ಪ್ರಮುಖ ಸುದ್ದಿ

ಸೇವಾಲಾಲ್ ಕಟ್ಟೆ ನಿರ್ಮಾಣಃ ಎರಡು ಸಮುದಾಯಗಳ ನಡುವೆ ಘರ್ಷಣೆ

ಚಾಮನಾಳಃ  ಸೇವಾಲಾಲ್ ಕಟ್ಟೆ ನಿರ್ಮಾಣ, ಪ್ರಕ್ಷುಬ್ಧ ವಾತಾವರಣ

ಯಾದಗಿರಿಃ ರಾತ್ರೋರಾತ್ರಿ ವೃತ್ತದಲ್ಲಿ ಸಂತ ಸೇವಾಲಾಲ್ ಕಟ್ಟೆ ನಿರ್ಮಿಸಿ ಭಾವಚಿತ್ರವಿಟ್ಟ ಪರಿಣಾಮ, ಇನ್ನೊಂದು ಸಮುದಾಯದ ಜನರು ರೊಚ್ಚಿಗೆದ್ದಿರುವ ಎರಡು ಸಮುದಾಯದ ಜನರ ನಡುವೆ ಕಲ್ಲು ತೂರಾಟ, ಘರ್ಷಣೆ ನಡೆದ ಹಿನ್ನೆಲೆ ನಿಯಂತ್ರಣಕ್ಕಾಗಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಚಾಮನಾಳ ಕ್ರಾಸ್ ಹತ್ತಿರ (ದಂಡ ಸೋಲಾಪುರ ವ್ಯಾಪ್ತಿಯ ವೃತ್ತ) ಗುರುವಾರ ಬೆಳಗ್ಗೆ ನಡೆದಿದೆ.

ಚಾಮನಾಳ ಗ್ರಾಮಕ್ಕೆ ಹೊಂದಿಕೊಂಡಿರುವ ಶಹಾಪುರ-ಸಿಂದಗಿ ಹೆದ್ದಾರಿ ಬದಿ ಬರುವ ದಂಡಸೊಲ್ಲಾಪುರ ಗ್ರಾಮ ಸರಹದ್ದಿನ ನಾಲ್ಕು ರಸ್ತೆಗಳು ಕೂಡುವ ಬಸ್ ನಿಲುಗಡೆಯ ಮುಖ್ಯರಸ್ತೆಯ ಮಧ್ಯದಲ್ಲಿ ಬುಧವಾರ ಬಂಜಾರ ಸಮಾಜದ ಜನರು ರಾತೋರಾತ್ರಿ ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರವಿಟ್ಟು ಕಟ್ಟೆ ನಿರ್ಮಿಸಿದ, ದಂಡ ಸೊಲ್ಲಾಪುರ ಗ್ರಾಮದ ವಾಲ್ಮೀಕಿ ಸಮುದಾಯದ ಕೋಪಕ್ಕೆ ಕಾರಣವಾಗಿದ್ದು, ಎರಡು ಸಮುದಾಯದ ಜನರಲ್ಲಿ ಗುರುವಾರ ಬೆಳಗ್ಗೆ ಗಲಾಟೆ ಸಂಭವಿಸಿದೆ. ಈ ಸಂದರ್ಭದಲ್ಲಿ ಕಲ್ಲೂ ತೂರಾಟವು ನಡೆದಿದೆ. ಸದ್ಯ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ಸ್ಥಳಕ್ಕೆ ಪೊಲೀಸ್ ಪಡೆ ಆಗಮಿಸಿದ್ದು, ಘರ್ಷಣೆ ಕೈಮೀರುವದನ್ನು ಅರಿತು ಹತೋಟಿಗೆ ತರಲಾಗಿದೆ. ಪ್ರಸ್ತುತ ಪೊಲೀಸ್ ಪಹರೆ ಹಾಕಲಾಗಿದ್ದು, ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಈ ವೃತ್ತದಲ್ಲಿ ಬಂಜಾರ ಸಮಾಜ, ವಾಲ್ಮೀಕಿ ಸಮಾಜ ಸೇರಿದಂತೆ  ಇತರೆ ಸಮುದಾಯದವರು ತಮ್ಮ ಜನಾಂಗದ ಮಹಾತ್ಮರ ವೃತ್ತ ನಿರ್ಮಿಸಲು ಈ ಮೊದಲಿನಿಂದಲೂ ಕಿತ್ತಾಟ ನಡೆದಿದೆ ಎನ್ನಲಾಗಿದೆ. ಗುರುವಾರ ಸಂತ ಸೇವಾಲಾಲ್ ಜಯಂತ್ಯುತ್ಸವ ಹಿನ್ನೆಲೆ, ಬುಧವಾರ ರಾತ್ರಿ ಬಂಜಾರ ಸಮುದಾಯದ ಕೆಲವರು ಸೇವಾಲಾಲ್ ಭಾವಚಿತ್ರವಿಟ್ಟು ಕಟ್ಟೆ ನಿರ್ಮಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಘರ್ಷಣೆಗೆ ಕಾರಣವಾಗಿದೆ. ವಾಲ್ಮೀಕಿ ವೃತ್ತ ನಾಮಕರಣಕ್ಕೆ ಒತ್ತಾಯಿಸುತ್ತಿರುವ ಈಗ ವಾಲ್ಮೀಕಿ ಸಮುದಾಯದ ಜೊತೆ ಕೋಲಿ ಸಮಾಜ ಮತ್ತು ಕುರುಬ ಸಮಾಜದವರು ತಮ್ಮ ಜನಾಂಗದ ಮಹಾತ್ಮರ ಭಾವಚಿತ್ರಗಳನ್ನು ಇಟ್ಟು ಪ್ರತಿಭಟನೆಗೆ ಇಳಿದಿರುವುದು ಕುತುಹಲ ಮೂಡಸಿದೆ.

ಅಂಬಿಗರ ಚೌಡಯ್ಯ ಮತ್ತು ಕನಕದಾಸರ ಭಾವಚಿತ್ರಗಳನ್ನು ಇಟ್ಟು ಆಯ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ. ಸುದ್ದಿ ತಿಳಿದ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟೀನ್ ಮಾರ್ಬಾನ್ಯಾಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಯ ವಿವರಃ ಬಂಜಾರ ಸಮುದಾಯದ ಕೆಲವರು ದಂಡ ಸೊಲ್ಲಾಪುರ ಸರಹದ್ದಿನಲ್ಲಿ ಬರುವ ಚಾಮನಾಳ ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಸೇವಾಲಾಲ ಮಹಾರಾಜರ ಜಯಂತಿ ನೆಪವಾಗಿಟ್ಟುಕೊಂಡು ರಾತೋರಾತ್ರಿ ರಸ್ತೆಯ ನಡುವೆ ಕಟ್ಟೆ ನಿರ್ಮಿಸಿ ಸೇವಾಲಾಲ ಮಹಾರಾಜರ ಫೋಟೋ ಇಟ್ಟು ಪೋಜೆ ಸಲ್ಲಿಸಿದ್ದಾರೆ.

ಬೆಳಗಿನ ಜಾವದಲ್ಲಿ ದಂಡಸೊಲ್ಲಾಪುರದರದ ವಾಲ್ಮೀಕಿ ಸಮುದಾಯ ಈ ಕುರಿತು ಆಕ್ಷೇಪ ವ್ಯೆಕ್ತಪಡಿಸಿದ್ದು ಮುಖ್ಯ ರಸ್ತೆ ಮೊದಲೇ ಸಂಚಾರಕ್ಕೆ ಅನಾನುಕೂಲವಾಗಿದ್ದು ಕಟ್ಟೆಕಟ್ಟಿ ಮತ್ತಷ್ಟು ತೊಂದರೆ ಮಾಡಿದ್ದು ಸರಿಯಲ್ಲ ತಕ್ಷಣವೇ ಕಟ್ಟೆ ತೆರವುಗೊಳಿಸಬೇಕು ಇಲ್ಲವಾದಲ್ಲಿ ಗ್ರಾಮಸ್ಥರು ಇನ್ನು ನಾಲ್ಕು ಮಹಾತ್ಮರ, ವಾಲ್ಮಿಕಿ ಮಹರ್ಷಿಗಳ, ಕನಕದಾಸರು, ಡಾ.ಬಾಬಾಸಾಹೇಬ ಅಂಬೇಡ್ಕರ, ನಿಜಶರಣ ಅಂಬಿಗರ ಚೌಡಯ್ಯ ಫೋಟೊಗಳನ್ನಿಟ್ಟು ಪೂಜೆ ಸಲ್ಲಿಸುವುದರ ಜೊತೆಗೆ ಮುಖ್ಯ ರಸ್ತೆಯಲ್ಲಿ ಕಲ್ಲು ಸಿಮೆಂಟ್, ಉಸುಕು ಹಾಕಿ ಮತ್ತೊಂದು ಕಟ್ಟೆ ನಿರ್ಮಾಣ ಮಾಡಲು ಮುಂದಾಗಿದೆ, ಸುದ್ದಿ ತಿಳಿದ ಪೋಲಿಸ್ ಇಲಾಖೆ ತಕ್ಷಣವೇ ಜಾಗೃತರಾಗಿ ಎರಡು ಗುಂಪುಗಳನ್ನು ಚದುರಿಸಿದ್ದಾರೆ. ಈ ಸಂದರ್ಭದಲ್ಲಿ ಲಘು ಲಾಠಿ ಪ್ರಹಾರವು ನಡೆದಿದ್ದು, ಮೂರು ನಾಲ್ಕು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಸುರಪುರ ತಾಲೂಕಿನ ದಂಡಸೋಲಾಪುರ ಗ್ರಾಮ ವ್ಯಾಪ್ತಿಗೆ ಬರುವ ಇಲ್ಲಿನ ವಿವಾದಿತ ವೃತ್ತದಲ್ಲಿ ಪ್ರಸ್ತುತ ಬೂದಿ ಮುಚ್ಚಿದ ಕೆಂಡದಂತಿದೆ. ಈ ವೃತ್ತ ಶಹಾಪುರ, ಸುರಪುರ ಮತ್ತು ಜೇವರ್ಗಿ ತಾಲೂಕಿನ ಮುಖ್ಯ ರಸ್ತೆಗಳು ಸೇರುತ್ತವೆ. ವೃತ್ತ ಮಾತ್ರ ಸುರಪುರ ತಾಲೂಕಿನ ದಂಡ ಸೋಲಾಪುರ ಗ್ರಾಮ ವ್ಯಾಪ್ತಿಗೆ ಬರುತ್ತದೆ. ಆದರೆ ವೃತ್ತದಲ್ಲಿ ಸುತ್ತಲಿನ ಪ್ರದೇಶ ಚಾಮನಾಳ ಗ್ರಾಮಸ್ಥರ ವ್ಯಾಪಾರ ವಹಿವಾಟು ಜಾಸ್ತಿ ಇದ್ದು, ಸಧ್ಯ ಘಟನೆ ಹಿನ್ನೆಲೆ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಈ ಪ್ರದೇಶದಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ.

ಎಸ್ಪಿ ಹೇಳಿಕೆ..
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿ, ಎರಡು ಸಮುದಾಯದ ಜನರೊಂದಿಗೆ ಮಾತನಾಡಿದ್ದೇವೆ. ಪ್ರಸ್ತುತ ಸೇವಾಲಾಲ್ ಜಯಂತ್ಯುತ್ಸವ ಇರುವ ಕಾರಣ, ತೆರವು ಕಾರ್ಯಾಚರಣೆ ಬೇಡವೆಂದು ತಿಳಿ ಹೇಳಲಾಗಿದೆ. ಎರಡು ಸಮುದಾಯ ಇದಕ್ಕೆ ಒಪ್ಪಿದ್ದು, ಮುಂದಿನ ಕ್ರಮಕೈಗೊಳ್ಳಲಾಗುವುದು. ಪ್ರಸ್ತುತ ಸ್ಥಿತಿ ಹತೋಟಿಗೆ ಬಂದಿದೆ.
-ಎಸ್ಪಿ ಯಡಾ ಮಾರ್ಟೀನ್. ಯಾದಗಿರಿ.

Related Articles

Leave a Reply

Your email address will not be published. Required fields are marked *

Back to top button