ಎಸ್ಡಿಪಿಐ ನಿಷೇಧಿಸಿದಲ್ಲಿ ಕಾನೂನು ಹೋರಾಟ-ಅಶ್ರಫ್ ಮಾಚೂರ್
ಪೌರತ್ವ ಕಾಯ್ದೆ ವಿರೋಧಿಸಿ ಬೃಹತ್ ಸಮಾವೇಶ
ಯಾದಗಿರಿ,ಶಹಾಪುರಃ ಕೇಂದ್ರ ಆಡಳಿತದ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶಿಯ ನಾಗರಿಕತೆಗೆ ಧಕ್ಕೆ ಉಂಟಾಗುತ್ತಿದೆ. ಪ್ರತಿಗಲ್ಲಿ ಗಲ್ಲಿಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಹೋರಾಟ ಮಾಡುವ ಮೂಲಕ ಸಂವಿಧಾನ ವಿರೋಧಿ ಕಾಯ್ದೆ ಜಾರಿಯಾಗದಂತೆ ನೋಡಿಕೊಳ್ಳಬೇಕಿದೆ ಎಂದು ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚರ್ ತಿಳಿಸಿದರು.
ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಇಲ್ಲಿನ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಡೆದ ಸಿಎಎ, ಎನ್ಆರ್ಪಿ ಹಾಗೂ ಎನ್ಪಿಆರ್ ಕಾಯ್ದೆಗಳು ದೇಶದಲ್ಲಿ ಅದಾಂತಿಗೆ ಕಾರಣವಾಗುತ್ತಿದ್ದು ಬಿಜೆಪಿ ಧರ್ಮ ಮತ್ತು ಜಾತಿ ಜಾತಿಗಳ ಮೇಲೆ ರಾಜ್ಯಭಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಅಲ್ಲದೆ ದೇಶದ ಹಿತಕ್ಕಾಗಿ ಜಾತ್ಯಾತೀತ ತತ್ವದಡಿ ಎಸ್ಡಿಪಿಐ ಪಕ್ಷದ ಕಾರ್ಯಕರ್ತರು ಮುಖಂಡರು ಶ್ರಮಿಸುತ್ತಿದ್ದು, ಇಂತಹ ಸಂಘಟನಾತ್ಮಕವಾಗಿ ಜನಪರ ಕೆಲಸ ಮಾಡುವ ಪಕ್ಷದ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ನಿಷೇಧಿಸುವ ಹುನ್ನಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಎಸ್ಡಿಪಿಐ ನಿಷೇಧವಾದಲ್ಲಿ ಕಾನೂನು ಹೋರಾಟ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು.
ಸಂಘಟನೆಯ ಕಾರ್ಯಕರ್ತರು ಯಾವುದೇ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿರುದಿಲ್ಲ. ಸಾಮಾಜಿಕ ಕಳಕಳಿಯಿಂದ ಸಮಾಜದ ಏಳ್ಗೆಗೆ ದುಡಿಯುತ್ತಿದೆ. ಸಿಎಎ ಕಾಯ್ದೆ ಜಾರಿಯಿಂದ ಮುಸ್ಲಿಂ ಸಮುದಾಯ ಸೇರಿದಂತೆ ಹಿಂದುಳಿದ ವರ್ಗದ ಹಿಂದೂಗಳಿಗೂ ತೊಂದರೆಯಾಗಲಿದೆ. ಈ ಕುರಿತು ನಾಗರಿಕರೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕಿತ್ತು. ಏಕಾಏಕಿ ಇಂತಹ ಘೋಷಣೆಗಳನ್ನು ಮಾಡಿದ್ದಲ್ಲಿ ಹಲವರಿಗೆ ತೊಂದರೆಗೆ ಒಳಗಾಗಿದ್ದಾರೆ ಎಂದರು.
ಮುಖಂಡರಾದ ಶರಣಪ್ಪ ಸಲಾದಪುರ ಮಾತನಾಡಿ, ದೇಶದಲ್ಲಿ ಪೌರತ್ವಕಾಯ್ದೆ ಜಾರಿಗೊಳಿಸುವ ಮುಖಾಂತರ ಬಿಜೆಪಿ ಸರ್ಕಾರಕ್ಕೆ ಗಂಡಾಂತರ ಸಮೀಪಿಸುತ್ತಿದೆ. ದೇಶದಲ್ಲಿ ಹಿಂದೂ ಮತ್ತು ಮುಸ್ಲಿಂರು ಸಹೋದರತ್ವ ಭಾವನೆಯೊಂದಿಗೆ ಬದುಕುತ್ತಿದ್ದು, ಅದನ್ನು ಬೇಧಿಸಲು ಬಿಜೆಪಿ ಪೌರತ್ವ ಕಾಯ್ದೆಯ ಪ್ರಹಾರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾಗರಿಕ ಹಕ್ಕುಗಳಿಗೆ ದಕ್ಕೆ ಉಂಟು ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇದು ಬಿಜೆಪಿ ಅವನತಿಗೆ ಕಾರಣವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಅಹಿಂದ ಮುಖಂಡ ಅಯ್ಯಣ್ಣ ಕನ್ಯಾಕೋಳೂರ, ದಲಿತ ಮುಖಂಡ ನೀಲಕಂಠ ಬಡಿಗೇರ ಮಾತನಾಡಿದರು. ಗಿರೆಪ್ಪಗೌಡ ಬಾಣಿತಿಹಾಳ ಪ್ರಾಸ್ತವಿಕವಾಗಿ ಮಾತನಾಡಿದರು. ಆರ್.ಚನ್ನಬಸವ ವನದುರ್ಗ, ಎಸ್ಡಿಪಿಐ ಜಿಲ್ಲಾಧ್ಯಕ್ಷ ಸಯ್ಯದ್ ಖಾಲಿದ್, ಇಸಾಕ್ ಹುಸೇನಿ, ಟಿ.ಶಶಿಧರ, ಮಹ್ಮದ್ ಮುಸ್ತಫಾ, ಶಿವಪುತ್ರ ಜವಳಿ, ವಿಠಲ್ ವಗ್ಗಿ, ಮಹಾದೇವಪ್ಪ ಸಾಲಿಮನಿ, ಅಮರ ಚಾವುಶ್, ನಾಸೀರಸಾಬ ಸಹರಾ, ಮಹ್ಮದ್ ಇಸ್ಮಾಯಿಲ್ ಚಾಂದ್, ಬಾಬಾ ಪಟೇಲ್, ಮಲ್ಲಪ್ಪ ಗೋಗಿ, ಶೇಖ ತವಕಲಿ, ಚಂದಪ್ಪ ಸೀತ್ನಿ, ಶಿವಕುಮಾರ ತಳವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಹಲವಾರು ಗ್ರಾಮಗಳಿಂದ ಪ್ರಗತಿಪರರ, ಸಿಎಎ ವಿರೋಧಿಸುವವರು ಆಗಮಿಸಿದ್ದರು. ಮಹಿಳೆಯರು ಭಾಗವಹಿಸಿದ್ದರು.