
ಶಾಪಗ್ರಸ್ಥ ಗಂಧರ್ವ!!! ಕಬಂಧ !!
‘ಸೀತಾಮಾತೆಯನ್ನು ದುರುಳ ರಾವಣ ಪುಷ್ಪಕ ವಿಮಾನದಲ್ಲಿ ಹೊತ್ತೊಯ್ದ’ ಎನ್ನುವ ವಿಷಯವನ್ನು ರಾಮ-ಲಕ್ಷ್ಮಣರಿಗೆ ತಿಳಿಸುವ ಉದ್ದೇಶದಿಂದಲೇ ತನ್ನ ಉಸಿರನ್ನು ಹಿಡಿದಿದ್ದ ಜಟಾಯು. ರಾವಣ ಲಂಕಾಧೀಶ, ಕುಬೇರನ ತಮ್ಮ ಎಂದು ಹೇಳುತ್ತಿರುವಾಗಲೇ ಕೊನೆಯುಸಿರುಳೆದನು..
ಪಕ್ಷಿರಾಜ ಜಟಾಯುವಿನ ನಿಸ್ವಾರ್ಥ ಪ್ರೀತಿಯಿಂದ ರಾಮಲಕ್ಷ್ಮಣರ ಕಣ್ಣು ತುಂಬಿ ಬಂತು.. ಜಟಾಯುವಿನ ಅಂತ್ಯಕ್ರಿಯೆಯ ನಂತರ.. ಸೀತಾನ್ವೇಷಣೆಗಾಗಿ ಅರಣ್ಯದಲ್ಲಿ ರಾಮ, ಲಕ್ಷ್ಮಣರು ಮುಂದುವರಿದು ಬರುತ್ತಿರುವಾಗ ಸೂರ್ಯನ ಬೆಳಕು ಅತಿವಿರಳವಾಗಿ ಭೂಮಿಯನ್ನು ಸ್ಪರ್ಶಿಸುತ್ತಿದ್ದ ‘ಕ್ರೌಂಚಾರಣ್ಯ’ವನ್ನು ಪ್ರವೇಶಿಸಿದರು. ಹೆಸರಿಗೆ ತಕ್ಕಂತೆ ಅದು ಘೋರವಾದ ಅರಣ್ಯವಾಗಿತ್ತು.
ಅಲ್ಲಿ ಜಿಂಕೆಯೊಂದು ಬಾಯಲ್ಲಿ ಹುಲ್ಲನ್ನು ಕಚ್ಚಿಕೊಂಡು ಓಡಿಬಂತು. ಅದರ ಹಿಂದೆಯೇ ಕಾಡಾನೆಯು ಬರುತ್ತಿತ್ತು! ಅದನ್ನು ಹಿಂಬಾಲಿಸಿಕೊಂಡು ಸಿಂಹವೊಂದು ಬಂದಿತು. ಒಂದು ಪ್ರಾಣಿ ಇನ್ನೊಂದು ಪ್ರಾಣಿಯನ್ನು ತಿನ್ನಲೆಂದೇ ಬಂದಿತ್ತು! ಇನ್ನೊಂದೆಡೆ, ಚಿಗುರನ್ನು ತಿನ್ನುತ್ತಿದ್ದ ಮೊಲವನ್ನು ಭಯಂಕರವಾದ ಹೆಬ್ಬಾವುಗಳು ನುಂಗುತ್ತಿದ್ದವು. ಹದ್ದೊಂದು ಹಾರಿಬಂದು ಹಾವನ್ನು ಎತ್ತಿಕೊಂಡು ಹೋಯಿತು. ಮೊಲಕ್ಕೆ ಚಿಗುರನ್ನು ತಿನ್ನುವಾಸೆ. ಹಾವಿಗೆ ಮೊಲವನ್ನು ನುಂಗುವ ಆಸೆ. ಹದ್ದಿಗೆ ಹಾವನ್ನು ನುಂಗುವ ಆಸೆ. ಇದನ್ನು ನೋಡಿ ಶ್ರೀರಾಮನು ಉದ್ಗರಿಸಿದ… ‘ಮೃತ್ಯುವಿನ ಬಾಯಲ್ಲಿ ತಾನಿದ್ದರೂ ಹೊಟ್ಟೆ ತುಂಬಿಸುವುದನ್ನೂ, ದ್ವೇಷ ಸಾಧಿಸುವುದನ್ನೂ ಯಾವ ಪ್ರಾಣಿಯೂ ಬಿಟ್ಟಿರುವುದಿಲ್ಲ’! ಒಂದನ್ನು ತಿಂದು ಇನ್ನೊಂದು ಬದುಕುವ ‘ಜೀವೋ ಜೀವಸ್ಯ ಜೀವನಂ’ ಎಂಬ ಚದುರಂಗದಾಟದಲ್ಲಿ ಇಂದ್ರಿಯ ಚಾಪಲ್ಯವೂ ಸೇರಿದರೆ ತಪ್ಪಿನ ಮೇಲೆ ತಪ್ಪಾಗುತ್ತಾ ಸಾಗುವುದು!!
ಸೀತೆಯ ಚಿನ್ನದ ಜಿಂಕೆಯ ವ್ಯಾಮೋಹವು ಅವಳನ್ನು ಹುಚ್ಚಾಗಿಸಿತ್ತು! ಅರಮನೆಯ ಬಂಗಾರದ ಭಂಡಾರವನ್ನು ಬಿಟ್ಟು ಬಂದವಳಿಗೆ ಬಂಗಾರದ ಜಿಂಕೆಯ ಬಯಕೆ !! ಅವಳ ಬಯಕೆ ರಾಮ ಲಕ್ಷ್ಮಣರಿಗೆ ಸಹಿಸಲಾಗದ ನೋವನ್ನು ತಂದಿಟ್ಟಿತ್ತು.! ಆ ರಾಕ್ಷಸನು ಸೀತೆಯನ್ನು ಏನು ಮಾಡಿದನೋ ಎಂಬ ಚಿಂತೆ ಒಂದು ಕಡೆ, ಧರ್ಮಪತ್ನಿಯನ್ನು ಆ ಘೋರಾರಣ್ಯದಲ್ಲಿ ಕಳೆದು ಕೊಂಡ ಚಿಂತೆ ಇನ್ನೊಂದೆಡೆ, ಕದ್ದವನು ಎಲ್ಲಿದ್ದಾನೆ?? ಎಂದು ತಿಳಿಯದ ಗೊಂದಲ …. ರಾಮನನ್ನು ಚಿಂತೆಗೆ ಒಳಗಾಗಿಸಿತ್ತು!
ಅದೇ ಸಂದರ್ಭದಲ್ಲಿ ಅವರಿಗೆ ಅತಿ ಕ್ರೂರವಾದ ದೊಡ್ಡ ಧ್ವನಿಯೊಂದು ಕೇಳಿಸಿತು! ಆ ಧ್ವನಿಗೆ ‘ಭೂಮಿಯೇ ನಡುಗಿ, ಸುಂಟರಗಾಳಿ ಬೀಸಿದಂತೆ’ ಆಯಿತು. ಆಗ ರಾಮಲಕ್ಷ್ಮಣರು ಅಲ್ಲಿ ಕಂಡ ದೃಶ್ಯದಿಂದ ತಮ್ಮ ಕಣ್ಣುಗಳನ್ನು ತಾವೇ ನಂಬದಾದರು!
‘ತಲೆ ಇರಲಿಲ್ಲ. ಮೊಣಕಾಲು ಇರಲಿಲ್ಲ. ದೊಡ್ಡ ಬೆಟ್ಟದಂತಿದ್ದ’ ರಾಕ್ಷಸನೊಬ್ಬನು ಕಾಣಿಸಿಕೊಂಡನು!!. ಅವನ ರೂಪ ಹೇಗಿತ್ತೆಂದರೆ…ಜಿಗುಪ್ಸೆಯನ್ನು ಹುಟ್ಟಿಸುವಂತಿತ್ತು! ಮಹಾನ್ ಶಕ್ತಿ ಶಾಲಿಗಳಾದ ರಾಮ-ಲಕ್ಷ್ಮಣರು ಒಂದು ಕ್ಷಣ ದಿಗ್ಭ್ರಾಂತರಾದರು!!
ಅವನ ಕೈಗಳು ಎಷ್ಟು ಉದ್ದವಾಗಿದ್ದವೆಂದರೆ ಒಂದು ಯೋಜನಕ್ಕಿಂತ ಉದ್ದವಾಗಿತ್ತು! ತನ್ನ ಉದ್ದವಾದ ಕೈಗಳನ್ನು ಚಾಚಿ ಕಾಡಿನಲ್ಲಿ ಓಡಾಡುವ ಹುಲಿ, ಆನೆ, ಚಿರತೆಗಳನ್ನು ತಿನ್ನುತ್ತಿದ್ದನು. ಭಯಾನಕವಾದ ಹಲ್ಲುಗಳನ್ನು ಹೊಂದಿರುವ ಅವನು, ತನ್ನ ನಾಲಿಗೆಯಿಂದ ತನ್ನ ಮುಖಕ್ಕೆ ತಾಗಿದ ರಕ್ತವನ್ನು ನೆಕ್ಕಿಕೊಳ್ಳುತ್ತಿದ್ದನು!
ರಾಮಲಕ್ಷ್ಮಣರ ದಾರಿಗೆ ಅಡ್ಡವಾಗಿ ಇದ್ದ ಆ ರಾಕ್ಷಸನು ತನ್ನ ಎರಡು ತೋಳುಗಳನ್ನು ಚಾಚಿ ರಾಮ-ಲಕ್ಷ್ಮಣರನ್ನು ತನ್ನೆಡೆಗೆ ಸೆಳೆದುಕೊಂಡನು.ಆಗ ಲಕ್ಷ್ಮಣನು “ಅಣ್ಣ ಈ ರಾಕ್ಷಸ ನಿಜಕ್ಕೂ ಭಯಂಕರವಾಗಿ ಇದ್ದಾನೆ. ನೀನು ನನ್ನನ್ನು ಇವನಿಗೆ ಒಪ್ಪಿಸಿಬಿಡು.. ಹೋಗಿ ಸೀತಾಮಾತೆಯನ್ನು ಕಾಪಾಡು.. ” ಎಂದನು.. ! ಲಕ್ಷ್ಮಣನ ಮಾತುಗಳನ್ನು ಕೇಳಿದ ರಾಮ, ಲಕ್ಷ್ಮಣನಿಗೆ ಧೈರ್ಯ ತುಂಬಿದನು. ಆಗ ಕ್ರೂರ ಕಬಂಧನು… ಗುಡುಗಿನ ಸ್ವರದಲ್ಲಿ ರಾಮ – ಲಕ್ಷ್ಮಣರನ್ನು ಯಾರು ನೀವು?, ಈ ಘನಘೋರ ಪ್ರದೇಶಕ್ಕೆ ಹೇಗೆ ಬಂದಿರಿ??, ನನ್ನ ಅದೃಷ್ಟವಶಾತ್ ಸಿಕ್ಕಿದ್ದಿರಿ. ಹಸಿವಿನಿಂದ ನಾನು ಕಾಯುತ್ತಿರುವಾಗ ನನ್ನಲ್ಲಿಗೆ ಬಂದಿರಿ ಇನ್ನು ನಿಮ್ಮ ಆಯುಷ್ಯ ಮುಗಿಯಿತು!! ಎಂದು ಹೇಳಿದನು.
ಆಗ ಶ್ರೀ ರಾಮಚಂದ್ರ, ಲಕ್ಷ್ಮಣನಿಗೆ ಹೇಳಿದನು “ಈ ಘೋರ ರಕ್ಕಸನು ನಮ್ಮನ್ನು ಕೈಗಳಿಂದ ಬಾಯಿಯೊಳಗೆ ಇಟ್ಟುಕೊಳ್ಳುವ ಮೊದಲು ಇವನ ಕೈಯನ್ನೇ ಕಡಿದುಬಿಡೋಣ, ಕೈ ಕಡಿದ ಮೇಲೆ ಹಾಗೆಯೇ ಬಿಟ್ಟು ಮುಂದುವರೆಯೋಣ” ಎಂದನು. ಈ ಮಾತನ್ನು ಕೇಳಿದ ರಕ್ಕಸನು ಗಹಗಹಿಸಿ ನಗುತ್ತಾ ರಾಮ ಲಕ್ಷ್ಮಣರನ್ನು ತಿನ್ನಲು ಮುಂದಾದನು. ಆಗ ರಾಮ-ಲಕ್ಷ್ಮಣರು ರಾಕ್ಷಸನ ಬಾಹುಗಳನ್ನು ಕಡಿದರು. ಆಗ ಕಬಂದನು ಆಕಾಶ ಭೂಮಿಯೇ ಒಂದಾಗುವಂತೆ ಆರ್ತನಾದ ಮಾಡಿ, ರಾಮ–ಲಕ್ಷ್ಮಣರನ್ನು ನೀವು ಯಾರೆಂದು ಕೇಳಿದನು. ಆಗ ಲಕ್ಷ್ಮಣನು ರಾಮನ ಪರಿಚಯದಿಂದ ಆರಂಭಿಸಿ ಸೀತಾಪಹರಣದವರೆಗಿನ ಕಥೆಯನ್ನು ಹೇಳಿದನು.
ನೀನು ಯಾರು?? ಎಂದು ಲಕ್ಷ್ಮಣನು ಕಬಂಧನನ್ನು ಪ್ರಶ್ನಿಸಿದನು. ಲಕ್ಷ್ಮಣನ ಮಾತುಗಳನ್ನು ಕೇಳಿದ ಕಬಂಧನಿಗೆ ಪರಮಾನಂದವಾಯಿತು. “ನಾನೊಬ್ಬ ಗಂಧರ್ವ!! ನನ್ನ ಹೆಸರು ‘ದನು’ವೆಂದು. ನನಗೆ ಇಂದ್ರನು ತನ್ನ ವಜ್ರಾಯುಧದಿಂದ ಹೊಡೆದು ತಲೆಯನ್ನು ಹೊಟ್ಟೆಗೆ ಸೇರಿಸಿದನು. ಅದೃಷ್ಟ ನಿಮ್ಮಿಬ್ಬರನ್ನು ಕಂಡೆ ನಾನು, ನನ್ನ ಭಾಗ್ಯ ತೆರೆಯಿತು, ಇದು ನನ್ನ ನಿಜವಾದ ರೂಪ ಅಲ್ಲ. ಮೊದಲು ಅತಿ ಸುಂದರವಾದ ಕಲ್ಪನೆಗೆ ಮೀರಿದ ರೂಪ ಇತ್ತು. ಚೆಂದವಾದ ರೂಪ ಇದ್ದರೂ ಬೇರೆಯವರನ್ನು ಹೆದರಿಸಲೆಂದೇ ರಾಕ್ಷಸನ ರೂಪವನ್ನು ಧಾರಣೆ ಮಾಡುತ್ತಿದ್ದೆ. ಒಮ್ಮೆ ‘ಸ್ಥೂಲಶಿರ’ ಎಂಬ ಋಷಿಯ ಮುಂದೆ ರಾಕ್ಷಸನ ರೂಪ ಪ್ರಕಟಿಸಿ ಭಯಪಡಿಸಲು ಪ್ರಯತ್ನಿಸಿದಾಗ, ಋಷಿಗಳು “ಇದೆ ರೂಪವೇ ಶಾಶ್ವತವಾಗಲಿ” ಎಂದು ಶಪಿಸಿದರು. ಆಗ ಶಾಪವಿಮೋಚನೆ ಹೇಗೆ ಎಂದು ಕೇಳಿದಾಗ ಋಷಿಗಳು ಮುಂದೆ ರಾಮನು ನಿನ್ನ ಬಳಿಗೆ ಬಂದಾಗ, ರಾಮನು ನಿನ್ನ ಭುಜಗಳನ್ನು ಕಡಿದು ನಿನ್ನನ್ನು ಸುಡುವನು, “ರಾಮನ ಕೈಯಿಂದ ಸಂಸ್ಕಾರವಾದಗ ನಿನಗೆ ಮೂಲರೂಪ ಮರಳಿ ಪ್ರಾಪ್ತವಾಗುತ್ತದೆ” ಎಂದು ಹೇಳಿದ್ದನ್ನು ನೆನಪಿಸಿಕೊಂಡನು. ಶಾಪ ಬಂದ ಮೇಲೆ ತಪಸ್ಸನ್ನು ಮಾಡಿ ದೀರ್ಘಾಯುಸ್ಸನ್ನು ಪಡೆದುಕೊಂಡೆ ಎಂದು ಕಬಂಧನು ರಾಮ – ಲಕ್ಷ್ಮಣರಿಗೆ ಹೇಳಿದನು.
ಮಾತನ್ನು ಮುಂದುವರೆಸಿದ ಕಬಂಧನು ರಾಮನಿಗೆ ಇನ್ನೊಂದು ವಿನಂತಿ ಮಾಡಿದನು, ದಯವಿಟ್ಟು ನೀವು ನನ್ನ ‘ಶರೀರವನ್ನು ಸುಡಬೇಕು’ಎಂದು ಹೇಳಿದನು. “ನಾನು ನಿಮಗೆ ಸೀತೆಯನ್ನು ಮರಳಿ ಪಡೆಯುವಲ್ಲಿ ಮುಂದಿನ ಮಾರ್ಗವನ್ನು ಹೇಳಬಲ್ಲೆ”!! ‘ಆದರೆ ಈ ಸ್ಥಿತಿಯಲ್ಲಿ ನನಗೆ ದಿವ್ಯದೃಷ್ಟಿ ಇಲ್ಲ ‘ಎಂದು ಹೇಳಿದನು!. “ನಿನಗೆ ದಹನ ಸಂಸ್ಕಾರವನ್ನು ಕೊಟ್ಟರೆ ಸೀತೆಯನ್ನು ಹುಡುಕುವ ದಾರಿಯನ್ನು ಹೇಳುವೆಯಾ..?” ಎಂದು ರಾಮನು ಪ್ರಶ್ನಿಸಿದನು. ಆಗ ಕಬಂದನು ‘ನನಗೆ ಈಗ ಪೂರ್ಣ ಜ್ಞಾನ ಇಲ್ಲ. ದಹನ ಸಂಸ್ಕಾರ ಮಾಡಿದ ಮೇಲೆ ಪೂರ್ಣ ಜ್ಞಾನ ಬರುತ್ತದೆ. ಸೂರ್ಯಾಸ್ತದ ಒಳಗೆ ದಹನ ಸಂಸ್ಕಾರವನ್ನು ಮಾಡಿ ನಂತರ ದಾರಿಯನ್ನು ಹೇಳುತ್ತೇನೆ’ ಎಂದು ಹೇಳಿದನು. ರಾಮ – ಲಕ್ಷ್ಮಣರು ಕಬಂಧನು ಹೇಳಿದ ರೀತಿಯಲ್ಲಿ ಕಟ್ಟಿಗೆ ರಾಶಿ ಮಾಡಿ, ಅದರಲ್ಲಿ ಕಬಂದನನ್ನು ತಳ್ಳಿದರು ಲಕ್ಷ್ಮಣನು ಎಲ್ಲ ದಿಕ್ಕಿನಿಂದಲೂ ಅಗ್ನಿ ಸ್ಪರ್ಶ ಮಾಡಿದನು!!
ನಂತರ ದಿವ್ಯ ತೇಜಸ್ಸಿನಿಂದ ದಿವ್ಯರೂಪವನ್ನು ಪಡೆದ ಆ ಗಂಧರ್ವನು ರಾವಣನ ಮಾಹಿತಿಯನ್ನು ಸುಗ್ರೀವನೆಂಬ ವಾನರನು ನೀಡುವನು. ಅಲ್ಲಿ ಮತಂಗ ಮುನಿಯ ಆಶ್ರಮವೂ ಇದೆ. ಈಗ ಶಬರಜ್ಜಿ ಎಂಬ ಮಾತಂಗರ ಶಿಷ್ಯೆ ವಾಸಿಸುತ್ತಿರುವಳು. ಅವಳು ಏನನ್ನೋ ನಿರೀಕ್ಷಿಸುತ್ತಿರುವಳು! ಸುಗ್ರೀವನಲ್ಲಿ ಸಖ್ಯ ಮಾಡಿಕೊಳ್ಳುವಂತೆ ತಿಳಿಸಿ, ಸುಗ್ರೀವನ ಸಹಾಯದಿಂದ ಸೀತಾನ್ವೇಷಣೆ ಸಾಧ್ಯ ಎನ್ನುವ ಸೂಚನೆ ನೀಡಿ ಅದೃಶ್ಯನಾದನು!!!
ಶ್ರೀರಾಮ ಲಕ್ಷ್ಮಣರು ಮಾತಂಗ ಋಷಿಯ ಆಶ್ರಮದತ್ತ ಹೊರಟರು….
–ಸಂಗೀತಾ ವೈದ್ಯ