ಜನಮನ

ಶಹಾಪುರ ಮತಕ್ಷೇತ್ರದ ಒಡಲು ಕೌಟುಂಬಿಕ ರಾಜಕೀಯ ತೊಟ್ಟಿಲು!

-ವಿನಯ ಮುದನೂರ್

ರಾಜಕೀಯ ಧುರೀಣ

ಅವರು ಬಾಪುಗೌಡ ದರ್ಶನಾಪುರ. ಬಾಪುಗೌಡ ದರ್ಶನಾಪುರ ಎಂಬ ಹೆಸರು ಕೇಳಿದರೆ ಸಾಕು ಸಗರನಾಡು ಅಷ್ಟೇ ಅಲ್ಲ ಇಡೀ ರಾಜ್ಯದ ಜನರಲ್ಲಿ ಗೌರವ ಭಾವ ಮೂಡುತ್ತದೆ. ಹಿರಿಯ ನಾಗರೀಕರಿಂದ ಹಿಡಿದು ಪುಟ್ಟ ಮಕ್ಕಳವರೆಗೆ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದ ಪರಿ ಅನುಕರಣೀಯ. ಲೆಕ್ಕವಿಲ್ಲದಷ್ಟು ಜನರಿಗೆ ಉದ್ಯೋಗ ಕೊಡಿಸಿದ ಮಹಾನುಭಾವ. ಸಮಾಧಾನ ಚಿತ್ತದಿಂದ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುತ್ತಿದ್ದ ಮುತ್ಸದ್ದಿ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ ಅನೇಕ ಜನಪರ ಯೋಜನೆಗಳನ್ನು ಸಾಕಾರಗೊಳಿಸಿದವರು.

ದಿ. ಬಾಪೂಗೌಡ ದರ್ಶನಾಪುರ, ಮಾಜಿ ಸಚಿವರು

ಅಧಿಕಾರಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಬಾಪೂಗೌಡ ದರ್ಶನಾಪುರ ಖಡಕ್ ರಾಜಕಾರಣಿಯೂ ಹೌದು. ಎಂದಿಗೂ ಕುಗ್ಗದ, ಯಾರಿಗೂ ಬಗ್ಗದ ಗಂಡೆದೆಯ ನಾಯಕರಾಗಿದ್ದರು. ಪರಿಣಾಮ ಶಾಸಕರಾಗಿ, ಸಚಿವರಾಗಿ ಪರಿಣಾಮಕಾರಿ ಕಾರ್ಯ ನಿರ್ವಹಿಸಿದ್ದರು. ಜನಾನುರಾಗಿ ಆಗಿ ನಾಡಿನ ಜನಮನ ಗೆದ್ದಿದ್ದರು. 1972 ಮತ್ತು 1983ರಲ್ಲಿ ಜನತಾ ಪಕ್ಷದಿಂದ ಶಹಾಪುರ ಮತಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದ ಬಾಪೂಗೌಡ ದರ್ಶನಾಪುರ 1985ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಬ್ಯರ್ಥಿಯಾಗಿದ್ದ ಶಿವಶೇಖರಪ್ಪ ಶಿರವಾಳ ಅವರ ವಿರುದ್ಧ ಸೋಲುಂಡರು.

ಸಜ್ಜನ ರಾಜಕಾರಣಿ

1985ರಲ್ಲಿ ಶಿವಶೇಖರಪ್ಪಗೌಡ ಶಿರವಾಳ ಎಂಬ ಯುವ ನಾಯಕ ಶಹಾಪುರ ಮತಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಠಿಸಿದರು. ಸರಳ, ಸಂಭಾವಿತ, ಸಜ್ಜನ ರಾಜಕಾರಣಿಯಾಗಿ ಹೊರ ಹೊಮ್ಮಿದ ಶಿವಶೇಖರಪ್ಪಗೌಡ ಶಿರವಾಳ ಅವರು ಮುತ್ಸದ್ದಿ ರಾಜಕಾರಣಿ ಬಾಪುಗೌಡ ದರ್ಶನಾಪುರ ಅವರನ್ನು ಸೋಲಿಸಿದರು. ಬಡವ ಬಲ್ಲಿದ ಎಂದು ತಾರತಮ್ಯ ಮಾಡದೆ ಎಲ್ಲರನ್ನೂ ಸಮನಾಗಿ ಗೌರವ ಭಾವದಿಂದ ಕಂಡರು. ಕಷ್ಟ ಎಂದು ಬಂದವರಿಗೆ ಎಂದೂ ಬರಿಗೈಲಿ ಕಳುಹಿಸಿದವರಲ್ಲ.

ದಿ. ಶಿವಶೇಖರಪ್ಪಗೌಡ ಶಿರವಾಳ, ಮಾಜಿ ಶಾಸಕರು

ಜನಸಾಮಾನ್ಯರಿಗೆ ಮಾತ್ರವಲ್ಲ ಅಧಿಕಾರಿ ವರ್ಗಕ್ಕೂ ಅಚ್ಚು ಮೆಚ್ಚಾಗಿದ್ದವರು. ಸದಾ ಹಸನ್ಮುಖಿ ಶಿವಶೇಖರಪ್ಪಗೌಡ ಶಿರವಾಳ ಎಂದೂ ಸಿಟ್ಟಾಗಿದ್ದನ್ನು ಯಾರೊಬ್ಬರೂ ನೋಡಿಲ್ಲ. ಅಪರೂಪದ ಸಜ್ಜನ ರಾಜಕಾರಣಿಯಾಗಿ ಅನೇಕ ಜನಪರ ಕಾರ್ಯಗಳ ಮೂಲಕ ಕ್ಷೇತ್ರದ ಜನಮಾನಸದಲ್ಲಿ ನೆಲೆಯೂರಿದವರು ಶಿವಶೇಖರಪ್ಪಗೌಡ ಶಿರವಾಳ. ಪರಿಣಾಮ 1985ರಲ್ಲಿ ಗೆದ್ದಿದ್ದ ಇವರು 1989ರಲ್ಲಿ ಮರುಆಯ್ಕೆ ಆಗಿದ್ದರು.

ಹೀಗೆ ಬಾಪುಗೌಡ ದರ್ಶನಾಪುರ ಹಾಗೂ ಶಿವಶೇಖರಪ್ಪಗೌಡ ಶಿರವಾಳ ಎಂಬ ಇಬ್ಬರು ಧೀಮಂತ ನಾಯಕರು ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅಭಿಮಾನಿಗಳನ್ನು ಹುಟ್ಟು ಹಾಕಿದ್ದಾರೆ. ಪರಿಣಾಮ ಶಹಾಪುರ ಮತಕ್ಷೇತ್ರದಲ್ಲಿ ಪಕ್ಷಗಳು ಗೌಣವಾಗಿದ್ದು ಈ ಎರಡೂ ಕುಟುಂಬಗಳಿಗೆ ಮತದಾರರು ನಿಷ್ಠೆ ಪ್ರಕಟಿಸುತ್ತ ಸಾಗಿದ್ದಾರೆ.

ಮೂರು ದಶಕದ ಕದನ

1985ರಲ್ಲಿ ಶುರುವಾದ ದರ್ಶನಾಪುರ ವರ್ಸೆಸ್ ಶಿರವಾಳ ಫೈಟ್ ಇಂದಿಗೂ ಮುಂದುವರೆದಿದೆ. ಹೌದು, 1994ರಲ್ಲಿ ಜನತಾದಳದಿಂದ ಚುನಾವಣ ಕಣಕ್ಕಿಳಿದ ಬಾಪುಗೌಡ ದರ್ಶನಾಪುರ ಅವರ ಪುತ್ರ ಶರಣಬಸ್ಸಪ್ಪಗೌಡ ದರ್ಶನಾಪುರ ಅವರು ಶಿವಶೇಖರಪ್ಪಗೌಡ ಶಿರವಾಳ ಅವರಿಗೆ ಸೋಲುಣ್ಣಿಸುತ್ತಾರೆ. ಮೊದಲ ಬಾರಿಗೇ ಮಂತ್ರಿಯಾಗುತ್ತಾರೆ. 1999ರಲ್ಲಿ ನಡೆದ ಚುನಾವಣೆಯಲ್ಲಿ ಶಿವಶೇಖರಪ್ಪಗೌಡ ಶಿರವಾಳ ಅವರು ಜೆಡಿ(ಯು) ಅಬ್ಯರ್ಥಿಯಾಗಿದ್ದ ಶರಣಬಸ್ಸಪ್ಪಗೌಡ ದರ್ಶನಾಪುರ ಅವರನ್ನು ಮಣಿಸಿ ಮತ್ತೆ ಶಾಸಕರಾಗುತ್ತಾರೆ. 2004ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಬ್ಯರ್ಥಿಯಾಗಿ ಅಖಾಡಕ್ಕಿಳಿದ ಶರಣಬಸ್ಸಪ್ಪಗೌಡ ದರ್ಶನಾಪುರ ಅವರು ಶಿವಶೇಖರಪ್ಪಗೌಡ ಶಿರವಾಳರಿಗೆ ಎರಡನೇ ಬಾರಿಗೆ ಸೋಲಿಸುತ್ತಾರೆ.

ಶರಣಬಸ್ಸಪ್ಪಗೌಡ ದರ್ಶನಾಪುರ, ಮಾಜಿ ಸಚಿವರು

ಅದೇ ಅಬ್ಯರ್ಥಿಗಳು, ಪಕ್ಷ ಮಾತ್ರ ಅದಲು ಬದಲು!

2008ರ ಚುನಾವಣೆಯಲ್ಲಿ ಇಬ್ಬರ ಪಕ್ಷವೇ ಅದಲು ಬದಲು ಆಗಿರುತ್ತದೆ. ಶರಣಬಸ್ಸಪ್ಪಗೌಡ ದರ್ಶನಾಪುರ ಕಾಂಗ್ರೆಸ್ ಪಕ್ಷದ ಅಬ್ಯರ್ಥಿಯಾಗಿ ಕಣಕ್ಕಿಳಿದರೆ, ಶಿವಶೇಖರಪ್ಪಗೌಡ ಶಿರವಾಳ ಜೆಡಿಎಸ್ ಪಕ್ಷದ ಅಬ್ಯರ್ಥಿಯಾಗಿ ಎದುರಾಗುತ್ತಾರೆ. ಆಗಲೂ ಶರಣಬಸ್ಸಪ್ಪಗೌಡ ದರ್ಶನಾಪುರ ಕೈ ಮೇಲಾಗುತ್ತದೆ.

ಮಕ್ಕಳ ಫೈಟ್!

2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಾಪುಗೌಡ ದರ್ಶನಾಪುರ ಅವರ ಪುತ್ರ, ಮಾಜಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ, ಶಿವಶೇಖರಪ್ಪಗೌಡ ಶಿರವಾಳ ಅವರ ಪುತ್ರ ಗುರು ಪಾಟೀಲ್ ನಡುವೆ ಚುನಾವಣ ಕದನ ಶುರುವಾಯಿತು. ಶರಣಬಸ್ಸಪ್ಪಗೌಡ ದರ್ಶನಾಪುರ ಕಾಂಗ್ರೆಸ್ ಅಬ್ಯರ್ಥಿ ಆಗಿದ್ದರೆ, ಗುರುಪಾಟೀಲ್ ಶಿರವಾಳ ಕೆಜೆಪಿಯಿಂದ ಕಣಕ್ಕಿಳಿದಿದ್ದರು. ಗುರು ಪಾಟೀಲ್ ಶಿರವಾಳ ಗೆಲುವಿನ ನಗೆ ಬೀರುವ ಮೂಲಕ ಕೌಟುಂಬಿಕ ರಾಜಕಾರಣದ ಓಟ ಮುಂದುವರೆಸಿದರು. ಕೆಜೆಪಿಯಿಂದ ಗೆಲುವು ಸಾಧಿಸಿರುವ ಗುರುಪಾಟೀಲ್ ಬಳಿಕ ಬಿಜೆಪಿ ಸೇರಿದ್ದಾರೆ.

 ಪೂರ್ವಪಶ್ಚಿಮ?

ಹೀಗೆ 1985ರಿಂದ ಶಹಾಪುರ ಮತಕ್ಷೇತ್ರದಲ್ಲಿ ಆರಂಭವಾದ ಕುಟುಂಬ ರಾಜಕಾರಣ ಇಂದಿಗೂ ಅಂತ್ಯವಾಗಿಲ್ಲ. ಅಂತ್ಯವಾಗುವ ಲಕ್ಷಣಗಳೂ ಸದ್ಯಕ್ಕಿಲ್ಲವಾಗಿದೆ. ದರ್ಶನಾಪುರ ಮತ್ತು ಶಿರವಾಳ ಎರಡೂ ಹೋಬಳಿಗಳು ಶಹಾಪುರ ಮತಕ್ಷೇತ್ರದಲ್ಲಿ ವಿರೋಧ ದಿಕ್ಕಿನಲ್ಲೇ ಇವೆ. ಶಿರವಾಳ ಪೂರ್ವದಲ್ಲಿದ್ದರೆ ದರ್ಶನಾಪುರ ಪಶ್ಚಿಮದಲ್ಲಿದೆ. ಅವರವರ ಹೋಬಳಿ ಮೇಲೆ ಎರಡೂ ಕುಟುಂಬದವರು ತಮ್ಮದೇ ಆದ ಹಿಡಿತವನ್ನು ಸಾಧಿಸಿವೆ. ಪರಿಣಾಮ ಶಹಾಪುರ ಮತಕ್ಷೇತ್ರದಲ್ಲಿ ಕಳೆದ 33ವರ್ಷಗಳಿಂದ ಎಡೆಬಿಡದೆ ದರ್ಶನಾಪುರ ಮತ್ತು ಶಿರವಾಳ ಕುಟುಂಬದವರೇ ಅಧಿಪತ್ಯ ಸಾಧಿಸಿದ್ದಾರೆ.

ಗುರು ಪಾಟೀಲ್ ಶಿರವಾಳ, ಹಾಲಿ ಶಾಸಕರು

ದರ್ಶನಾಪುರ ಮತ್ತು ಶಿರವಾಳ ಕುಟುಂಬದ ಅಬ್ಯರ್ಥಿಗಳ ಪಕ್ಷ ಅದಲು ಬದಲಾದರೂ ಸಹ ಕ್ಷೇತ್ರದ ಮತದಾರ ಮಾತ್ರ ಎರಡು ಕುಟುಂಬಗಳನ್ನು ಬಿಟ್ಟು ಕದಲಿಲ್ಲ. ಶಹಾಪುರದ ಶಾಸಕ ಸ್ಥಾನದ ತೊಟ್ಟಿಲನ್ನು ಎರಡು ಕುಟುಂಬಗಳ ಮದ್ಯೆಯೇ ತೂಗುತ್ತಿದ್ದಾನೆ. 2018ರ ಚುನಾವಣೆಯಲ್ಲಿ ಮಾಜಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಕಾಂಗ್ರೆಸ್ ಅಬ್ಯರ್ಥಿಯಾಗಿ, ಹಾಲಿ ಶಾಸಕ ಗುರು ಪಾಟೀಲ್ ಶಿರವಾಳ ಬಿಜೆಪಿ ಅಬ್ಯರ್ಥಿಯಾಗಿ ಮತ್ತೆ ಎದುರಾಗಲಿದ್ದಾರೆ. ಈ ಬಾರಿ ತೊಟ್ಟಿಲು ಪೂರ್ವಕ್ಕೆ ನಿಲ್ಲಲಿದೆಯೋ ಅಥವಾ ಪಶ್ಚಿಮಕ್ಕೆ ಒಲಿಯಲಿದೆಯೋ ಕಾದು ನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button