ನಿಜಗುಣಾನಂದ ಶ್ರೀಗಳಿಂದ ಕರಪತ್ರ, ಭಿತ್ತಿಪತ್ರ ಬಿಡುಗಡೆ
ಡಿ.14ರಂದು ಉಚಿತ ಸಾಮೂಹಿಕ ವಿವಾಹ ಸಮಾರಂಭ
ಯಾದಗಿರಿ, ಶಹಾಪುರಃ ಮಾಜಿ ಮಂತ್ರಿ ದಿವಂಗತ ಬಾಪುಗೌಡ ದರ್ಶನಾಪುರವರ 31 ನೇಯ ಪುಣ್ಯಸ್ಮರಣೆ ಸ್ಮರಣಾರ್ಥವಾಗಿ ಮುಂಬರುವ ಡಿ. 14ರಂದು ನಗರದ ರಾಖಂಗೇರಾ ಗ್ರಾಮದಲ್ಲಿನ ವಗ್ಗರಾಯಣ್ಣ ಮುತ್ಯಾನವರ ಸನ್ನಿಧಾನದಲ್ಲಿ ಉಚಿತ ಸಾಮೂಹಿಕ ಮದುವೆ ಸಮಾರಂಭ ಆಯೋಜಿಸಲಾಗಿದೆ ಎಂದು ಬಿಲ್ವಂಕೊಂಡಿಮಠದ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ನಗರದ ಬಿಲ್ವಂಕೊಂಡಿಮಠದಲ್ಲಿ ನಡೆದ ಸಾಮೂಹಿಕ ವಿವಾಹದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಇಂದಿನ ದಿನಮಾನಗಳಲ್ಲಿ ಅಗತ್ಯತೆಗಿಂತ ಹೆಚ್ಚಾಗಿ ಮದುವೆ ಸಮಾರಂಭಗಳಲ್ಲಿ ಖರ್ಚು ಮಾಡುತ್ತಿರುವದನ್ನು ನಾವೆಲ್ಲ ಕಂಡಿದ್ದೇವೆ. ಅದಕ್ಕೆಲ್ಲ ಕಡಿವಾಣ ಹಾಕಬೇಕಿದೆ. ಬಡವರು ಮಕ್ಕಳ ಮದುವೆಗೆ ಜೀವಮಾನವಿಡಿ ದುಡಿದು ಕೂಡಿಟ್ಟ ಹಣ ಖರ್ಚು ಮಾಡಿದರು ಸಾಲದಂತ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಸರಳ ಉಚಿತ ಸಾಮೂಹಿಕ ಮದುವೆಯೇ ಮದ್ದು. ಹೀಗಾಗಿ ಸರ್ವರು ಈ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಬೇಕು. ದಿವಂಗತ ಬಾಪುಗೌಡ ದರ್ಶನಾಪುರ ಅವರ ಪುಣ್ಯಸ್ಮರಣೆ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದಿ.ಬಾಪುಗೌಡರು ಈ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ನೂರಾರು ಬಡ ಕುಟುಂಬಗಳ ಬದುಕಿಗೆ ಅವರು ದಾರಿ ದೀಪವಾಗಿದ್ದಾರೆ. ಇಂದಿಗೂ ಪ್ರತಿ ಹಳ್ಳಿಯಲ್ಲಿ ಬಾಪುಗೌಡರ ಹೆಸರೇಳಿ ದೀಪ ಮೂಡಿಸುವಂತೆ ಕುಟುಂಬಗಳನ್ನು ನಾವೆಲ್ಲ ಕಾಣಬಹುದು. ಅಂತಹ ಮಹಾನ್ ವ್ಯಕ್ತಿಯ ಪಯಣ್ಯಸ್ಮರಣೆ ಅಂಗವಾಗಿ ಪುಣ್ಯದ ಕೆಲಸ ಮಾಡುವ ಮೂಲಕ ಅವರಿಗೆ ನಮನಗಳನ್ನು ಸಲ್ಲಿಸಬೇಕೆಂಬ ಉದ್ದೇಶದಿಂದ ಈ ಸಮಾರಂಭ ಆಯೋಜಿಸಲಾಗಿದೆ. ಈ ಕಾರ್ಯಕ್ರಮ ಪಕ್ಷಾತೀತ ಜಾತ್ಯಾತೀತವಾಗಿದೆ. ಇಲ್ಲಿ ಬಾಪುಗೌಡರು ಈ ಹಿಂದೆ ಈ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಗುರುತಿಸಿ ಅವರ ಪುಣ್ಯಸ್ಮರಣೆ ಅಂಗವಾಗಿ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ ವಿನಃ ಇಲ್ಲಿ ಯಾವುದೇ ರಾಜಕೀಯ, ಪಕ್ಷ, ಪಂಥ ಎಂಬ ಭಿನವಿಲ್ಲ ಎಂದು ತಿಳಿಸಿದರು.
ಮಡ್ನಾಳ ಗ್ರಾಮದ ಅಲ್ಲಮಪ್ರಭುಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಸರಳ ಸಾಮೂಹಿಕ ವಿವಾಹ ಪ್ರಸಕ್ತ ವರ್ಷದಲ್ಲಿ ಅಗತ್ಯವಿದ್ದು, ಇದೊಂದು ಉತ್ತಮ ಕಾರ್ಯವಾಗಿದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕಿದೆ. ಕಳೆದ ಎರಡು ಮೂರು ವರ್ಷಗಳಿಂದ ರೈತಾಪಿ ಜನರು ಒಂದಿPಲ್ಲೊಂದು ಸಂಕಷ್ಟ ಎದುರಿಸುತ್ತಿದ್ದಾರೆ. ನೆರೆ ಹಾವಳಿ, ಅತಿವೃಷ್ಠಿ, ಅನಾವೃಷ್ಠಿ ಹೀಗೆ ಸಾಲು ಸಾಲು ಕಷ್ಟಗಳಲ್ಲಿ ಮುಳುಗಿರುವಾಗ ಮನೆಯಲ್ಲಿ ವಯಸ್ಸಿಗೆ ಬಂದ ಮಕ್ಕಳ ಮದುವೆ ಮಾಡುವದು ಕಷ್ಟದ ಕೆಲಸ. ಹೀಗಾಗಿ ಪ್ರತಿ ಗ್ರಾಮಕ್ಕೂ ಈ ಕುರಿತು ಮಾಹಿತಿ ಹೋಗಬೇಕು. ಯಾವುದೇ ಹಿಂದೆ ಮುಂದೆ ತುಳಿಯದೆ ಸಾಮೂಹಿಕ ವಿವಾಹದಲ್ಲಿ ತಮ್ಮ ಮಕ್ಕಳನ್ನು ಮದುವೆಯಾಗಲು ಪ್ರೇರಿಪಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಿಶ್ವನಾಥರಡ್ಡಿ ಪಾಟೀಲ್ ದರ್ಶನಾಪುರ, ಬಸವರಾಜ ಹೇರುಂಡಿ, ವಸಂತಕುಮಾರ ಸುರಪುರಕರ್, ರೇವಣಸಿದ್ದಪ್ಪ ಕಲಬುರ್ಗಿ, ರವಿಕುಮಾರ ಎದುರಮನಿ, ಮಹಾದೇವಯ್ಯ ಸ್ವಾಮಿ, ಶಿವುಕುಮಾರ ಕನ್ಯಾಕೋಳೂರ, ತಿರುಪತಿ ಬಾಣತಿಹಾಳ, ಶಿವುಕುಮಾರ ಬಿಲ್ಲಂಕೊಂಡಿ ಇದ್ದರು.
ಮದುವೆಯಾಗುವ ವಧುವಿಗೆ 18 ವರ್ಷ, ವರನಿಗೆ 21 ವರ್ಷ ತುಂಬಿರಬೇಕು. ಜೊತೆಗೆ ಆಆರ ಕಾರ್ಡ್, ಜನ್ಮ ದಿನಾಂಕ ಪತ್ರ, ಭಾವಚಿತ್ರ, ವೋಟರ ಐಡಿ ಕಾರ್ಡ್‍ಗಳ ಪ್ರತಿಗಳನ್ನು ಹೆಸರು ನೋಂದಾಯಿಸುವಾಗ ಕೊಡತಕ್ಕದ್ದು ಎಂದು ಆಯೋಜಕರು ತಿಳಿಸಿದ್ದಾರೆ.
ಡಿ.2 ರೊಳಗೆ ಹೆಸರು ನೋಂದಾಯಿಸಬೇಕು. ವಧುವರರ ನೋಂದಣಿ ಕೇಂದ್ರವನ್ನು ನಗರದ ಚರಬಸವೇಶ್ವರ ಶಾಲೆಯಲ್ಲಿ ತೆರೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8197307896, 8105664013, 9449467758 ಸಂಪರ್ಕಿಸಲು ಕೋರಿದ್ದಾರೆ.