ಪರಿಶುದ್ಧ ಕಾಯಕ ಶ್ರೀದೇವನಿಗೆ ಪ್ರೀತಿ-ವಿಶ್ವನಾಥ ಸ್ವಾಮೀಜಿ
ಶ್ರಾವಣ ಮಾಸ-ವಿಷೇಶ ಸತ್ಸಂಗ
ಯಾದಗಿರಿ, ಶಹಾಪುರಃ ಶ್ರಾವಣ ಮಾಸ ಹಿಂದೂಗಳಿಗೆ ಪವಿತ್ರವಾದದು. ಪರಮಾತ್ಮನನ್ನು ಹೃದಯದಿಂದ, ಭಕ್ತಿಯಿಂದ, ಸತ್ಕಾರ್ಯಗಳಿಂದ, ಪೂಜಿಸಬೇಕು. ಭಕ್ತಿಯಿಂದ ಈ ಶ್ರಾವಣ ಮಾಸದಲ್ಲಿ ಪೂಜಿಸಿ, ದೇವರ ಕೃಪೆಗೆ ಪಾತ್ರರಾಗಿರಿ ಎಂದು ಪತ್ರಿ ಬಸವೇಶ್ವರ ದೇವಸ್ಥಾನದ ಅರ್ಚಕ ವಿಶ್ವನಾಥ ಸ್ವಾಮೀಜಿ ಹೇಳಿದರು.
ನಗರದ ಹಳೆಪೇಟನಲ್ಲಿರುವ ಮಹಾತ್ಮಾ ಪತ್ರಿ ಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯ ಆಯೋಜಿಸದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶರಣರೆಲ್ಲರೂ ದೇವರೆ ದೇವಾಲಯ ಎಂದು ನಿರ್ಣಯಿಸಿದ್ದರು. ದುಡಿಮೆಯೇ ಪೂಜೆ ಪ್ರತಿಯೊಬ್ಬರು ಕಾಯಕವನ್ನು ಮಾಡಬೇಕು. ಕಾಯಕದಿಂದಲೇ ಜೀವನ ಮುಕ್ತಿ. ಮಾಡುವ ಕೆಲಸ ಮೋಸ ವಂಚನೆಯಿಂದ ಕೂಡಿರಬಾರದು, ಪರಿಶುದ್ಧ ಕಾಯಕ ದೇವನಿಗೆ ಪ್ರೀತಿ ಎಂದರು.
ಆರ್ಎಸ್ಎಸ್ನ ತಾಲೂಕ ಕಾರ್ಯವಾಹ ಸಂಗಮೇಶ ಮುತ್ತಿನ ಮಾತನಾಡಿ, ನಮ್ಮ ದೇಶ ಇಂದಿನ ಆಧುನಿಕ ಪಾಶ್ಚಿಮಾತ್ಯ ಸಂಸ್ಕೃತಿಗೆ ಒಳಪಟ್ಟು ತನ್ನತನವನ್ನು ಕಳೆದುಕೊಳ್ಳುತ್ತಿದೆ ಎಂದು ವಿಷಾಧಿಸಿದರು. ಕಾರಣ ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ದೇಶದ ಇತಿಹಾಸ, ಮಹಾನ್ ಪುರಷರ, ಮಹಾತ್ಮರ ಜೀವನ ಚರಿತ್ರೆ ಬಗ್ಗೆ ಮಕ್ಕಳಿಗೆ ಆಗಾಗ ಬೋಧನೆ ಮಾಡಬೇಕು.
ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸ ನಡೆಯಬೇಕಿದೆ. ಅಂದಾಗ ಮಾತ್ರ ನಮ್ಮ ಸಂಸ್ಕøತಿ ಉಳಿಯಲು ಸಾಧ್ಯವಿದೆ. ಅದನ್ನು ಉಳಿಸುವ ಚಿಂತನೆಗಳು ನಡೆಯಬೇಕಿದೆ. ಅದನ್ನು ಸತ್ಸಂಗದ ಮೂಲಕ ದೇಶಪ್ರೇಮ ಬೆಳೆಸಬೇಕು. ಉತ್ತಮ ವ್ಯಕ್ತಿತ್ವ ವೃದ್ಧಿಗೆ ಸತ್ಸಂಗದಂತಹ ಕಾರ್ಯಕ್ರಮಗಳು ಪೂಜ್ಯರ ಹಿತನುಡಿಗಳು, ಪುರಾಣ ಪುಣ್ಯ ಕಥೆಗಳು ಕಿವಿಗೆ ಬಿದ್ದಾಗ ಜೀವನ ಪಾವನವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಹಿಳೆಯರು ಕಾರ್ಯಕ್ರಮದಲ್ಲಿ ನೆರೆದ ಸಹೋದರರೆಲ್ಲರಿಗೂ ದೇಶ ರಕ್ಷಣೆ ರಾಖಿಯನ್ನು ಕಟ್ಟಿದರು. ಜೊತೆಗೆ ದೇಶದ ಮಹಿಳೆಯರ ರಕ್ಷಣೆಯ ಜವಬ್ದಾರಿಯು ನಿಮ್ಮ ಮೇಲಿದೆ ಎಂಬ ಸಂದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ಡಾ.ಪ್ರಭುರಾಜ ಮಡ್ಡಿ ಸಾಹು, ರೋಹಿತ ಶಿರ್ಣಿ, ಚೆನ್ನಯ್ಯಸ್ವಾಮಿ ಸ್ಥಾವರಮಠ, ಮಲ್ಲಿಕಾರ್ಜುನ ಮುಂಡಾಸ, ಚಂದ್ರಶೇಖರ ಆನೇಗುಂದಿ, ಪ್ರಶಾಂತ ಗಿಂಡಿ, ಅಂಬ್ರೇಶ ಗಂಜಿ, ಅಶೋಕ ಸುಗಂಧಿ, ಮಧುಕರ, ಅನುರಾಧ ಫಿರಂಗಿ, ರೇಖಾ ಮಾಗನೂರ, ಚಂದ್ರಶೇಖರ ಪಾಲ್ಕಿ, ವಿರೇಶ ಉಳ್ಳಿ, ಹಣಮಂತ್ರಾಯ ಹೈಯ್ಯಾಳಕರ್, ರಾಘು ಪತ್ತಾರ, ರಮೇಶ ಶೀರ್ಣಿ ಹಾಗೂ ಅಪಾರ ಸಂಖ್ಯೆಯ ಭಕ್ತಾಧಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.




