ಆ ಬೆಲ್ಟಿನೇಟು ಇನ್ನೂ ಮರೆವಂತಿಲ್ಲ – ಭಾಗ-9 ಸಾಸನೂರ ಬರಹ
ಬಾಲ್ಯದ ಶಿಕ್ಷಣದ ಹಾದಿ ಮರೆಯಲಿ ಹ್ಯಾಂಗ- ಸಾಸನೂರ ಭಾಗ-09
ಮಲ್ಲಣ್ಣಗೌಡ ಮುತ್ಯಾ ನಮ್ಮ ತಾಯಿಯ ತಂದೆ. ತಾಳಿಕೋಟೆಯ ಪಕ್ಕದ ಊರು ಹಗರಟಗಿಯ ಗೌಡ. ಕಾರಣಾಂತರಗಳಿಂದ ಹಗರಟಗಿ ತೊರೆದು ತಾಳಿಕೋಟೆಯನ್ನ ತನ್ನ ಊರು ಮಾಡಿಕೊಂಡ.
ಅಲ್ಲಿಯ ರಾಜವಾಡೆಯಲ್ಲಿ ಮನೆ ಮಾಡಿಕೊಂಡಿದ್ದ. ನಮ್ಮಾಯಿ ಕಾಶಿಬಾಯಿ ಮತ್ತು ಮಲ್ಲಣ್ಣಗೌಡ ದಂಪತಿಗಳಿಗೆ ಬರೊಬ್ಬರಿ ಹದಿನೇಳು ಮಕ್ಕಳು ಅವರಲ್ಲಿ ಯಾವುದೋ ಕಾರಣಕ್ಕೆ ಒಂಭತ್ತು ಮಕ್ಕಳು ಕಾಲವಾಗಿ ಏಳು ಮಕ್ಕಳು ಉಳಿದರು.
ಜೊತೆಗೆ ಕಾಶಿಬಾಯಿ ಆಯಿಯ ಸಹೋದರರೂ ಸಹ ತಾಳಿಕೋಟೆಗೆ ಓದಲು ಬಂದರು. ಏಳು ಮಕ್ಕಳು ಜೊತೆಗೆ ಐದಾರು ಸಹೋದರರು ಇದ್ದರೂ ಸಹ ಸ್ವಲ್ಪವೂ ಬೇಸರಿಸದೆ ಸಂತಸದಿ ಬದುಕಿದಾಕಿ. ಈಗ ಅಕಿಗಿ ತೊಂಭತ್ತೊಂಭತ್ತು ವಯಸ್ಸು ಸೆಂಚುರಿಗೆ ಇನ್ನೂಂದಾರು ತಿಂಗಳು.
ಮಲ್ಲಣ್ಣಗೌಡ ಮುತ್ಯಾನೂ ಸೆಂಚುರಿ ಬಾರಿಸಿ ಪೆವಿಲಿಯನ್ ಸೇರ್ಯಾನ. ನಾನು ನನ್ನ ವಸತಿ ಶಾಲೆಯಿಂದ ತಾಳಿಕೋಟೆಯ ಸರ್ಕಾರಿ ಗಂಡುಮಕ್ಕಳ ಶಾಲೆಗೆ ಹೋಗುವ ದಾರಿಯಲ್ಲಿ ಅವರ ಮನೆಯಿತ್ತು. ಶಾಲೆಯಲ್ಲಿ ಮಧ್ಯಾಹ್ನ ಆವಾಗ ಪೌಷ್ಠಿಕ ಆಹಾರವಾಗಿ ಎಲ್ಲಾ ಕಾಳುಗಳ ಹಿಟ್ಟಿನ ಮಿಶ್ರಣ ಕೊಡತ್ತಿದ್ದರು.
ಆನೆ ಹೊಟ್ಟೆಗೆ ಅರೆಪಾವಿನ ಮಜ್ಜಿಗೆ ಅನ್ನುವ ಹಾಂಗ ನನ್ನ ಹಸಿವಿಗೆ ಸಾಲುತ್ತಿರಲಿಲ್ಲ. ಕಾಶಿಬಾಯಿ ಆಯಿಯ ಮನೆಗೆ ಹೋಗಿ ಹುಳ್ಳಿ ಕಾಳು ಖಾರಬ್ಯಾಳಿ ಖಟಿ ರೊಟ್ಟಿ ಉಂಡೆ ವಸತಿ ಶಾಲೆಗೆ ಮರಳುತ್ತಿದ್ದೆ. ಎಷ್ಟು ದಿನಾಂತ ಇದೇ ಮಾಡ್ಬೇಕು ನನ್ನೊಳಗಿನ ಮನಸ್ಸು ಏಕತಾನತೆಯಿಂದ ಬೇಜಾರಾಗಿತ್ತು. ಬದಲಾವಣೆ ಬಯಸ್ತಾಯಿತ್ತು.
ವಸತಿ ಶಾಲೆಯ ಪಾಟೀಲ ಸರ್ ಅವರ ಹಿರಿಮಗಳು ಅಮಾಯಕಳಾಗಿದ್ದಳು ಅವಳನ್ನು ತಮ್ಮದೇ ಅಕ್ಕನ ಅನಕ್ಷರಸ್ಥ ಮಗ ರಾಮಣ್ಣನಿಗೆ ಕೊಟ್ಟು ಮದುವೆ ಮಾಡಿದ್ದರು. ರಾಮಣ್ಣ ವಸತಿಶಾಲೆಯ ದೇವರುಗಳನ್ನು ಕಾಯೋದರ ಜೊತೆಗೆ ಹೋದವನ್ನೂ ದೆಕಿರೇಖೀ ಮಾಡ್ಕೊಂಡು ಹಾಯಾಗಿದ್ದ.
ನನ್ನ ಮಿತ್ರ ಪಡೆಗೆ ಅವನನ್ನು ನೋಡಿದರೆ ಹೊಟ್ಟೆಕಿಚ್ಚಾಗುತಿತ್ತು. ವಾರಕ್ಕೆರಡು ಸಲ ಸರ್ಕಾರಿ ಗಂಡುಮಕ್ಕಳ ಶಾಲೆಗೆ ಚಕ್ಕರ್ ಹೊಡೆದು ನಾವೂ ರಾಮಣ್ಣನ ಜೊತೆಗೆ ದನಕಾಯಲು ಹೋಗುತ್ತಿದ್ದೆವು. ಎಮ್ಮೆಗಳ ಡುಬ್ಬದ ಮೇಲೆ ಕುಂತು ಸವಾರಿ ಮಾಡುತ್ತಲೇ ನಾನೇ ವಿಜಯನಗರದ ಅರಸ ಕೃಷ್ಣದೇವರಾಯನಂತೆ ಭಾವಿಸಿಕೊಳ್ಳುತ್ತಿದ್ದೆ. ಎಷ್ಟು ದಿನಾಂತ ಒಬ್ಬನ ಜೀವನ ಖುಷಿಯಿಂದ ಇರ್ತಾದ. ನಮ್ಮ ಕಣ್ಣಾಮುಚ್ಚಾಲೆ ಆಟ ಒಂದು ದಿನ ಪಾಟೀಲ ಸರ್ ಅವರ ಮಗ ಅಶೋಕ ಸರ್ ಗ ಗೊತ್ತಾಯಿತು . ಬಾಗಲ ಸಂದ್ಯಾಗಿನ ಗೂಟದ ಬೆಲ್ಟು ನನ್ನ ಮೈಮ್ಯಾಗಲ್ಲ ತನ್ನ ಮನಸ್ಸಿಗೆ ಬಂದಹಂಗ ಆಡಿತು. ಇನ್ನೂ ಆ ಬೆಲ್ಟಿನೇಟಿನ ಗುರುತುಗಳು ನನ್ನ ಬೆನ್ನಾಗ ಚಂದ ಆವಂದರ ಕಲ್ಪಿಸಿಕೊಳ್ಳಿರಿ ಅದರ ಆಟ ಹ್ಯಾಂಗ ಇರಬಹುದು!
–ಆನಂದಕುಮಾರ ಸಾಸನೂರ.