ಪ್ರಮುಖ ಸುದ್ದಿ

ಸ್ವಾಮಿ ಅಗ್ನಿವೇಶ ಮೇಲೆ ಹಲ್ಲೆಃ SDPI ಪ್ರತಿಭಟನೆ

ಆರೋಪಿಗಳ ಬಂಧನಕ್ಕೆ ಎಸ್ಡಿಪಿಐ ಆಗ್ರಹ

ಯಾದಗಿರಿಃ ಇತ್ತೀಚೆಗೆ ಜಾರ್ಖಂಡ್ ರಾಜ್ಯದ ಪರುಕ್ ಪಟ್ಟಣದಲ್ಲಿ ಸ್ವಾಮಿ ಅಗ್ನಿವೇಶ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಜಿಲ್ಲೆಯ ಶಹಾಪುರ ನಗರದ ಬಸವೇಶ್ವರ ವೃತ್ತದಲ್ಲಿ ಎಸ್‍ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗುರಮಠಕಲ್ ಖಾಸಾಮಠದ ಶಾಂತವೀರ ಸ್ವಾಮೀಜಿ, ಡೋಂಗಿ ಧಾರ್ಮಿಕತೆಗೆ ಅಂತ್ಯವಾಡುವ ಸಮಯ ಸಮೀಪಿಸುತ್ತಿದೆ. ಜಾಥಿ ಧರ್ಮ ಮೀರಿ ಮಾನವೀಯ ಮೌಲ್ಯಗಳಿಗೆ ಒತ್ತು ನೀಡುವ ಮೂಲಕ ಸರ್ವರನ್ನು ಸಮನಾಗಿ ಕಾಣುವ ಧರ್ಮಕ್ಕೆ ಸಮಾಜದಲ್ಲಿ ಬೆಲೆ ಜಾಸ್ತಿ. ಉತ್ತಮ ಶಕ್ತಿಗಳು ಸಮಾನವಾಗಿ ಒಂದಾಗುವ ಕಾಲ ಸನ್ನಿಹಿತವಾಗಿದ್ದು, ಸಾಂಪ್ರಾದಾಯಿಕ ವಿರೋಧಿಗಳಲ್ಲಿ ನಡುಕ ಉಂಟಾಗಿದೆ.

ಹೀಗಾಗಿ ಹೊಡೆದು ಬಡೆದು, ಬೆದರಿಸಿ ಹಲವಡೆ ಕೊಲೆ ಮಾಡುವ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುವ ಕಂದಾಚಾರದಲ್ಲಿ ಮುಳುಗಿದ್ದ ಮೂಢ ನಂಬಿಕೆಗೆ ಬಲಿಯಾಗುತ್ತಿದ್ದ ಜನರಲ್ಲಿ ಜಾಗೃತಿ ಮೂಡಿಸುತ್ತಿರುವದರಿಂದ ವಿರೋಧಿಗಳಲ್ಲಿ ಜಿಜ್ಞಾಸೆ ಉಂಟಾಗಿದೆ.

ಹೀಗಾಗಿ ಪ್ರಾಮಾಣಿಕ, ಸಾಮಾಜಿಕ ಹೋರಾಟಗಾರರ ಮೇಲೆ ಸ್ವಾಮಿ ಅಗ್ನಿವೇಶ ಅಂತವರ ಮೇಲೆ ಮತಾಂಧರು ಹಲ್ಲೆ ನಡೆಸುವ ಮೂಲಕ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆಪಾದಿಸಿದರು.

ಅಗ್ನಿವೇಶ ಸ್ವಾಮೀಜಿ ಮೇಲೆ ನಡೆಸಿದ ಹಲ್ಲೆ ಖಂಡನೀಯವಾದದು. ಕೂಡಲೇ ಜಾರ್ಖಂಡ ಪೊಲೀಸರು ಅಲ್ಲಿನ ಆಡಳಿತ ಸರ್ಕಾರ ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು.

ಅಲ್ಲದೆ ದೇಶದಲ್ಲಿ ಮೂಢ ನಂಬಿಕೆ ವಿರೋಧಿಸಿ ಉತ್ತಮ ಚಿಂತನೆಗಳನ್ನು ಅಳವಡಿಸಕೊಳ್ಳಲು ಯುವ ಸಮುದಾಯಕ್ಕೆ ಕರೆ ನೀಡುವ ಇಂತಹ ವ್ಯಕ್ತಿ, ಬುದ್ದಿಜೀವಿಗಳು ಮತ್ತು ಸಾಹಿತಿಗಳ ಮೇಲೆ ನಿರಂತರ ಹಲ್ಲೆ, ಬೆದರಿಕೆ ಕೊಲೆಗಳು ನಡೆದ ನಡೆಯುತ್ತಿವೆ ಇದಕ್ಕೆಲ್ಲ ಕಡಿವಾಣ ಹಾಕಬೇಕಿದೆ.

ಇಂತಹ ಸಂದರ್ಭದಲ್ಲಿ ಅಗ್ನಿವೇಶ ಸ್ವಾಮೀಜಿಯವರ ಮೇಲೂ ಇಂತಹದೇ ಶಕ್ತಿಗಳು ಮಾರಣಾಂತಿಕ ಹಲ್ಲೆ ನಡೆಸಿವೆ. ಕೂಡಲೇ ಅಲ್ಲಿನ ಸರ್ಕಾರ ತನಿಖೆಕೈಗೊಂಡು ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿ, ನಾಡಿನಲ್ಲಿ ವಿಚಾರವಾದಗಿಳನ್ನು ದುಷ್ಟ ಶಕ್ತಿಗಳು ಹುಡುಕಾಡಿ ಕೊಲ್ಲುತ್ತಿವೆ. ಇದಕ್ಕೆಲ್ಲ ಸರ್ಕಾರ ಕಠಿಣ ಕ್ರಮ ಜರುಗಿಸುವ ಅಗತ್ಯವಿದೆ. ವಿಚಾರವಾದಿಗಳನ್ನು ದುಷ್ಟಶಕ್ತಿ ಕೊಲ್ಲಬಹುದು ಆದರೆ ಅವರ ವಿಚಾರಗಳನ್ನು ಎಂದಿಗೂ ಕೊಲ್ಲಲಾಗದು.

ಇಂದಿನ ಯುವ ಶಕ್ತಿ ಜಾಗೃತಗೊಂಡು ದೇಶ ಬೆಳವಣಿಗೆಗೆ ಬೇಕಾಗುವ ಕಾರ್ಯಕ್ಕೆ ಬೆಂಬಲ ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ. ಈಗಾಗಲೇ ಸುಪ್ರೀಂಕೋರ್ಟ್ ಸಾಹಿತಿ, ಪ್ರಗತಿಪರ ಕೊಲೆ ಪ್ರಕರಣ ಕುರಿತು ಕಳವಳ ವ್ಯಕ್ತಪಡಿಸಿದೆ. ಪ್ರಗತಿಪರರ ಚಿಂತಕರ ಕೊಲೆ ಪ್ರಕರಣ ರಾಜ್ಯದಲ್ಲಿ ತಲ್ಲಣ ಮೂಡಿಸಿದೆ. ಈ ಕುರಿತು ಪೊಲೀಸರು ಹೆಚ್ಚಿನ ನಿಗಾವಹಿಸಬೇಕಾದ ಅಗತ್ಯವಿದೆ.

ಈ ನಿಟ್ಟಿನಲ್ಲಿ ಅಗ್ನಿವೇಶ ಸ್ವಾಮೀಜಿಗೆ ಪೊಲೀಸ್‍ರು ಸೂಕ್ತ ಭದ್ರತೆ ಒದಗಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಸಯ್ಯದ್ ಇಸಾಕ್ ಹುಸೇನ್ (ಖಾಲಿದ್) ಮುಖಂಡರಾದ ಮಹಿಬೂಬ ಗೋಗಿ, ಸಯ್ಯದ್ ಕಲೀಮುಲ್ಲಾ ಹುಸೇನಿ, ಸಿದ್ಧಲಿಂಗ ಸ್ವಾಮಿ ಕೊಡಲ್, ಶಂಭುಲಿಂಗ ಸ್ವಾಮಿ ಕೊಲ್ಲೂರ, ಶಿವಪುತ್ರ ಜವಳಿ, ಶಿವಕುಮಾರ ತಳವಾರ, ಮುಜೀಬ ಅಹ್ಮದ್, ರಾಮಣ್ಣ ಸಾದ್ಯಾಪುರ, ಮಲ್ಲಿಕಾರ್ಜುನ ಹುರಸಗುಂಡಗಿ, ಮಹ್ಮದ್ ಅಶ್ಫಕ್, ಮುನೀರ ಭಾಗವಾನ್,, ಮಹ್ಮದ್ ಶಾಕೀರ್, ಮಹಿಮೂದ್ ಬಹೇರಿ, ಬಂದೇನವಾಜ್ ಗೋಗಿ, ಮಹ್ಮದ್ ಶಾಕೀರ್, ಯುನೂಸ್ ಶಹಾಪುರ, ಮೌಲಾನ ಉಬೇದುಲ್ಲಾ ಮತ್ತು ಮಹ್ಮದ್ ಖದೀರ ಅತ್ತಾರಿ ಸೇರಿದಂತೆ ಇತರರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button