ಸರ್ವ ಸಮಾಜದ ಬಗ್ಗೆ ಕಳಕಳಿ ಹೊಂದಿದ್ದ ಶರಣ ಚೌಡಯ್ಯ- ದರ್ಶನಾಪುರ
ಚೌಡಯ್ಯನವರಿಂದ ಮನುಕುಲಕ್ಕೆ ಘನತೆ ಗೌರವ- ಗುರು ಪಾಟೀಲ್
ಶರಣ ಚೌಡಯ್ಯನವರ ಪ್ರತಿಮೆ ಅನಾವರಣ, ಸಂಭ್ರಮದ ಮೆರವಣಿಗೆ, ಡಿಜೆ ಸೌಂಡಿಗೆ ಯುವಕರ ಹೆಜ್ಜೆ
ಇಡಿ ಸಮಾಜದ ಕಳಕಳಿ ಹೊಂದಿದ್ದ ಶರಣ ಚೌಡಯ್ಯ- ದರ್ಶನಾಪುರ
ಚೌಡಯ್ಯನವರಿಂದ ಮನುಕುಲಕ್ಕೆ ಘನತೆ ಗೌರವ- ಗುರು ಪಾಟೀಲ್
yadgiri, ಶಹಾಪುರಃ ಗಂಗಾ ಸಮಾಜ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಬೆಳೆಯಬೇಕಿದೆ. ಆ ನಿಟ್ಟಿನಲ್ಲಿ ಸಮಾಜ ಸಂಘಟನಾತ್ಮಕವಾಗಿ ಚಿಂತನೆ ನಡೆಸುವ ಅಗತ್ಯವಿದೆ. ಯಾವುದೇ ಸಮಾಜ ಶೈಕ್ಷಣಿಕವಾಗಿ ಬಲಾಢ್ಯವಾದಾಗ ಮಾತ್ರ ಅಂತಹ ಸಮಾಜ ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಮಾಜಿ ಮಂತ್ರಿ, ಹಾಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ಹಳಿಸಗರ ಭಾಗದ ಶಹಾಪುರ-ಯಾದಗಿರಿ ರಸ್ತೆಗೆ ಹೊಂದಿಕೊಂಡ ಜಾಗದಲ್ಲಿ ನಿಜಶರಣ ಶ್ರೀಅಂಬಿಗರ ಚೌಡಯ್ಯನವರ ಪಂಚಲೋಹದ ಪ್ರತಿಮೆ ಅನಾವರಣಗೊಳಿಸಿ ನಂತರ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಿ.ವಿಠಲ್ ಹೇರೂರೂ ಗಂಗಾ ಸಮಾಜದ ಒಗ್ಗಟ್ಟಿಗೆ ಶ್ರಮಿಸಿದ ಧೀಮಂತ ನಾಯಕ. ಇಂದು ಅವರು ನಮ್ಮ ಮಧ್ಯದಲ್ಲಿ ಇಲ್ಲದಿರುವದು ನೋವು ತಂದಿದೆ. ಆದರೆ ಸಂಘಟನಾ ನಡೆಯನ್ನು ಕಲಿಸಿದ ಅವರಿಗೆ ಸಮಾಜದ ಹಿರಿಯರು ಗೌರವ ಸ್ಮರಣೆ ಮಾಡಲೇಬೇಕಾಗುತ್ತದೆ. ನಿಜ ಶರಣ ಅಂಬಿಗರ ಚೌಡಯ್ಯನವರ ಎಲ್ಲಾ ಜನಾಂಗದ ಇಡಿ ಸಮಾಜಕ್ಕೆ ಅವರು ತಮ್ಮ ಕಠಿಣ ವಚನಗಳ ಮೂಲಕ ಛಾಟಿಯನ್ನು ಬೀಸಿದ್ದಾರೆ. ಅವರ ವಚನಗಳನ್ನು ಅಧ್ಯಯನ ಮಾಡುವ ಮೂಲಕ ಅವರು ತೋರಿದ ಸನ್ಮಾರ್ಗದಡಿ ನಾವೆಲ್ಲ ಸಾಗಬೇಕಿದೆ ಎಂದರು.
ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಮಾತನಾಡಿ, 12 ನೇ ಶತಮಾನದಲ್ಲಿ ವೇಳೆ ಸಮಾಜದಲ್ಲಿ ಎದುರಾಗಿದ್ದ ಅಸಮಾನತೆ ಎಂಬ ಕೆಡಕನ್ನು ತೊಡೆದು ಹಾಕುವ ಮೂಲಕ ಇಡಿ ಮಾನವಕುಲಕ್ಕೆ ಘನತೆ ಗೌರವವನ್ನು ಕೊಟ್ಟವರು ಶರಣ ಚೌಡಯ್ಯನವರು. ನುಡಿದಂತೆ ನಡೆದವರು ಎಂದರೆ ಶರಣ ಚಔಡಯ್ಯನವರು. ಆದರೆ ಪ್ರಸ್ತುತ ಕಾಲದಲ್ಲಿ ಒಬ್ಬರನ್ನೊಬ್ಬರು ಕಂಡರೆ ಆಗದಂತ ಸ್ಥಿತಿ ಅಸೂಯೆಯಿಂದ ಒಬ್ಬರ ಮುಖ ಒಬ್ಬರು ನೋಡದಂತ ಪರಿಸ್ಥಿತಿ ಬಂದೊದಗಿದೆ.
ನಾವೆಲ್ಲ ಮಾನವರೇ ಆದರೆ ನಮ್ಮಗಳ ಮಧ್ಯಯೇ ಒಡಕು ಉಂಟಾಗುತ್ತಿದೆ ಈ ಕುರಿತು ಚಿಂತನೆ ಮಾಡಬೇಕಿದೆ. ಶರಣರು ಹೇಳಿರುವದು ಇದೇ ಸಮಾಜದಲ್ಲಿ ಚಿಂತನೆ ಅಗತ್ಯ. ಏನಾದರೂ ಬದಲಾಗಬೇಕಾದರೆ ಶಿಕ್ಷಣಕ್ಕೆ ಮೊದಲು ಒತ್ತು ಕೊಡಬೇಕಿದೆ. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಏನಾದರೂ ಬದಲಾವಣೆ ತರಲು ಸಾಧ್ಯವಿದೆ. ಇಂದು ಆಸ್ತಿ, ಸಂಪತ್ತು ಅಧಿಕಾರ ಇದ್ದವರು ದೊಡ್ಡವರಲ್ಲ. ಶಿಕ್ಷಣ ಇದ್ದವರು ಮಾತ್ರ ದೊಡ್ಡವರು ಎಂಬುದನ್ನು ಅರಿಯಬೇಕಿದೆ ಎಂದರು.
ಬಿಜೆಪಿ ಯುವ ನಾಯಕ ಅಮೀನರಡ್ಡಿ ಯಾಳಗಿ ಮತ್ತು ಡಾ.ಚಂದ್ರಶೇಖರ ಸುಬೇದಾರ ಮಾತನಾಡಿದರು. ನಿವೃತ್ತ ಆರೋಗ್ಯ ಅಧಿಕಾರಿ ಡಾ.ಮಲ್ಲಿಕಾರ್ಜುನ ಮುಕ್ಕಾ ನಿಜಶರಣ ಅಂಬಿಗರ ಚೌಡಯ್ಯನವರ ಕುರಿತು ಉಪನ್ಯಾಸ ನೀಡಿದರು. ಸಣ್ಣ ನಿಂಗಣ್ಣ ನಾಯ್ಕೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಭವ್ಯ ಸಾನಿಧ್ಯವಹಿಸಿದ್ದ ಹಾವೇರಿಯ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಸಿಂದಗಿಯ ಜಗದ್ಗುರು ಶಾಂತ ಗಂಗಾಧರ ಮಹಾಸ್ವಾಮಿಗಳು ಮಹಲರೋಜಾದ ಪರಶುರಾಮ ಮುತ್ಯಾ, ಕನ್ಯಾಕೋಳೂರದ ಶಿವು ಮುತ್ಯಾ ಸಾನ್ನಿಧ್ಯವಹಿಸಿದ್ದರು. ಮಾಜಿ ಎಂಎಲ್ಸಿ ತಿಪ್ಪಣ್ಣಪ್ಪ ಕಮನಕನೂರ, ಬಿಜೆಪಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಲಲಿತಾ ಅನಪೂರ, ಸಮಾಜದ ಜಿಲ್ಲಾಧ್ಯಕ್ಷ ಹಣಮಂತ ಮಡ್ಡಿ, ಉಮೇಶ ಮುದ್ನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಮಾಜದ ತಾಲೂಕು ಅಧ್ಯಕ್ಷ ಅಯ್ಯಣ್ಣ ಕನ್ಯಾಕೋಳೂರ ಅಧ್ಯಕ್ಷತೆವಹಿಸಿದ್ದರು.
ಮರೆಪ್ಪ ದೊಡ್ಮನಿ ಸ್ವಾಗತಿಸಿದರು. ಮೌನೇಶ ಹಯ್ಯಾಳಕರ್ ನಿರೂಪಿಸಿದರು. ಗೋಪಾಲ ಹಳಿಸಗರ ವಂದಿಸಿದರು. ಬೆಳಗ್ಗೆ 10 ಗಂಟೆಯಿಂದಲೇ ನಗರದ ಪ್ರಮುಖ ಬೀದಿಗಳ ಮೂಲಕ ಸಮಾಜದ ಗುರುಗಳನ್ನು ಸಾರೋಟದ ಮೂಲಕ ಮೆರವಣಿಗೆ ಹೊರಟು ವೇದಿಕೆಗೆ ಕರೆ ತರಲಾಯಿತು. ತಾಲೂಕಿನ ಗ್ರಾಮಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಸೇರಿದ್ದರು.