ಯಾದಗಿರಿ ವಕೀಲರ ಧರಣಿಗೆ ಬೆಂಬಲಿಸಿ ಶಹಾಪುರ ವಕೀಲರಿಂದ ಕಲಾಪ ಬಹಿಷ್ಕಾರ
ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಭೂಮಿ ಕಲ್ಪಿಸಲು ಆಗ್ರಹ
ಯಾದಗಿರಿ: ಜಿಲ್ಲಾ ನ್ಯಾಯಾಲಯದ ಸಂಕೀರ್ಣ ನಿರ್ಮಾಣಕ್ಕೆ ಭೂಮಿ ನೀಡುವಂತೆ ಒತ್ತಾಯಿಸಿ ಯಾದಗಿರಿ ವಕೀಲರ ಸಂಘವು ಗುರುವಾರದಿಂದ ನಡೆಸುತ್ತಿರುವ ಧರಣಿಗೆ ಶಹಾಪುರ ವಕೀಲರ ಸಂಘವು ಬೆಂಬಲ ಸೂಚಿಸಿದೆ. ಇಂದು ವಕೀಲರು ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು. ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಭೂಮಿ ನೀಡುವಂತೆ ಹಲವು ವರ್ಷದಿಂದ ವಕೀಲರ ಸಂಘವು ನಿರಂತರವಾಗಿ ಹೋರಾಟ ನಡೆಸುತ್ತಿದೆ. ಅನೇಕ ಸಲ ಪ್ರತಿಭಟನೆ, ಧರಣಿ ನಡೆಸಿದರೂ ಸರ್ಕಾರ ಮಾತ್ರ ಸ್ಪಂದಿಸುತ್ತಿಲ್ಲ ಎಂದು ವಕೀಲರು ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿದಾಗ ಅವರು ನೀಡಿದ ಭರವಸೆ ಇಲ್ಲಿವರೆಗೂ ಭರವಸೆಯಾಗಿಯೇ ಉಳಿದಿದೆ. ಹೀಗಾಗಿ ಶನಿವಾರದವರೆಗೆ ನಮ್ಮ ಸಂಘವು ನ್ಯಾಯಾಲಯದ ಕಲಾಪದಿಂದ ದೂರ ಉಳಿಯಲು ನಿರ್ಧರಿಸಿದೆ ಎಂದು ಸಂಘದ ಸದಸ್ಯ ಅಮರೇಶ ದೇಸಾಯಿ ತಿಳಿಸಿದರು.
ಸಂಘದ ಕಾರ್ಯದರ್ಶಿ ಹೇಮರಡ್ಡಿ ಕೊಂಗಂಡಿ, ಗುರುರಾಜ ದೇಶಪಾಂಡೆ, ಹಿರಿಯ ವಕೀಲರಾದ ಎಸ್.ಶೇಖರ, ಆರ್.ಎಂ.ಹೊನ್ನಾರಡ್ಡಿ, ರಮೇಶ ದೇಶಪಾಂಡೆ, ಸಾಲೋಮನ್ ಆಲ್ಫ್ರೇಡ್, ವಿಶ್ವನಾಥರಡ್ಡಿ ಸಾಹು, ಸಯ್ಯದ ಇಬ್ರಾಹಿಂ ಜಮದಾರ, ಯೂಸೂಫ್ ಸಿದ್ದಕಿ, ಮಲ್ಕಪ್ಪ ಪಾಟೀಲ್, ಮಲ್ಲಿಕಾರ್ಜುನ ಬುಕ್ಕಲ, ಶ್ರಿಮಂತ ಕಂಚಿ, ಲಕ್ಷ್ಮಿನಾರಾಯಣ ಕುಲಕರ್ಣಿ, ಸಂತೋಷ ಸತ್ಯಂಪೇಟೆ, ಅಮರೇಶ ನಾಯಕ, ಶರಣಪ್ಪ ಪ್ಯಾಟಿ, ರಮೇಶ ಸೇಡಂಕರ್, ಬಸ್ಸುಗೌಡ, ವಿಶ್ವನಾಥ ಫಿರಂಗಿ, ಭೀಮಣ್ಣಗೌಡ ಇದ್ದರು.