ಪ್ರಮುಖ ಸುದ್ದಿ
ಈ ವರ್ಷದ ಸವದತ್ತಿ ಎಲ್ಲಮ್ಮನ ಹುಂಡಿ ಹಣವೆಷ್ಟು? ನಿಷೇಧಿತ ನೋಟುಗಳು ಎಷ್ಟು ಗೊತ್ತಾ?
ಬೆಳಗಾವಿ : ಕಳೆದ ಎರಡು ದಿನಗಳಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು ಇಂದು ಪೂರ್ಣಗೊಂಡಿದೆ. ದೇವಸ್ಥಾನದ ಸಿಇಓ ರವಿ ಕೊಟಾರಗಸ್ತಿ ನೇತೃತ್ವದಲ್ಲಿ ಸವದತ್ತಿ ತಾಲ್ಲೂಕಿನ ತಹಸೀಲ್ದಾರ ಹಾಗೂ ಬ್ಯಾಂಕ್ ಸಿಬ್ಬಂದಿಯ ಸಮ್ಮುಖದಲ್ಲಿ ಹಣ ಎಣಿಕೆ ಕಾರ್ಯ ನಡೆದಿದೆ. ಒಟ್ಟು ಮೂವತ್ತು ಬ್ಯಾಗ್ ಗಳಲ್ಲಿರುವ ಹಣವನ್ನು ಎರಡು ದಿನಗಳ ಕಾಲ ಎಣಿಸಲಾಗಿದೆ ಎಂದು ತಿಳಿದು ಬಂದಿದೆ.
ಮೂವತ್ತು ಬ್ಯಾಗಗಳಲ್ಲಿ ಒಟ್ಟು 59ಲಕ್ಷ 60ಸಾವಿರ ನಗದು , 70 ಗ್ರಾಮ ಚಿನ್ನ, 855 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ವಿಚಿತ್ರ ಅಂದರೆ ನಿಷೇದಿತ 500 ರೂಪಾಯಿ ಹಾಗೂ ಒಂದು ಸಾವಿರ ರೂಪಾಯಿ ಮುಖಬೆಲೆಯ 32ಸಾವಿರ ರೂಪಾಯಿ ಹಣ ಸಹ ದೇಗುಲದ ಹುಂಡಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ದೇವರಿಗೂ ಸಹ ಭಕ್ತರು ನಡೆಯದ ನಾಣ್ಯ ಹಾಕಿದ್ದು ಚರ್ಚೆಗೆ ಗ್ರಾಸವಾಗಿದೆ.