ಪ್ರಮುಖ ಸುದ್ದಿ

ಸ್ವಯಂ ಉದ್ಯೋಗದಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ: ಡಾ.ರಾಗಪ್ರಿಯ

ಸ್ವಯಂ ಉದ್ಯೋಗದಿಂದ ಮಹಿಳೆಯರು ಸ್ವಾವಲಂಬಿಯಾಗಲು ಸಾಧ್ಯ

ಯಾದಗಿರಿಃ ಉದ್ಯಮಮಗಳನ್ನು ಪ್ರಾರಂಭಿಸಲು ಬೇಕಾಗುವ ಎಲ್ಲಾ ಮಾಹಿತಿಗಳನ್ನು ಪಡೆದು ಸ್ವಯಂ ಉದ್ಯಮಗಳನ್ನು ಪ್ರಾರಂಭಿಸಿ ಆರ್ಥಿಕ ಅಭಿವೃದ್ಧಿ ಸಾಧಿಸಬೇಕು. ಮಹಿಳೆಯರು ಸ್ವಯಂ ಉದ್ಯೋಗದಿಂದ ಮಾತ್ರ ಸ್ವಾವಲಂಬಿಯಾಗಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಕರೆ ನೀಡಿದರು.

ಧಾರವಾಡದ ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ (ಸಿಡಾಕ್), ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ವಾಲ್ಮೀಕಿ ಭವನದಲ್ಲಿ ನಡೆದ 10 ದಿನಗಳ ಉದ್ಯಮಶೀಲತಾಭಿವೃದ್ದಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಲಸ ಮಾಡಲು ನೂರಾರು ದಾರಿಗಳಿರುತ್ತವೆ. ವಿದ್ಯಾವಂತರು ಸ್ವಯಂ ಉದ್ಯೋಗಗಳನ್ನು ಪ್ರಾರಂಭಿಸಲು ಮುಂದೆ ಬರಬೇಕು. ಕೈಗಾರಿಕಾ ಮತ್ತು ಸೇವಾ ವಿಭಾಗದಲ್ಲಿ ಉದ್ಯಮಗಳನ್ನು ಪ್ರಾರಂಭಿಸಲು ಸಾಕಷ್ಟು ಅವಕಾಶಗಳು ಲಭ್ಯವಿರುತ್ತವೆ.

ನಮ್ಮ ದೇಶದಲ್ಲಿ ಯುವಜನ ಹೆಚ್ಚಿನ ಸಂಖ್ಯೆಯಲ್ಲಿ ಬುದ್ದಿವಂತರಿದ್ದಾರೆ. ಇಂದು ಚೀನಾ ದೇಶವು ಜಗತ್ತಿನಲ್ಲಿಯೇ ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಸ್ಥಾಪಿಸುವಲ್ಲಿ ಮುಂದಿದೆ. ಹಾಗೆಯೇ ನಮ್ಮ ಭಾರತದಲ್ಲಿಯೂ ಸಣ್ಣ ಸಣ್ಣ ಪ್ರಮಾಣದ ಉತ್ಪಾದನಾ ಚಟುವಟಿಕೆ ಮತ್ತು ಸೇವಾ ಚಟುವಟಿಕೆಗಳನ್ನು ಸ್ಥಾಪಿಸಿಲು ಯುವಶಕ್ತಿ ಮುಂದೆ ಬರಬೇಕು ಎಂದರು.

ಸಿಡಾಕ್ನ ಜಂಟಿ ನಿರ್ದೇಶಕ ಜಿ.ಯು.ಹುಡೇದ ಮಾತನಾಡಿ, 10 ದಿನಗಳ ಅವಧಿಯ ತರಬೇತಿಯಲ್ಲಿ ಸಾಧನಾ ಪ್ರೇರಣಾ ತರಬೇತಿ, ಸ್ವಯಂ ಉದ್ಯಮಗಳನ್ನು ಸ್ಥಾಪನೆ ಮಾಡುವ ವಿಧಾನ, ಸ್ವಯಂ ಉದ್ಯೋಗಕ್ಕೆ ಇರುವ ಸೌಲಭ್ಯಗಳ ಕುರಿತು ಮಾಹಿತಿ, ಉದ್ದಿಮೆಯನ್ನು ಆಯ್ಕೆ ಮಾಡುವ ವಿಧಾನ, ಯೋಜನಾ ವರದಿ ತಯಾರಿಕೆ, ಮಾರುಕಟ್ಟೆ ಸಮೀಕ್ಷೆ ಮಾಡುವ ವಿಧಾನ ಬ್ಯಾಂಕ್ ವ್ಯವಹಾರಗಳು, ಉದ್ಯಮ ಸ್ಥಾಪನೆಗೆ ಇರುವ ಸೌಲಭ್ಯಗಳು ಮತ್ತು ಇತರ ಸಂಬಂಧಪಟ್ಟ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಾದಗಿರಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಪ್ರಭು ದೊರೆ ಮಾತನಾಡಿ, ನಿರುದ್ಯೋಗ ಸಮಸ್ಯೆ ನಿವಾರಣೆಯಲ್ಲಿ ಕೌಶಲ್ಯ ಮೈಗೂಡಿಸಿಕೊಳ್ಳುವಂತೆ ಮತ್ತು ಉದ್ಯಮ ಸ್ಥಾಪನೆಗೆ ಬೇಕಾಗುವ ಮಾಹಿತಿ ಅವಶ್ಯಕತೆ ಬಗ್ಗೆ ವಿವರಿಸಿದರು. ಉದ್ಯಮ ಮಾಡಲು ಸರ್ಕಾರದ ವಿವಿಧ ಇಲಾಖೆಗಳ ಯೋಜನೆ ಬಗ್ಗೆ ಮಾಹಿತಿ ನೀಡಿ ಸ್ವಯಂ ಉದ್ಯಮಗಳ ಸ್ಥಾಪನೆಗೆ ಬೇಕಾದ ಕೌಶಲ್ಯವನ್ನು ಬೆಳಸಿಕೊಳ್ಳಲು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕಿ ರೇಖಾ ಮ್ಯಾಗೇರಿ ಅವರು ಕೈಗಾರಿಕಾ ಕೇಂದ್ರದ ಯೋಜನೆಗಳ ಮಾಹಿತಿಯನ್ನು ನೀಡಿದರು.

ಇನ್ನೊರ್ವ ಅತಿಥಿಯಾಗಿ ಆಗಮಿಸಿದ ಲೀಡ್ ಬ್ಯಾಂಕ್ ಮ್ಯಾನೇಜರ್ ಭೀಮರಾವ್ ಪಾಂಚಾಳ ಅವರು ಉದ್ಯಮಕ್ಕೆ ಸಂಬಂಧಿಸಿದ ಬ್ಯಾಂಕಿನ ವ್ಯವಹಾರದ ಬಗ್ಗೆ ಮಾಹಿತಿ ನೀಡಿದರು. ಸೈಯ್ಯದ್ ಆಷ್ಪಕ್ ಸ್ವಾಗತಿಸಿದರು, ಸಿಡಾಕ್ ತರಬೇತುದಾರ ಶಾಂತಯ್ಯ ಗುರುವಿನ್ ಪ್ರಾರ್ಥಿಸಿದರು, ಸಿಡಾಕ್ ತರಬೇತುದಾರ ಶ್ರೈಶೈಲ್ ಗುದಗೆ ನಿರೂಪಿದರು.

Related Articles

Leave a Reply

Your email address will not be published. Required fields are marked *

Back to top button