ಧಾರ್ಮಿಕತೆಯಿಂದ ಸಾತ್ವಿಕತೆ ಶಕ್ತಿ – ಡಾ.ಶರಣು ಗದ್ದುಗೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಬಿಸಿ ಟ್ರಸ್ಟ್ ಃ ಸತ್ಯನಾರಾಯಣ ಪೂಜಾ
ಧಾರ್ಮಿಕತೆಯಿಂದ ಸಾತ್ವಿಕತೆ ಶಕ್ತಿ ಬರಲಿದೆ – ಗದ್ದುಗೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ
ವಿನಯವಾಣಿ ಸಮಾಚಾರ
Yadgiri, ಶಹಾಪುರಃ ಸಂಸಾರದ ಜಂಜಾಟ, ಒತ್ತಡದ ಬದುಕಿನಲ್ಲಿ ನಾವೆಲ್ಲ ಜೀವನ ಕಳೆಯುವಂತಾಗಿದೆ. ಇದರಿಂದ ಅನಾರೋಗ್ಯ, ಅಸಮಾಧಾನ, ಭಿನ್ನಾಭಿಪ್ರಾಯ ಹೆಚ್ಚಾಗಿ ಸಮಸ್ಯೆಗಳು ಉದ್ಭವಕ್ಕೆ ಕಾರಣವಾಗ್ತಿದೆ ಇದೆಲ್ಲಕ್ಕೂ ತಡೆಯೊಡ್ಡಬೇಕೆಂದರೆ ನಾವೆಲ್ಲ ಪಾರಂಪರೆಯಿಂದ ರೂಢಿಸಿಕೊಂಡು ಬಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮಾನಸಿಕ ಶಾಂತಿ ಜತೆ ಸಾತ್ವಿಕ ಶಕ್ತಿ ಪಡೆದು ಸಮಾಧಾನ ಕಂಡುಕೊಳ್ಳಬಹುದು ಎಂದು ಕರವೇ ಉಕ ಅಧ್ಯಕ್ಷ ಡಾ.ಶರಣು ಬಿ.ಗದ್ದುಗೆ ಅಭಿಪ್ರಾಯಪಟ್ಟರು.
ನಗರದ ಫಕಿರೇಶ್ವರಮಠದ ಸಭಾಂಗಣದಲ್ಲಿ ಸ್ಥಳೀಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಧಾರ್ಮಿಕ, ಆಧ್ಯಾತ್ಮಿಕ, ಪೂಜೆ, ಪ್ರಾರ್ಥನೆ, ಧ್ಯಾನದಂತ ಕಾರ್ಯಕ್ರಮಗಳು ಪಾರಂಪರೆಯಾಗಿ ಬಂದ ಅವುಗಳನ್ನು ನಾವು ಮುಂದಿನ ಪೀಳಿಗೆಗೆ ಪರಿಚಯಸಬೇಕಿದೆ. ಆ ನಿಟ್ಟಿನಲ್ಲಿ ನಾವೆಲ್ಲ ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ತಿಳಿಸಬೇಕಿದೆ. ಆ ನಿಟ್ಟಿನಲ್ಲಿ ಧರ್ಮಸ್ಥಳ ಸಂಸ್ಥೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಅಪಾರ ಕಾರ್ಯವನ್ನು ಮಾಡುತ್ತಿದೆ. ಸರ್ಕಾರ ಮಾಡದಂತ ಸೇವೆ ಸಂಸ್ಥೆ ಮಾಡುತ್ತಿರುವದು ಶ್ಲಾಘನೀಯವಾದದು. ಹೀಗಾಗಿ ಈ ಸಂಸ್ಥೆ ಕೈಗೊಂಡ ಸೇವಾ ಕಾರ್ಯಗಳಿಗೆ ನಾವೆಲ್ಲ ಕೈಜೋಡಿಸಿ ಬಲ ತುಂಬಬೇಕಿದೆ. ಕೆಲ ದುಷ್ಟ ಶಕ್ತಿಗಳ ಕೂಟ ಧರ್ಮಸ್ಥಳದ ಸಂಸ್ಥೆಯ ಕಾರ್ಯವೈಕರಿ, ಸೇವಾ ಕಾರ್ಯ ಕಂಡು ಧರ್ಮಸ್ಥಳ ಧಾರ್ಮಿಕ ಕ್ಷೇತ್ರಕ್ಕೆ ಮಸಿ ಬಳಿಯಲು ಹುನ್ನಾರ ನಡೆಸಿ ಈಗಾಗಲೇ ಒಂದು ಗತಿ ಕಂಡಿರುವದು ಎಲ್ಲಿರಿಗೂ ತಿಳಿದಿರುವ ವಿಷಯ. ಸತ್ಯಮೇವ ಜಯತೆ ಎಂಬಂತೆ ಪ್ರಾಮಾಣಿಕವಾಗಿ ನಡೆಯುವವರಿಗೆ ಯಾರಿಂದಲೂ ಏನು ಮಾಡಿಕೊಳ್ಳಲು ಸಾಧ್ಯವಿಲ್ಲ. ಸಾಕ್ಷಾತ್ ಭಗವಂತ ಸತ್ಯದ ಪರ ಇರಲಿದ್ದಾನೆ ಎಂದರು.
ದಿವ್ಯ ಸಾನಿಧ್ಯವಹಿಸಿದ್ದ ಫಕಿರೇಶ್ವರ ಮಠದ ಗುರುಪಾದ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಭಾರತೀಯ ಸಂಸ್ಕೃತಿ ಪಾರಂಪರೆಯನ್ನು ವಿದೇಶದವರು ಅಚ್ಚುಕಟ್ಟಾಗಿ ಪಾಲಿಸುತ್ತಿದ್ದಾರೆ. ಆದರೆ ನಮ್ಮ ದೇಶದವರೇ ನಮ್ಮ ಸಂಸ್ಕೃತಿ ಮರೆಯುತ್ತಿರುವದು ವಿಷಾಧನೀಯವಾಗಿದೆ. ನಮ್ಮ ದೇಶ ವೇದ ಉಪನಿಷತ್ತು ಕಾಲದಿಂದಲೂ ಭಾರತ ಅತಿ ಮಹತ್ವದ ಸಂಸ್ಕಾರಯುತವಾಗಿ ಬೆಳೆದು ಬಂದಿದೆ. ಭಾರತೀಯ ಸಂಸ್ಕೃತಿಗೆ ಜಗತ್ತಿನಲ್ಲಿಯೇ ಮಹತ್ವದ ಸ್ಥಾನವಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವದರಿಂದ ನಮ್ಮ ಮನಸ್ಸು ಶುದ್ಧವಾಗಲಿದೆ. ಭಾವನೆಗಳು ಪರಿಶುದ್ಧವಾಗಲಿದೆ. ಜರ್ಮನಿಯ ತತ್ವಜ್ಞಾನಿ ಮ್ಯಾಕ್ಸ್ ಮುಲ್ಲರ್ ಮುಂದಿನ ಒಂದು ಜನ್ಮವೇನಾದರೂ ಇದ್ದರೆ ಅದು ಹಿಂದೂ ಧರ್ಮದಲ್ಲಿ ಜನಿಸಬೇಕೆಂದು ಮಹಾದಾಸೆಯನ್ನು ವ್ಯಕ್ತಪಡಿಸುತ್ತಾನೆ. ಆಡು ಮುಟ್ಟದ ಗಿಡವಿಲ್ಲ ಧರ್ಮಸ್ಥಳ ಸಂಸ್ಥೆ ಮಾಡದ ಕಾರ್ಯವಿಲ್ಲ ಎಂದರೆ ತಪ್ಪಿಲ್ಲ. ಸರ್ಕಾರ ಮಾಡದಂತ ಕೆಲಸಗಳನ್ನು ಸಂಸ್ಥೆ ಮಾಡುತ್ತಿದೆ. ಜನರ ಮನಸ್ಸಿನ ಮೈಲಿಗೆಯನ್ನು ತೊಳೆಯುವಂತ ಕೆಲಸವು ಸಹ ಸಂಸ್ಥೆ ಮಾಡುತ್ತಿರುವದರಿಂದ ಮಿನಿ ಗೌರ್ಮೆಂಟ್ ಎಂದರೆ ತಪ್ಪಿಲ್ಲ ಎಂದರು.
ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ವಸಂತಗೌಡ, ರೈತ ಮುಖಂಡರಾದ ಮಹೇಶಗೌಡ ಸುಬೇದಾರ, ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ಮಾತನಾಡಿದರು. ಹಿರಿಯ ವಕೀಲರಾದ ಆರ್.ಎಂ.ಹೊನ್ನಾರಡ್ಡಿ, ಹಿರಿಯ ಪತ್ರಕರ್ತರಾದ ನಾರಾಯಣಾಚಾರ್ಯ ಸಗರ, ಶಾಖಾ ಯೋಜನಾಧಿಕಾರಿ ಕಲ್ಲಪ್ಪ ಯಾವಗಲ್, ನಗರಸಭೆ ಸದಸ್ಯ ಸತೀಶ ಪಂಚಭಾವಿ, ಜನಜಾಗೃತಿ ವೇದಿಕೆ ಸದಸ್ಯೆ ಶೈಲಜಾ ಹೊನ್ನಾರಡ್ಡಿ, ಸಂತೋಷ ಸಾಹು ಉಪಸ್ಥಿತರಿದ್ದರು.




