ಸುಸಜ್ಜಿತ ವಸತಿ ನಿಲಯ ಕಟ್ಟಡ ಸದುಪಯೋಗವಾಗಲಿ-ದರ್ಶನಾಪುರ
5 ಕೋಟಿ ವೆಚ್ಚದ ಕಾಲೇಜು ವಸತಿ ನಿಲಯ ಉದ್ಘಾಟಿಸಿದ ದರ್ಶನಾಪುರ
ಯಾದಗಿರಿ,ಶಹಾಪುರಃ ಶಿಕ್ಷಣಕ್ಕಾಗಿ ಗ್ರಾಮೀಣ ಭಾಗದಿಂದ ಸಾಕಷ್ಟು ವಿದ್ಯಾರ್ಥಿಗಳು ಪಟ್ಟಣಕ್ಕೆ ಆಗಮಿಸುತ್ತಿದ್ದು, ವಸತಿಗಾಗಿ ಪರಿತಪಿಸುವಂತಾಗಿದೆ. ಅಲ್ಲದೆ ಸಮರ್ಪಕವಾಗಿ ವಸತಿ ಸೌಲಭ್ಯ ದೊರೆಯದ ಕಾರಣ ಗ್ರಾಮೀಣ ಭಾಗದ ಸಾಕಷ್ಟು ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತಗೊಂಡಿದ್ದರು. ಪ್ರಸ್ತುತ ಅದಕ್ಕೆಲ್ಲ ಪೂರಕವಾಗಿ ವಸತಿ ನಿಲಯ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ಎನ್‍ಜಿಓ ಕಾಲೊನಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ನಿರ್ಮಿಸಲಾದ ನೂತನ ವಸತಿ ನಿಲಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ವಸತಿ ಶಿಕ್ಷಣ ಸಂಸ್ಥೆಗಳ ಅನುದಾನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ನೂತನ ವಸತಿ ನಿಲಯ ಸೌಲಭ್ಯ ಕಲ್ಪಿಸಲಾಗಿದೆ.
2017 ನೇ ಸಾಲಿನ ಅನುದಾನದಲ್ಲಿ ಅಂದಾಜು 5 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಈ ನಿಲಯ ನಿರ್ಮಾಣ ಮಾಡಲಾಗಿದೆ. ಸುಮಾರು 150 ವಿದ್ಯಾರ್ಥಿಗಳಿಗೆ ಇದು ಅನುಕೂಲವಾಗಲಿದೆ. ವಸತಿ ನಿಲಯದ ಸದುಪೋಗ ಪಡೆದುಕೊಂಡು ಶೈಕ್ಷಣಿಕವಾಗಿ ಉತ್ತಮ ಬೆಳವಣಿಗೆ ಹೊಂದಬೇಕು. ಅಂದುಕೊಂಡ ಗುರಿ ತಲುಪುವ ಮೂಲಕ ಪಾಲಕರ ಮತ್ತು ಗ್ರಾಮದ ಹೆಸರು ತರಬೇಕು.
ಬಾಡಿಗೆ ಮನೆಗಳಲ್ಲಿ ವಸತಿ ನಿಲಯಗಳನ್ನು ನಡೆಸಲಾಗುತಿತ್ತು. ಆಗ ಸೌಲಭ್ಯಗಳ ಕೊರತೆ ಉಂಟಾಗುತಿತ್ತು. ಪ್ರಸ್ತುತ ಸಕಲ ಸೌಲಭ್ಯಗಳಿದ್ದು, ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಂಡು ಅಭ್ಯಾಸ ಮಾಡಬೇಕು. ನಿರಂತರ ಅಧ್ಯಯನ ಸಾಧನೆಗೆ ಪೂರಕವಾಗಲಿದೆ ಎಂದರು.
ಜಿಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್ ಮಾತನಾಡಿ, ವಿದ್ಯಾರ್ಥಿಗಳು ಪರಿಸರ ಸ್ವಚ್ಛತೆಯಾಗಿ ನೋಡಿಕೊಳ್ಳಬೇಕು. ಕೋಣೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಉತ್ತಮ ಶಿಕ್ಷಣ ಪಡೆದುಕೊಂಡು ಉನ್ನತ ಹುದ್ದೆ ಪಡೆದು ಹೆಸರು ಮಾಡಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಯಾದಗಿರಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಂ.ಎಸ್.ಅಲ್ಲಾಬಕ್ಷಾ, ತಾಪಂ ಅಧ್ಯಕ್ಷ ನಾಗಣ್ಣ ಪೂಜಾರಿ, ಮುಖಂಡರಾದ ನಾಗರಾಜ ಮಡ್ಡಿ, ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಹುತಪ್ಪ ಹವಲ್ದಾರ, ನಗರಸಭೆ ಸದಸ್ಯ ಶಿವುಕುಮಾರ ತಳವಾರ ಸೇರಿದಂತೆ ಇತರರಿದ್ದರು.