ಶಹಾಪುರ: ಡೆಂಗ್ಯೂ ಜ್ವರಕ್ಕೆ ಬಾಲಕ ಬಲಿ, ಬಡಾವಣೆ ಸ್ವಚ್ಛತೆಗೆ ಆಗ್ರಹ
ಶಹಾಪುರ: ಡೆಂಗ್ಯೂ ಜ್ವರಕ್ಕೆ ಬಾಲಕ ಬಲಿ
ಯಾದಗಿರಿಃ ಜಿಲ್ಲೆಯ ಶಹಾಪುರ ನಗರದ ಪ್ರವಾಸಿ ಮಂದಿರದ ಹಿಂಭಾಗದ ಕುಂಚಿಕೊರವರ ಬಡಾವಣೆಯಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಬಾಲಕ ಪರಮೇಶ ದುರ್ಗಪ್ಪ (14) ಮಂಗಳವಾರ ಮೃತಪಟ್ಟಿದ್ದಾರೆ.
ಕಳೆದ ಶನಿವಾರ ಡೆಂಗ್ಯೂ ಜ್ವರದ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕಲಬುರ್ಗಿಯ ಖಾಸಗಿ ಆಸ್ಪತ್ರೆವೊಂದಕ್ಕೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.
ಅಲ್ಲದೆ ಮೃತ ಪರಮೇಶ ಅವರ ತಮ್ಮ ಸಂತೊಷ ಸಹ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು ಕಲಬುರ್ಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಂಚಿಕೊರವರ ಬಡಾವಣೆಯಲ್ಲಿ ಸ್ವಚ್ಛತೆ ಹಾಗೂ ಸುರಕ್ಷತೆ ಮರೀಚಿಕೆಯಾಗಿದೆ. ನಗರಸಭೆಯ ಸಿಬ್ಬಂದಿಯಿಂದ ಚರಂಡಿ ಸ್ವಚ್ಛಗೊಳಿಸುವ ಕಾರ್ಯ ನಡೆದಿರುವದಿಲ್ಲ. ಫಾಗಿಂಗ್ ಅಂತು ಮಾಡದೆ ಹಲವು ವರ್ಷಗಳೇ ಕಳೆದಿವೆ. ಆರೋಗ್ಯ ಇಲಾಖೆ ಅಧಿಕಾರಿಗಳು ಇದುವರೆಗೆ ಭೇಟಿ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಈ ಬಡಾವಣೆಯಲ್ಲಿ ಹೆಚ್ಚಾಗಿ ಬಡ ಜನತೆ ವಾಸವಾಗಿದ್ದಾರೆ. ಮೂರು ತಿಂಗಳ ಹಿಂದೆ ಯುವಕನೋವ ಡೆಂಗ್ಯೂ ಜ್ವರದಿಂದ ಬಳಲಿ ಅಸುನೀಗಿದ್ದಾಗ ಜಿಲ್ಲಾಧಿಕಾರಿಯವರು ಭೇಟಿ ನೀಡಿ ಇಲ್ಲಿನ ಪ್ರದೇಶವನ್ನು ಸ್ವಚ್ಛವಾಗಿ ಇಡುವಂತೆ ಸೂಚಿಸಿದ್ದರು.
ಆದರೆ ನಗರಭೆಯ ಸಿಬ್ಬಂದಿ ಮಾತ್ರ ಗಮನಹರಿಸಿಲ್ಲ ಎಂದು ಬಡಾವಣೆಯ ನಿವಾಸಿ ಚಂದ್ರಶೇಖರ ದೇಸಾಯಿ ವಕೀಲರು ಆರೋಪಿಸಿದ್ದಾರೆ.
ಜಿಲ್ಲಾಧಿಕಾರಿ ತಕ್ಷಣ ಭೇಟಿ ನೀಡಿ ಇಲ್ಲಿನ ಪ್ರದೇಶವನ್ನು ಸ್ವಚ್ಛಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.