ಸವದಿ ಸಂಕಟ : ದೆಹಲಿಗೆ ಸಿಎಂ ಯಡಿಯೂರಪ್ಪ ದೌಡು!
ಬೆಂಗಳೂರು : ಮಾಜಿ ಶಾಸಕ ಲಕ್ಷ್ಮಣ ಸವದಿಗೆ ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ನೀಡಿದ್ದು ನೀರು ನುಂಗದ ಗಂಟಲಿಗೆ ಕಡಬು ತುರುಕಿದಂತೆ ಎಂಬಂತಾಗಿದೆ. ಒಂದು ಕಡೆ ಬಿಜೆಪಿ ಶಾಸಕರು ಗರಂ ಆಗಿದ್ದರೆ ಮತ್ತೊಂದು ಕಡೆ ಅನರ್ಹಗೊಂಡಿರುವ ಶಾಸಕರು ಕಂಗಾಲಾಗಿದ್ದು ಕೊಟ್ಟ ಮಾತಿನಂತೆ ನಡೆಯಿರಿ ಎಂದು ಗುಟುರು ಹಾಕಿದ್ದಾರೆ. ನವದದೆಹಲಿಗೆ ಹೋಗಿ ಬಿಡಾರ ಹೂಡಿರುವ ಅನರ್ಹ ಶಾಸಕರ ಗುಂಪು ಬಿಜೆಪಿ ಅದ್ಯಕ್ಷ ಅಮಿತ್ ಶಾ ಭರವಸೆ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದೆ.
ಮುಖ್ಯಮಂತ್ರಿಯಾದ ಬಳಿಕ ಸಚಿವ ಸಂಪುಟ ರಚನೆಗೆ ಹದಿನೈದು ದಿನಗಟ್ಟಲೇ ಕಾಲ ಕಳೆದಿದ್ದ ಯಡಿಯೂರಪ್ಪ ಈಗ ಖಾತೆ ಹಂಚಿಕೆಗೂ ಮೀನಮೇಷ ಎಣಿಸುವ ಸ್ಥಿತಿ ಎದುರಾಗಿದೆ. ಹೀಗಾಗಿ, ದೆಹಲಿಗೆ ದೌಡಾಯಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅನರ್ಹ ಶಾಸಕರ ಅಸಮಾಧಾನ ಭುಗಿಲೇಳದಂತೆ ಸಮಾಧಾನ ಪಡಿಸುವುದು. ಲಕ್ಷ್ಮಣ ಸವದಿಗೆ ನೀಡಿದ ಸಚಿವ ಸ್ಥಾನದಿಂದ ಭಿನ್ನಮತ ಸ್ಪೋಟಗೊಳ್ಳದಂತೆ ಮುನ್ನೆಚ್ಚರಿಕೆವಹಿಸಿ, ಖಾತೆ ಹಂಚಿಕೆ ಕ್ಯಾತೆ ತಣ್ಣಗಾಗಿಸುವ ನಿಟ್ಟಿನಲ್ಲಿ ಪ್ಲಾನ್ ಮಾಡುತ್ತಿದ್ದಾರೆ. ಪವರ್ ಫುಲ್ ಹೈಕಮಾಂಡ್ ಬಳಸಿಕೊಂಡು ಎಲ್ಲವನ್ನೂ ಬಗೆಹರಿಸುವ ತಂತ್ರ ಹೂಡಿದ್ದು ಹೈಕಮಾಂಡ್ ಭೇಟಿಗೆ ತೆರಳಿದ್ದಾರೆ ಎನ್ನಲಾಗಿದೆ.