ಉಪನೋಂದಣಾಧಿಕಾರಿ ಮಲ್ಲೇಶ ಕೋಬಾಳಕರ್ ಅಮಾನತು.!
ಉಪನೋಂದಣಾಧಿಕಾರಿ ಮಲ್ಲೇಶ ಕೋಬಾಳಕರ್ ಅಮಾನತು
ಯಾದಗಿರಿ: ಕರ್ತವ್ಯ ಲೋಪವೆಸಗಿದ ಶಹಾಪೂರ ತಾಲೂಕಿನ ಉಪನೋಂದಣಾಧಿಕಾರಿ ಮಲ್ಲೇಶ ಕೋಬಾಳಕರ್ ಅವರನ್ನು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಸರ್ಕಾರದ ಅಪರ ಕಾರ್ಯದರ್ಶಿಗಳಾದ ಟಿ.ಆರ್.ವಿಜಯ ಭಾಸ್ಕರ್ ಅವರು ಇತ್ತೀಚೆಗೆ ಶಹಾಪೂರ ನಗರದ ಉಪ-ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿದಾಗ, ನೋಂದಣಾಧಿಕಾರಿ ಮಲ್ಲೇಶ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರು.
ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಜರುಗಿಸುವಂತೆ ವಿಜಯಭಾಸ್ಕರ್ ಅವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕ ನಾಗರೀಕ ಸೇವಾ (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ)ಗಳು 1957 ರ ನಿಯಮ 10(8) ರಡಿ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಚೇರಿ ಭೇಟಿ ವೇಳೆ ನಾಗರಿಕರಿಂದ ದೂರು ಸಲ್ಲಿಕೆ.!
ಸರ್ಕಾರದ ಅಪರ ಕಾರ್ಯದರ್ಶಿ ಟಿ.ಆರ್.ವಿಜಯಭಾಸ್ಕರ್ ಈಚೆಗೆ ನಗರಕ್ಕೆ ಆಗಮಿಸಿದ್ದಾಗ, ಶಹಾಪುರ ನಗರದ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಆಗ ನೋಂದಣಾಧಿಕಾರಿ ಮಲ್ಲೇಶ ಕೋಬಾಳಕರ್ ಗೈರು ಹಾಜರಾಗಿದ್ದರಲ್ಲದೆ, ಕಚೇರಿ ಬಳಿ ತಮ್ಮ ಕೆಲಸದ ನಿಮಿತ್ತ ಕುಳಿತಿದ್ದ ರೈತರು, ಇತರರು ವಿಜಯಭಾಸ್ಕರ ಅವರಿಗೆ ನೋಂದಣಾಧಿಕಾರಿ ವಿರುದ್ಧ ದೂರುಗಳ ಸುರಿಮಳೆ ಸುರಿಸಿರುವ ವರದಿಯಾಗಿತ್ತು.
ನೋಂದಣಾಧಿಕಾರಿ ಮಲ್ಲೇಶ ಅವರ ವ್ಯಾಪಕ ಲಂಚಾವತಾರ ಬಗ್ಗೆ, ಮತ್ತು ಸಮರ್ಪಕ ದಾಖಲೆ ಸಮೇತ ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದರೂ, ವಿಳಂಬ ನೀತಿ ಅನುಸರಿಸುವುದು, ದುಡ್ಡು ಪಡೆಯುವುದು ಸೇರಿದಂತೆ ಕರ್ತವ್ಯಕ್ಕೆ 12 ಗಂಟೆ ಮೇಲ್ಪಟ್ಟು ಹಾಜರಾಗುವುದು ಸೇರಿದಂತೆ ಇತರೆ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಮಂಜುನಾಥ ಹಾಗೂ ಕಾರ್ಯದರ್ಶಿ ವಿಜಯಭಾಸ್ಕರ ಅವರ ಎದುರಿಗೆ ಬಿಚ್ಚಿಟ್ಟ ಹಿನ್ನೆಲೆಯಲ್ಲಿ, ಅಧಿಕಾರಿಗಳು ಅಂದು ಕಚೇರಿಯಲ್ಲಿದ್ದ ಹಲವು ಕಡತಗಳನ್ನು ವಶಕ್ಕೆ ಪಡೆದುಕೊಂಡು ತೆರಳಿದ್ದರು ಎನ್ನಲಾಗಿದೆ. ಹೀಗಾಗಿ ಸಮಗ್ರ ಪರಿಶೀಲನೆ ನಡೆಸಿದ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಅಧಿಕಾರಿಗಳ ಕ್ರಮಕ್ಕೆ ಸ್ವಾಗತಃ ಭ್ರಷ್ಟ ಕುಳಗಳಿಗಿದು ಪಾಠ
ಅಂದು ಕಚೇರಿಗೆ ಆಗಮಿಸಿದ್ದ ವೇಳೆ ನಾಗರಿಕರ ನೀಡಿದ ದೂರಿನ ಮೇಲೆ ಮತ್ತು ಅದೇ ವೇಳೆ ಕರ್ತವ್ಯಕ್ಕೆ ಹಾಜರಾಗಿರದ ನೋಂದಣಾಧಿಕಾರಿ ಮಲ್ಲೇಶ ವಿರುದ್ದ ಸರ್ಕಾರದ ಅಪರ ಕಾರ್ಯದರ್ಶಿ ವಿಜಯಭಾಸ್ಕರ್ ಹಾಗೂ ಜಿಲ್ಲಾಧಿಕಾರಿ ಜೆ.ಮಂಜುನಾಥ ಅವರು ಅಮಾನತು ಆದೇಶ ಹೊರಡಿಸುವ ಮೂಲಕ ಸೂಕ್ತ ಕ್ರಮ ಕೈಗೊಂಡಿದ್ದಾರೆ.
ಅಧಿಕಾರಿಗಳ ಸ್ವಾಗತರ್ಹ ಕ್ರಮ ಇದಾಗಿದ್ದು, ಸಾರ್ವಜನಿಕರಿಗೆ ನ್ಯಾಯ ದೊರಕಿಸಿದಂತಾಗಿದೆ ಎಂದು ರೈತಾಪಿ ಜನ ಅಧಿಕಾರಿಗಳ ಅಧಿಕಾರಿಗಳಿಗೆ ಅಭಿನಂದನೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಭ್ರಷ್ಟ ಅಧಿಕಾರಿಗಳಿಗೆ ಇದು ಎಚ್ಚರಿಕೆ ಗಂಟೆಯಾಗಲಿ ಎಂದು ತಿಳಿಸಿದ್ದಾರೆ.