ಅತ್ಯಾಚಾರ ಆರೋಪಿಗಳಿಗೆ ಎನ್‍ಕೌಂಟರ್‍ಃ ವಿದ್ಯಾರ್ಥಿನಿಯರಿಂದ ಸ್ವಾಗತ
ಮೃತ ಪಶುವೈದ್ಯೆಗೆ ಶ್ರದ್ಧಾಂಜಲಿ ಅರ್ಪಿಸಿದ ವಿದ್ಯಾರ್ಥಿ, ನಾಗರಿಕರು
ಯಾದಗಿರಿ, ಶಹಾಪುರಃ ತೆಲಂಗಾಣದ ಹೈದ್ರಾಬಾದ್‍ನಲ್ಲಿ ಪಶು ವೈದ್ಯೆ ಮೇಲೆ ನಡೆದಿದ್ದ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿರುವದನ್ನು ಸ್ವಾಗತಿಸಿದ ಹರ್ಷ ವ್ಯಕ್ತಪಡಿಸಿದ ಇಲ್ಲಿನ ನಾಗರಿಕರ ಹೋರಾಟ ಸಮಿತಿ ಹಾಗೂ ವಿದ್ಯಾರ್ಥಿನಿಯರು ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡು ತೆಲಂಗಾಣ ಪೊಲೀಸರಿಗೆ ಜಯಕಾರ ಹಾಕಿದರು ಅಲ್ಲದೆ ಮೃತ ಪಶುವೈದ್ಯೆಗೆ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಗುರು ಕಾಮಾ, ಹೈದ್ರಾಬಾದ್‍ನಲ್ಲಿ ನಡೆದ ಅತ್ಯಾಚಾರ ಪ್ರಕರಣ ಇಡಿ ದೇಶದಾದ್ಯಂತ ತಲ್ಲಣಗೊಳಿಸಿತ್ತು. ಮಹಿಳೆಯರು, ವಿದ್ಯಾರ್ಥಿನಿಯರಿಂದ ಖಂಡನೆ ವ್ಯಕ್ತವಾಗಿತ್ತು. ಆದರೆ ಕಾಮುಕ ಆರೋಪಿಗಳನ್ನು ಜೈಲಿಗೆ ಅಟ್ಟಿದರೆ ಸಾಲದು ಅವರನ್ನು ಗಲ್ಲಿಗೇರಿಸಬೇಕೆಂಬ ಒಕ್ಕೊರಲಿನ ಧ್ವನಿ ಹೆಚ್ಚಾಗಿ ಕೇಳಿ ಬಂದಿತ್ತು.
ಅಷ್ಟರಲ್ಲಿಯೇ ತೆಲಂಗಾಣದ ಪೊಲೀಸರು ಕೇವಲ ಹತ್ತು ದಿನಗಳಲ್ಲಿ ಕಾಮುಕ ನಾಲ್ವರು ಆರೋಪಿಗಳನ್ನು ಎನ್‍ಕೌಂಟರ್ ಮಾಡುವ ಮೂಲಕ ಮೃತ ಪಶು ವೈದ್ಯೆಯ ಆತ್ಮಕ್ಕೆ ಶಾಂತಿ ನೀಡುವ ಮತ್ತು ದೇಶದ ಜನರು ಮೆಚ್ಚುವಂತಹ ಕಾರ್ಯ ಮಾಡಿದ್ದಾರೆ ಎಂದರು.
ಇದೇ ವೇಳೆ ಮುಖಂಡರಾದ ಸಯ್ಯದ್ ಖಾದ್ರಿ, ಬಸವರಾಜ ರತ್ನಾಳ, ಇಫ್ತಿಯಾರ್ ಖುರೇಶಿ, ಮೌನೇಶ್ ನಾಟೇಕಾರ, ಲಾಲನಸಾಬ ಖುರೇಶಿ, ಭೀಮು ಶಾಖಾಪುರ, ಕರೀಂ ದರ್ಬಾನ್, ಭೀಮರಾಯ ತಳವಾರ, ದೇವು ಬಿ.ಗುಡಿ, ಶರಣಗೌಡ ಕಟ್ಟಿಮನಿ, ಮಲ್ಲು ನಗನೂರ, ಶಕೀಲ್ ಮುಲ್ಲಾ, ಉಮೇಶ ಬಾಗೇವಾಡಿ, ರಫೀಕ್ ಚೌದ್ರಿ, ತಲಕ್ ಚಾಂದ್ ಸೇರಿದಂತೆ ನಗರದ ಸರ್ಕಾರಿ ಬಾಲಕಿಯರ ಪಿಯು ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಇದೇ ವೇಳೆ ಮೃತ ಪಶುವೈದ್ಯೆ ಆತ್ಮಕ್ಕೆ ಶಾಂತಿಕೋರಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.