ಬಸವಭಕ್ತಿ

ಸರ್ವಜ್ಞನ “ಜನ್ಮಸ್ಥಳ”ಕ್ಕಾಗಿ ಆರಂಭವಾಗಿದೆ ಹೋರಾಟ

 

ಸರ್ವಜ್ಞನ ಜನ್ಮಸ್ಥಳಕ್ಕಾಗಿ ಆರಂಭವಾಗಿದೆ ಹೋರಾಟ

ತ್ರಿಪದಿಯ ಬ್ರಹ್ಮ ಎಂದೇ ವಚನಗಳ ಮೂಲಕ ಜನಮಾನಸದಲ್ಲಿ ಅಚ್ಚಾಗಿರುವ ಕವಿ ಸರ್ವಜ್ಞನ ಜನ್ಮಸ್ಥಳದ ಬಗ್ಗೆ ಈಗ ರಾಜ್ಯದಲ್ಲಿ ಹೋರಾಟ ಆರಂಭಗೊಳ್ಳುತ್ತಿದೆ.

ಈಗಾಗಲೇ ಸರಕಾರ ದಾಖಲೆಗಳಲ್ಲಿ ಸರ್ವಜ್ಞನ ಜನ್ಮಸ್ಥಳ ಅಬಲೂರು ಎಂದು ನಮೂದಿಸಿದ್ದು,ಅಬಲೂರು ಅಲ್ಲ ಹಾವೇರಿ ಜಿಲ್ಲೆಯ ಹಿರೆಕೆರೂರ ತಾಲ್ಲೂಕಿನ ಮಾಸೂರು ನಿಜವಾದ ಜನ್ಮಸ್ಥಳವಾಗಿದೆ ಎಂದು ಹಲವಾರು ವಿಶ್ವವಿದ್ಯಾಲಯಗಳ ಸಂಶೋಧಕರು ಹಾಗು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.

ಅಲ್ಲದೇ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಹಳ್ಳಪ್ಪ ತಳವಾರ ಎನ್ನುವವರು ಸರ್ವಜ್ಞನ ಜನ್ಮಸ್ಥಳ ಮಾಸೂರೆ ಎಂದು ಹಲವಾರು ಸರ್ವಜ್ಞನ ವಚನಗಳ ಉಲ್ಲೇಖದೊಂದಿಗೆ ಇದುವರೆಗು ಏಳು ಕೃತಿಗಳನ್ನು ಹೊರತಂದಿದ್ದಾರೆ.ಜೊತೆಗೆ ದಾವಣಗೆರೆಯ ಸಂಶೋಧಕ ಮಂಜಪ್ಪ ಬುರಡೆಕಟ್ಟೆ ಎನ್ನುವವರು ಉತ್ಖನನ ನಡೆಸಿ ಸರ್ವಜ್ಞನ ಜನ್ಮಸ್ಥಳ ಮಾಸೂರು ಎಂದು,ಸರ್ವಜ್ಞನ ವಚನದಲ್ಲಿ ಕಾಣುವ ಕಾಸಿ ವಿಶ್ವನಾಥನ ದೇವಸ್ಥಾನ ಮತ್ತು ಸರ್ವಜ್ಞನ ಸಮಾಧಿಯನ್ನು ಪತ್ತೆ ಹಚ್ಚಿ ಗಮನ ಸೆಳೆದಿದ್ದಾರೆ.

ಇದೆಲ್ಲವನ್ನು ಅರಿತ ಅಲ್ಲಿಯ ಮಾಸೂರಿನ ಜನತೆ ಇಂದು ಮಾಸೂರು ಬಂದ್ ಆಚರಿಸುವ ಮೂಲಕ ಸರಕಾರದ ಗಮನ ಸೆಳೆದು ಸರ್ವಜ್ಞ ಪ್ರಾಧಿಕಾರ ಮಾಸೂರಿನಲ್ಲಿ ಆರಂಭವಾಗಬೇಕೆಂದು ಒತ್ತಾಯಿಸಿದ್ದಾರೆ,ಜೊತೆಗೆ ಸರ್ವಜ್ಞನ ಮಾಸೂರು ಎಂದು ಘೋಷಿಸಲು ಒತ್ತಾಯಿಸುತ್ತಿದ್ದಾರೆ.

ಎಲ್ಲರಿಗು ಒಬ್ಬ ತ್ರಿಪದಿಯ ವಚನಕಾರನಾಗಿ ಚಿರಪರಿಚಿತನಾಗಿರುವ ಸರ್ವಜ್ಞ ಈ ಮುಂದೆ ಜನ್ಮಸ್ಥಳದ ಕಾರಣದಿಂದ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾದರೂ ಅಚ್ಚರಿ ಇಲ್ಲ ಎನಿಸಲಿದೆ.

Related Articles

Leave a Reply

Your email address will not be published. Required fields are marked *

Back to top button