ಕ್ಷೇತ್ರದ ಅಭಿವೃದ್ಧಿ ಮರಿಚಿಕೆ ದರ್ಶನಾಪುರ ಆರೋಪ
ಹುಸಿಯಾದ ಭರವಸೆಗಳಿಂದ ಜನ ಹತಾಶಯ-ದರ್ಶನಾಪುರ
ಶಿರವಾಳ ವಿರುದ್ಧ ದರ್ಶನಾಪುರ ಗುಡುಗು
ಯಾದಗಿರಿಃ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ ಬಗ್ಗೆ ಜನರಿಗೆ ಯಾವ ಭರವಸೆ, ಆಶ್ವಾಸನೆಗಳನ್ನು ನೀಡಿ ರಾಜಕೀಯ ಮಾಡುವ ಅಗತ್ಯ ನನಗಿಲ್ಲ ಎಂದು ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ಜಿಲ್ಲೆಯ ಶಹಾಪುರ ನಗರದ ಅವರ ಮನೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಗುರು ಪಾಟೀಲ್ ಶಿರವಾಳ, ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ ಬಗ್ಗೆ ಸರ್ಕಾರ ಸುಳ್ಳು ಭರವಸೆ ನೀಡಿದೆ, ಯಾವುದೆ ಹಣ ಮೀಸಲಿಟ್ಟಿಲ್ಲ ಸರ್ಕಾರದ ಮಟ್ಟದಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೆ ಮಾಹಿತಿ ಇಲ್ಲ ಎಂದಿರುವುದು ಸೋಜಿಗವಾಗಿದೆ ಎಂದ ಅವರು, ಬೂದಿಹಾಳ-ಪೀರಾಪುರ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಅನೂಕೂಲವಾಗಲೆಂದು ಏತ ನೀರಾವರಿ ಯೋಜನೆ ಜಾರಿಗೊಳಿಸುವಂತೆ ರೈತ ಸಂಘದ ನೇತೃತ್ವದಲ್ಲಿ ಹಲವಾರು ಬಾರಿ ಹೋರಾಟ ನಡೆಸಿದ ಪ್ರತಿಫಲವಾಗಿ ಈ ಬಾರಿಯ ಬಜೆಟ್ ಮಂಡನೆ ಸಂದರ್ಭದಲ್ಲಿ ಹೆಚ್ಚುವರಿ ನೀರಾವರಿ ಯೋಜನೆಗಾಗಿ ಎಂದು ಅನುಮೋದಿಸಲಾಗಿದ್ದು ಈ ಪ್ರಕ್ರೀಯೆ ಪ್ರಥಮ ಹಂತದಲ್ಲಿ ಕಾರ್ಯರೂಪ ಪಡೆದುಕೊಂಡಿದೆ.
ಇದು ರೈತರ ಹೋರಾಟಕ್ಕೆ ಸಿಕ್ಕ ಪ್ರತಿಫಲವಾಗಿದೆ. ಇದರಲ್ಲಿ ಶಾಸಕರ ಪಾತ್ರ ಸಲ್ಲದು ಎಂದು ಪ್ರತಿಕ್ರೀಯಿಸಿದ ದರ್ಶನಾಪುರವರು, ಕೃಷ್ಣ ಭಾಗ್ಯ ಜಲ ನಿಗಮ ದಿ.15-2-2018ರ ಆದೇಶದನ್ವಯ ಕೆಬಿಜೆಎನ್‍ಎಲ್ ನಿಯಮಗಳನುಸಾರ ಸಮಿತಿ ಒಪ್ಪಿಗೆ ನಂತರವೇ ನಿಗದಿತ ಅನುದಾನದ ಕ್ರೀಯಾಯೋಜನೆಗೆ ಸರ್ಕಾರ ಅನುಮತಿ ನೀಡುತ್ತದೆ. ಈ ಆದೇಶದಂತೆ ಅಂದಾಜು 203 ಕೊ.ರೂ.ಗಳಿಂದ 509 ಕೊ.ರೂಗಳ ಕ್ರೀಯಾ ಯೋಜನೆಯಾಗಬಹುದು ಎಂದು ನಿಗಮದ ಆದೇಶದಲ್ಲಿ ವಿವರಿಸಲಾಗಿದೆ ಎಂದು ತಿಳಿಸಿದರು.
ಈ ಯೋಜನೆ ಕುರಿತು ಸುಳ್ಳು ಎಂದಿರುವ ಶಾಸಕ ಶಿರವಾಳರವರು ವಿಧಾನ ಸಭಾ ಅಧಿವೇಶನದಲ್ಲಿ ಮಾಹಿತಿ ಪಡೆದುಕೊಳ್ಳಬಹುದಾಗಿತ್ತು. ಈ ಯೋಜನೆ ಕುರಿತು ಬಜೆಟ್ ಮಂಡನೆಯಲ್ಲಿ ಪ್ರಕಟಿಸಿರುವುದು ಸುಳ್ಳು ಎಂದು ಪ್ರತಿಪಾದಿಸುವದು ಸಲ್ಲದು ಎಂದಿದ್ದಾರೆ.
ಈ ಹಿಂದೆ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಶಾಸಕ ಗುರು ಪಾಟೀಲರವರು ಹುಸಿಗೊಳಿಸಿ ಜನರನ್ನು ಹತಾಶಯಗೊಳಿಸಿದ್ದಾರೆ ಎಂದು ಆರೋಪಿಸಿದ ಅವರು, ಕ್ಷೇತ್ರದಲ್ಲಿ ಭೀಮಾ ನದಿಯಿಂದ ಶಾಶ್ವತ ಕುಡಿಯುವ ನೀರು ಯೋಜನೆ, ಶಹಾಪುರದಲ್ಲಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ, ರಿಂಗ ರಸ್ತೆ, ನಗರದಲ್ಲಿ ಒಳಚರಂಡಿ ಇನ್ನೂ ಅನೇಕ ಅಭಿವೃದ್ಧಿ ಪರ ಯೋಜನೆಗಳ ಕುರಿತು ನೀಡಿದ ಭರವಸೆಗಳು ಹುಸಿಗೊಂಡಿವೆ ಎಂದು ಆರೋಪಿಸಿದರು.
ಅಲ್ಲದೆ ಯುಜಿಡಿಗೆ ಮೀಸಲಿರಿಸಲಾದ 9 ಕೊ.ರೂಗಳನ್ನು ಬೇರೆಡೆಗೆ ಬಳಸಲಾಗಿದೆ ಎಂದು ಆರೋಪ ಮಾಡಿದ ಅವರು, ಮುಖ್ಯಮಂತ್ರಿಗಳು ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಾಗಿನಿಂದಲೂ ಹಾಗೂ ಸರ್ಕಾರದ ಜನಪರ ಯೋಜನೆ ಜಾರಿಯಿಂದಾಗಿ ಪ್ರಸ್ತುತ ಕ್ಷೇತ್ರದಲ್ಲಿ ಹೆಚ್ಚು ಜನ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಕ್ಷೇತ್ರದಲ್ಲಿ ಎಚ್‍ಕೆಆರ್‍ಡಿಬಿ 1.70 ಕೊ.ವೆಚ್ಚದಲ್ಲಿ ರಸ್ತೆಗಳ ಸುಧಾರಣೆ ಚರಂಡಿಗಳ ನಿರ್ಮಾಣ ತಾಂಡಾಗಳ ಅಭಿವೃದ್ದಿ ಹೀಗೆ ಹತ್ತು ಹಲವು ಕಾಮಗಾರಿಗಳಿಗೆ ಅನುಧಾನ ಕಲ್ಪಿಸಲಾಗಿದೆ.
ಅಲ್ಲದೆ 3 ಯಾತ್ರಿ ನಿವಾಸಗಳ ನಿರ್ಮಾಣಕ್ಕೆ ಅನುದಾನ ಮಂಜೂರಿ ಮಾಡಿದ್ದೇವೆ. ಹಲವಾರು ಗ್ರಾಮಗಳಲ್ಲಿ ಅಕಸ್ಮಿಕ ಸಾವು ಆತ್ಮಹತ್ಯೆಗಳು ಸಂಭವಿಸಿದ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗಳಿಂದ ಅವರಿಗೆ ಲಕ್ಷಾಂತರ ರೂ.ಗಳ ಧನ ಸಹಾಯ ಒದಗಿಸಲಾಗಿದೆ ಎಂದು ತಿಳಿಸಿದರು. ಸದಾ ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂಧಿಸುತ್ತಿದ್ದು, ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವ ರಾಜಕೀಯ ಮಾಡುವದಿಲ್ಲ. ಶಹಾಪುರ ಮತಕ್ಷೇತ್ರ ಶಾಂತ ಸೌಹಾರ್ಧತೆಗೆ ಹೆಸರಾಗಿದೆ. ಇಲ್ಲಿನ ಜನರ ಮನದಾಳದಲ್ಲಿ ಅದು ಬೇರೂರಿದೆ. ಅವರ ಆಶೀರ್ವಾದ ಯಾರಿಗೆ ಒಲಿಯಲಿದೆ ಅವರು ಗೆಲ್ಲಲ್ಲಿದ್ದಾರೆ ಎಂದು ಮಾರ್ಮಿಕವಾಗಿ ತಿಳಿಸಿದರು.
ಮಾಜಿ, ಹಾಲಿಗಳ ಆರೋಪ ಪ್ರತ್ಯಾರೋಪ
ಮಂಗಳವಾರ ರಾಜ್ಯದ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಿದ್ದು, ಮೇ.12 ರಂದು ಮತದಾನ. ಮೇ.15 ರಂದು ಫಲಿತಾಂಶ ಪ್ರಕಟ ಕುರಿತಂತೆ ಚುನಾವಣೆ ಆಯೋಗ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತಿದ್ದಂತೆ, ಶಹಾಪುರ ಮತ ಕ್ಷೇತ್ರದಲ್ಲಿ ರಾಜಕೀಯ ಗರಿಗೆದರಿದೆ. ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಮಾಜಿ ಮತ್ತು ಹಾಲಿ ಶಾಸಕರಿಬ್ಬರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ.
ಹೀಗಾಗಿ ಪ್ರಸ್ತುತ ಚುನಾವಣೆ ಕಾವು ಜೋರಾಗುತ್ತಿದೆ. ಮತದಾನದ ದಿನದವರೆಗೂ ಇದು ಇನ್ನೂ ಹೆಚ್ಚಾಗಲಿದೆ. ಈ ನಡುವೆ ಜೆಡಿಎಸ್ ಅಭ್ಯರ್ಥಿಯು ಸಹ ಮಾಜಿ ಸಚಿವರ ವಿರುದ್ಧ ಇತ್ತೀಚೆಗೆ ನಡೆದ ಸಮಾವೇಶದಲ್ಲಿ ನೇರವಾಗಿ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಅಲ್ಲದೆ ಹಾಲಿ ಶಾಸಕರ ವಿರುದ್ಧವು ಕ್ಷೇತ್ರದ ಸಮಸ್ಯೆ ಬಗ್ಗೆ ಎಲ್ಲಾ ಗೊತ್ತಿದ್ದರೂ ಮೌನವಹಿಸುವ ಮೂಲಕ ರಾಜಿ ರಾಜಕೀಯ ಮಾಡುತ್ತಿದ್ದಾರೆ ಎಂದು ಛೇಡಿಸಿದ್ದರು.
ಹೀಗಾಗಿ ಕ್ಷೇತ್ರದಲ್ಲಿ ಈ ಬಾರಿ ಆರೋಪ ಪ್ರತ್ಯಾರೋಪಗಳು ಜೋರಾಗಿ ನಡೆಯಲಿವೆ. ಮತದಾರರು ಮಾತ್ರ ಯಾರ ಪರವಾಗಿಯೂ ಜೋತು ಬೀಳಲಾರದೆ ಶಾಂತತೆಯನ್ನು ಕಾಪಾಡಿಕೊಂಡಿದ್ದಾರೆ ಎನ್ನಬಹುದು.
ನೋಡಿ ಸರ್ ಆರೋಪ ಪ್ರತ್ಯಾರೋಪ ರಾಜಕೀಯದಲ್ಲಿ ಸಹಜ bt ಶಹಪುರ್ ಮತದಾರರು ಯಾವ ವೆಕ್ತಿ ನೋಡಲ್ಲ bt ಕೆಲಸ ಮತ್ತು ಅವರ ಸಾಧನೆ ನೋಡಿ ಈ ಬಾರಿ ಚುನಾಹಿಸುತ್ತಾರೆ