುಪಲು ಕನಿಷ್ಟ 8 ಗಂಟೆಯಾಗುತ್ತದೆ.
ನಗರದ ಮಾರುತಿ ಮಂದಿರದಲ್ಲಿ ಸಹಸ್ರಾರು ಭಕ್ತರು ಜಮೆಯಾಗಿರುತ್ತಾರೆ, ವಿವಿಧ ಜಿಲ್ಲೆ, ಬೇರೆ ಬೇರೆ ರಾಜ್ಯದಿಂದಲೂ ಭಕ್ತರು ದರ್ಶನಕ್ಕೆ ಆಗಮಿಸಿರುತ್ತಾರೆ. ಇಲ್ಲಿಯೂ ದರ್ಶನಕ್ಕೆ ಕೊಟ್ಟ ಸ್ವಲ್ಪ ಸಮಯ ಮೀಸಲು ನಂತರ, ನಗರದಲ್ಲಿ ಅತ್ಯಾಕರ್ಷಕ ದಿವಟಿಗಳ ನಡುವೆ ರಾತ್ರಿಪೂರ ಸಂಭ್ರಮದ ಮೆರವಣಿಗೆ ನಡೆಯಲಿದೆ.
ಬೆಳಗೆ ಪುಣ್ಯ ಸ್ನಾನಕ್ಕೆ ತಮ್ಮ ಇಷ್ಟದ ಸುಕ್ಷೇತ್ರ, ನದಿ, ಹೊಳೆಗಳಿಗೆ ತೆರಳಿದ್ದ ಭಕ್ತಾಧಿಗಳು ಈ ಸಮಯದಲ್ಲಿ ಹಾಜರಾಗುತ್ತಾರೆ. ಮತ್ತೆ ರಾತ್ರಿ ಜೋಡು ಪಲ್ಲಕ್ಕಿಗಳ ವಿಜೃಂಭಣೆ ಮೆರವಣಿಗೆಯಲ್ಲಿ ಪಾಲ್ಗೊಂಡು ಪಾವಿತ್ರ ಭಕ್ತಿ ಭಾವದ ಮೆರವಣಿಗೆಯಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ.
ಅಲ್ಲದೆ ಬೆಳಗ್ಗೆ ಪಲ್ಲಕ್ಕಿ ಜೊತೆಯು ಅಸಂಖ್ಯಾತ ಭಕ್ತರು ತೆರಳಿದವರು, ಪಲ್ಲಕ್ಕಿಯನ್ನು ಮೂಲ ಸ್ಥಾನಕ್ಕೆ ತಲುಪಿಸುವವರೆಗೂ ಸೇವೆಯಲ್ಲಿರುತ್ತಾರೆ. ಒಟ್ಟಾರೆ ಶಹಾಪುರ ನಗರ ಸಂಕ್ರಾಂತಿ ಸಂಭ್ರಮದಲ್ಲಿ ಮುಳುಗಿದೆ. ಶ್ರೀ ಭೀ.ಗುಡಿ ಬಲಭೀಮೇಶ್ವರ ಮಹಾರಾಜಕೀ ಜೈ.. ಶ್ರೀ ದಿಗ್ಗಿ ಸಂಗಮೇಶ್ವರ ಮಹಾರಾಜಕೀ ಜೈ ಭಕ್ತಿಯ ಜಯಕಾರ ಮೊಳಗುತ್ತಿರುತ್ತವೆ. ನಗರದಲ್ಲಿ ಒಟ್ಟಾರೆ ಇಂದು ರಾತ್ರಿ ಪೂರ ಭಕ್ತಿ ಧಾರ್ಮಿಕ ವಾತವಾರಣ ತುಂಬಿರುವುದು ಸಗರನಾಡಿನ ವಿಶೇಷ.