ಯಾದಗಿರಿಃ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಮಡಿವಾಳರ ಪ್ರತಿಭಟನೆ
ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಮಡಿವಾಳರ ಆಗ್ರಹ
ಯಾದಗಿರಿಃ ತೀರಾ ಹಿಂದುಳಿದ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕೆಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮಡಿವಾಳ ಸಮುದಾಯದ ಜನರು ಆಯಾ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
ಅದರಂತೆ ಇಂದು ಯಾದಗಿರಿ ಜಿಲ್ಲೆಯಲ್ಲಿಯೂ ಮಡಿವಾಳ ಸಮಾಜದ ಜನರು ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ಪ್ರತಿಭಟನೆ ನಡೆಸಿದರು.
ಮಡಿವಾಳ ಸಮಾಜ ಹಿಂದುಳಿದ ಶೋಷಿತ ಸಮಾಜವಾಗಿದ್ದು, ಸಮಾಜದ ಜನರ ಮುಖ್ಯ ವಾಹಿನಿಗೆ ಬರಲು ಸರ್ಕಾರ ಈ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು. ರಾಜ್ಯದಲ್ಲಿ 15-18 ಲಕ್ಷ ಸಮುದಾಯದ ಜನರಿದ್ದು, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದಿದ್ದಾರೆ. ಅಲ್ಲದೆ ದೇಶ 18 ರಾಜ್ಯ ಮತ್ತು 5 ಕೇಂದ್ರಾಡಳಿತ ಪ್ರದೇಶದಲ್ಲಿ ಮಡಿವಾಳ ಜನಾಂಗವನ್ನು ಈಗಾಗಲೇ ಪರಿಶಿಷ್ಟ ಜಾತಿಗೆ ಸೇರಿಸಲ್ಪಟ್ಟಿದೆ.
ಕರ್ನಾಟಕದಲ್ಲಿ ಮಾತ್ರ ಇದುವರೆಗೂ ಪರಿಶಿಷ್ಟ ಜಾತಿಗೆ ಸೇರಿಸದ ಕಾರಣ ಸಮುದಾಯದ ಜನರು ತೀರ ಹಿಂದುಳಿದ ಹೀನಾಯ ಸ್ಥಿಯಿಲ್ಲಿ ಬದುಕು ನಡೆಸುವ ದುಸ್ಥಿತಿ ಕಂಡು ಬರುತ್ತಿದೆ. ಕಾರಣ ಕೂಡಲೇ ಅನ್ನಪೂರ್ಣ ಆಯೋಗ ವರದಿ ಪ್ರಕಾರ ಮಡಿವಾಳ ಜನಾಂಗವನ್ನು ಎಸ್‍ಸಿ ಪಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಅನ್ನಪೂರ್ಣ ಆಯೋಗ ವರದಿ ಜಾರಿಗೊಳಿಸಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ರಾಮಯ್ಯನವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಡಿವಾಳ ಜಿಲ್ಲಾಧ್ಯಕ್ಷ ಮಡಿವಾಳಪ್ಪ ಬಿಜಾಸ್ಪೂರ ಮುಖಂಡರಾದ ಚಂದ್ರು ಸುರಪುರ, ಸುಭಾಷ ಮಡಿವಾಳರ, ಮುರಿಗೆಪ್ಪ ಮಡಿವಾಳಕರ್ ಗೋಗಿ, ನಾಗಪ್ಪ ಮುಗ್ದಂಪುರ, ಶರಣು ಮಡಿವಾಳ, ಶ್ರೀಶೈಲ್ ಸಿಂಧನೂರ, ಶ್ರೀನಿವಾಸ ಗುರುಮಠಕಲ್, ಖಂಡಪ್ಪ ಾಚನಾಳ, ದೇವರಾಜ ಯಾದಗಿರಿ, ವೀರೇಶ ಮಡಿವಾಳಕರ್ ಗೋಗಿ, ದೇವಿಂದ್ರಪ್ಪ ಕಟ್ಟಿಮನಿ ಹಳಿಸಗರ, ಗುರು ಹುಣಸಿಗಿ, ಪ್ರವೀಣ ಹುಣಸಿಗಿ, ದೇವರಾಜ ಹವಲ್ದಾರ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.