ಅಂಕಣ

ವಿದ್ಯಾರ್ಥಿ ಜೀವನ ಶಿಸ್ತಿನ ಶಾಸನ – ಯೋಗೀಶ್ ಸಹ್ಯಾದ್ರಿ ಲೇಖನ

@ಯೋಗೀಶ್ ಸಹ್ಯಾದ್ರಿ

‘ವಿದ್ಯಾರ್ಥಿಗಳು’ ಎಂದೊಡನೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡುವುದು ‘ಶಿಸ್ತು’ ಎಂಬ ಕಲ್ಪನೆ. ವಿದ್ಯಾರ್ಥಿ ಎಂಬ ಪದಕ್ಕೆ ಇನ್ನೊಂದು ಅರ್ಥವೇ ಶಿಸ್ತು ಎಂಬುದು ಹಲವರ ವಾದ ಮತ್ತು ನಂಬಿಕೆ ಕೂಡ ಆಗಿದೆ. ಆದ್ದರಿಂದಲೇ ಮನೆಯಲ್ಲಿಯೂ ಸಹ ಮಕ್ಕಳಿಗೆ ತಮ್ಮ ಹಿರಿಯರಿಂದ ಆಗಿಂದಾಗ್ಗೆ ಶಿಸ್ತನ್ನು ಮೈಗೂಡಿಸಿಕೊಳ್ಳುವ ಕುರಿತು ನೀತಿ-ಬೋಧನೆ ಸಾಗುತ್ತಲೇ ಇರುತ್ತದೆ.

ಯಾವ ವಿದ್ಯಾರ್ಥಿಗಳು ತಮ್ಮ ಓದಿನಲ್ಲಿ, ಆಟದಲ್ಲಿ, ಶಾಲಾ ಕಾಲೇಜಿನ ಚಟುವಟಿಕೆಗಳಲ್ಲಿ, ಮನೆಯ ಕೆಲಸ-ಕಾರ್ಯಗಳಲ್ಲಿ ಆಸಕ್ತಿಯ ಜೊತೆಗೆ ಶಿಸ್ತನ್ನು ಅಳವಡಿಸಿಕೊಂಡಿರುತ್ತಾರೋ ಅಂತಹ ವಿದ್ಯಾರ್ಥಿಗಳು ತಮ್ಮ ಜೀವನದ ಪ್ರಮುಖ ಘಟ್ಟವನ್ನು ತಲುಪಿದಂತೆಯೇ ಸರಿ. ನಾನು ಒಬ್ಬ ಉಪನ್ಯಾಸಕನಾಗಿ ಮತ್ತು ಶಿಕ್ಷಕನಾಗಿ ನನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ವಿದ್ಯಾರ್ಥಿಗಳನ್ನು ಬಹಳ ಹತ್ತಿರದಿಂದ ಹಾಗೂ ಅತ್ಯಂತ ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅದರಲ್ಲಿ ಕೆಲವು ವಿದ್ಯಾರ್ಥಿ – ವಿದ್ಯಾರ್ಥಿನಿಯರು ತಮ್ಮ ಅಭ್ಯಾಸ ಮತ್ತು ನಡೆ-ನುಡಿಯಲ್ಲಿ ಬಹಳಷ್ಟು ಪರಿಪೂರ್ಣತೆಯನ್ನು ತೋರಿದ್ದಾರೆ. ಅಷ್ಟು ವಯಸ್ಸಿಗೆ ಅವರ ಆಲೋಚನೆಗಳು ಎಷ್ಟೋ ಬಾರಿ ನನ್ನನ್ನು ಆಶ್ಚರ್ಯಗೊಳ್ಳುವಂತೆ ಮಾಡಿವೆ. ಆದರೆ ಮತ್ತೆ ಕೆಲವು ವಿದ್ಯಾರ್ಥಿಗಳ ಹಾವ ಭಾವ, ಅಸಂಬದ್ಧ ನಡವಳಿಕೆ, ಜವಾಬ್ದಾರಿಯಿಲ್ಲದ ಸೋಗುತನ ಅಷ್ಟೇ ಬೇಸರವನ್ನು ಮೂಡಿಸಿದೆ.

‘ವಿದ್ಯಾರ್ಥಿ ಜೀವನ’ ಮನುಷ್ಯನ ಬದುಕಿನಲ್ಲಿಯೇ ಅತ್ಯಂತ ಅದ್ಭುತವಾದ ಸಮಯ. ವ್ಯಕ್ತಿಯು ಸಾಧ್ಯವಾದಷ್ಟು ಜ್ಞಾನವನ್ನು ಸಂಪಾದಿಸಿಕೊಳ್ಳಲು ದೇವರು ಅಥವಾ ದೇಶ ಕೊಟ್ಟಿರುವ ಅತ್ಯುತ್ತಮ ಅವಕಾಶ ಎಂಬುದನ್ನು ಸದಾ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಆದ್ದರಿಂದಲೇ ‘ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್’ ಎಂಬ ಮಾತನ್ನು ಇಡೀ ವಿಶ್ವವೇ ಒಪ್ಪಿಕೊಂಡಿರುವುದು. ಇದು ಕೇವಲ ವಿದ್ಯಾರ್ಥಿಗಳು ತಮ್ಮ ಓದುವ ಸಮಯದಲ್ಲಿ ಯಾವುದೇ ಜವಾಬ್ದಾರಿ ಅಥವಾ ಕೆಲಸ ಕಾರ್ಯದ ಒತ್ತಡದಿಂದ ದೂರವಿರಬಹುದು ಎಂಬ ಕಾರಣದಿಂದಲ್ಲ. ಬದಲಾಗಿ, ವಿದ್ಯಾರ್ಥಿಯು ಕಲಿಯುವ ಸಂದರ್ಭದಲ್ಲಿ ತನ್ನ ವ್ಯಕ್ತಿತ್ವದ ನಿಜವಾದ ವಿಕಾಸ ಆರಂಭವಾಗುತ್ತದೆ, ಅವರ ಮನಸ್ಸಿನ ಮೇಲೆ ಜ್ಞಾನದ ಬೆಳಕು ಚೆಲ್ಲುತ್ತದೆ. ತಮ್ಮ ಭವಿಷ್ಯದ ಕನಸುಗಳು ಚಿಗುರೊಡೆಯುತ್ತವೆ. ಈ ಮೂಲಕ ದೇಶಕ್ಕೆ ಒಬ್ಬ ಮಾದರಿ ಪ್ರಜೆಯ ಉಗಮವಾಗುತ್ತದೆ ಎಂಬುದು.

ದಕ್ಷಿಣ ಕನ್ನಡದ ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತಿದ್ದ ಸಂದರ್ಭದಲ್ಲಿ ಸಾವಿರಾರು ವಿದ್ಯಾರ್ಥಿಗಳು ರಾಜ್ಯ ಮತ್ತು ದೇಶದ ಹಲವಾರು ಭಾಗಗಳಿಂದ ತಮ್ಮ ತಂದೆ ತಾಯಿ ಹಾಗೂ ಇತರ ಸದಸ್ಯರನ್ನು ಬಿಟ್ಟು ಬಂದು ವಿದ್ಯಾಭ್ಯಾಸದ ದೃಷ್ಠಿಯಿಂದ ತಮ್ಮ ಇಷ್ಟಗಳನ್ನು ಗಾಳಿಗೆ ತೂರಿ ಅಥವಾ ತಮ್ಮ ಎದೆಯ ಗೂಡಿನ ಒಳಗೆ ಬಚ್ಚಿಟ್ಟುಕೊಂಡು ವ್ಯಾಸಂಗ ಮಾಡುತ್ತಿದ್ದುದನ್ನು ಗಮನಿಸಿದ್ದೇನೆ. ಅವರ ಕಣ್ಣುಗಳಲ್ಲಿ ಅಚಲವಾದ ಕನಸುಗಳನ್ನು ಹುಡುಕಿದ್ದೇನೆ. ಅವರ ಗುರಿಗಳನ್ನು ತಲುಪಲು ತಮ್ಮ ಗುರುಗಳನ್ನು ಆರಾಧ್ಯ ದೈವದಂತೆ ಗೌರವಿಸುತ್ತಿದ್ದ ಆನಂದವನ್ನೂ ಅನುಭವಿಸಿದ್ದೇನೆ. ಅವರಲ್ಲಿ ಹಲವಾರು ವಿದ್ಯಾರ್ಥಿಗಳು ಅವರ ಕನಸುಗಳನ್ನು ಸಾಕಾರಗೊಳಿಸಿಕೊಂಡು ತಮ್ಮ ಜೀವನದ ಸಫಲತೆಯನ್ನು ಕಂಡುಕೊಂಡಿದ್ದಾರೆ. ಅದಕ್ಕೆ ಕಾರಣ ಆ ಸಂಸ್ಥೆಯ ಆಡಳಿತಾತ್ಮಕ ವಾತಾವರಣ ಹಾಗೂ ವಿದ್ಯಾರ್ಥಿಗಳು ಎಳೆಯ ವಯಸ್ಸಿನಿಂದಲೇ ಮೇಳೈಸಿಕೊಂಡು ಬಂದಿರುವ ಶಿಸ್ತು ಎಂದರೆ ತಪ್ಪಾಗಲಾರದು.

ವಿದ್ಯಾರ್ಥಿಗಳಲ್ಲಿ ಶ್ರದ್ಧೆಯ ಮನೋಭಾವವನ್ನು ಬೆಳೆಸುವುದು ಆಯಾ ಶಾಲೆ ಅಥವಾ ಕಾಲೇಜಿನ ಶಿಕ್ಷಕರುಗಳ ಪ್ರೇರಣಾ ಶಕ್ತಿಯ ಮೇಲೆ ಅವಲಂಬಿತವಾಗಿದೆ ಎಂದರೆ ತಪ್ಪಾಗುವುದಿಲ್ಲ. ವಿದ್ಯಾರ್ಥಿಗಳ ತಪ್ಪನ್ನು ತಿದ್ದುವ ಮತ್ತು ಅವರನ್ನು ಮಾನಸಿಕವಾಗಿ ಗಟ್ಟಿಗೊಳಿಸುವ, ಹಾಗೆಯೇ ಅವರ ಸಾಧನೆಯೆಡೆಗೆ ಸಿದ್ಧಗೊಳಿಸುವ ಗುರುತರ ಜವಾಬ್ದಾರಿ ಶಿಕ್ಷಕರದ್ದು. ಆದರೆ ವಿದ್ಯಾರ್ಥಿಗಳು ತಮ್ಮ ಶಿಕ್ಷಕರು ಕಾಲ – ಕಾಲಕ್ಕೆ ಅಥವಾ ವಿವಿಧ ಸಂದರ್ಭಗಳಲ್ಲಿ ನೀಡುವ ಉಪಯುಕ್ತ ಸೂಚನೆಗಳನ್ನು ಪಾಲಿಸಬೇಕು. ಪಠ್ಯ-ಬೋಧನೆಯ ಜೊತೆಗೆ ಶಿಕ್ಷಕರ ಅನುಭವದ ಮಾರ್ಗದರ್ಶನ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಾಂದಿಯಾಗಲಿದೆ.

ಶಿಕ್ಷಣ ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿಬಿಟ್ಟಿದೆ, ಅಷ್ಟೇ ಅಗ್ಗವೂ ಆಗಿದೆ. ಇಂದಿನ ಪರಿಸ್ಥಿತಿಯಲ್ಲಿ ಯಾವ ವ್ಯಕ್ತಿಯ ಬಳಿ ಹಣವಿಲ್ಲವೋ, ಬಂಗಲೆಯಿಲ್ಲವೋ, ಯಾರು ಐಷಾರಾಮಿ ಜೀವನ ನಡೆಸುತ್ತಿಲ್ಲವೋ ಅವರು ಬಡವರಲ್ಲ. ಬದಲಾಗಿ, ಯಾರು ಶಿಕ್ಷಣವನ್ನು ಪಡೆದಿಲ್ಲವೋ ಮತ್ತು ಶಿಕ್ಷಣದ ಮಹತ್ವವನ್ನು ಅರಿತಿಲ್ಲವೋ ಆತನೇ ನಿಜವಾದ ಬಡವ ಹಾಗೂ ಅನರ್ಹ ಎಂಬುದು ಕಟು ವಾಸ್ತವ. ‘ಶಿಕ್ಷಣ’ ಸಂಸ್ಕೃತಿಯನ್ನು ಕಲಿಸುತ್ತದೆ. ಒಳ್ಳೆಯ ಸಂಸ್ಕೃತಿ ಬದುಕನ್ನು ರೂಪಿಸುತ್ತದೆ. ನಮ್ಮ ಸುತ್ತ-ಮುತ್ತಲ ಪ್ರಕೃತಿಯಲ್ಲಿಯೇ ನಿಜವಾದ ಶಿಕ್ಷಣ ಅಥವಾ ಕಲಿಕೆ ಅಡಕವಾಗಿದೆ. ಒಂದು ರೀತಿಯಲ್ಲಿ ಹೇಳುವುದಾದರೆ ಪ್ರಕೃತಿ ಮತ್ತು ಸಂಸ್ಕೃತಿಯ ನಡುವಿನ ಅವಿನಾಭಾವ ಸಂಬಂಧವೇ ‘ಶಿಕ್ಷಣ’.

ವಿದ್ಯಾರ್ಥಿಗಳು ಸಾಧ್ಯವಾದಷ್ಟು ನಿಷ್ಠೆಯಿಂದ ತಮ್ಮ ಮನಸ್ಸನ್ನು ನಿಗ್ರಹದಲ್ಲಿಟ್ಟುಕೊಂಡು, ಸಾಮಾಜಿಕ ಜಾಲತಾಣಗಳ ಬಲೆಗೆ ಸಿಕ್ಕಿಹಾಕಿಕೊಂಡು ಮನಸ್ಸನ್ನು ಘಾಸಿಗೊಳಿಸಿಕೊಳ್ಳದೆ ಶಿಸ್ತಿನ ಸಿಪಾಯಿಯಂತೆ ಜ್ಞಾನಾರ್ಜನೆ ಮಾಡಬೇಕಾಗಿದೆ. ಶಾಲಾ ಕಲಿಕೆಗೆ ಹೆಚ್ಚು ಒತ್ತು ಕೊಟ್ಟು ತಮ್ಮ ಗುರಿಯನ್ನು ಮನಸ್ಸಿನಲ್ಲಿ ಮೂರ್ತಿಯನ್ನಾಗಿ ಪ್ರತಿಷ್ಠಾಪಿಸಿ ಪರೀಕ್ಷೆಗಳು ಮುಗಿಯುವವರೆಗೂ ಕಾಯಕಯೋಗಿಯಂತೆ ವಿದ್ಯಾಭ್ಯಾಸ ಮಾಡಬೇಕು. ಆದರೆ ಪಠ್ಯದ ಕಲಿಕೆ ಒಂದು ಭಾಗವಾದರೆ ಜೀವನ ಪಾಠ ಇನ್ನೊಂದು ಭಾಗ. ಆದ್ದರಿಂದ ಸಮಯ ಸಿಕ್ಕಾಗಲೆಲ್ಲ ನಮ್ಮ ಬುದ್ಧಿಯನ್ನು ಚುರುಕುಗೊಳಿಸುವ, ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ, ರಾಷ್ಟ್ರಪ್ರೇಮವನ್ನು ಇಮ್ಮಡಿಗೊಳಿಸುವ, ಸಾಧಕರ ಜೀವನದ ಕುರಿತು ತಿಳಿದುಕೊಳ್ಳುವ ಪುಸ್ತಕಗಳನ್ನು ಓದಬೇಕು.

ಪರೀಕ್ಷೆಗಳಲ್ಲಿ ಅಂಕಗಳು ಅಥವಾ ಗ್ರೇಡ್‍ಗಳನ್ನು ಪಡೆಯುವುದು ಎಷ್ಟು ಮುಖ್ಯವೋ, ನಮ್ಮ ಬದುಕನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಳ್ಳುವುದು ಸಹ ಅಷ್ಟೇ ಪ್ರಮುಖವಾದುದು. ಜೀವನ ಸುಂದರವಾಗಿ ಪ್ರಫುಲ್ಲತೆಯಿಂದ ಕೂಡಿರಬೇಕಾದರೆ ಅದು ಮೌಲ್ಯಗಳಿಂದ ತುಂಬಿಕೊಂಡಿರಬೇಕು. ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳು ವಿದ್ಯಾರ್ಥಿಗಳನ್ನು ಸದೃಢಗೊಳಿಸುತ್ತವೆ. ನ್ಯಾಯನೀತಿಗಳ ಅನ್ವೇಷಣೆಯನ್ನು ಕಲಿಸುತ್ತವೆ. ಆದ್ದರಿಂದಲೇ ನನಗನಿಸಿದ್ದು, ವಿದ್ಯಾರ್ಥಿಗಳ ಜೀವನ ಶಿಸ್ತಿನ ಶಾಸನದಂತೆ ಪ್ರಜ್ವಲಿಸಬೇಕು. ನಮ್ಮಲ್ಲಿನ ಶಿಸ್ತು ನಮಗೆ ವಿದ್ಯೆ, ಸಂಪತ್ತು, ಗೌರವ, ಸಮಾನತೆ, ಅಧಿಕಾರ ಎಲ್ಲವುಗಳನ್ನು ನಮಗೆ ಸಮರ್ಪಿಸಿಬಿಡುತ್ತದೆ. ನಮ್ಮ ಸುದೀರ್ಘ ಜೀವನ ತಂಗಾಳಿಯಂತೆ ಸುಮಧುರವಾಗಿರುತ್ತದೆ.
****************

ಲೇಖಕರು:

ಶ್ರೀ ಯೋಗೀಶ್ ಸಹ್ಯಾದ್ರಿ
ಪ್ರಾಂಶುಪಾಲರು.
ಅಧ್ಯಕ್ಷರು, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು,
ಚಿತ್ರದುರ್ಗ.

Related Articles

Leave a Reply

Your email address will not be published. Required fields are marked *

Back to top button