ಐತಿಹಾಸಿಕವಾಗಿ ಶಿರವಾಳ ದಕ್ಷಿಣ ಕಾಶಿಯಾಗಿದೆ – ಪಾಟೀಲ್
ನಮ್ಮ ಸ್ಮಾರಕಗಳ ದರ್ಶನ ಹಾಗೂ ಸಂರಕ್ಷಣೆಗಾಗಿ ಪ್ರವಾಸ
ನಮ್ಮ ಸ್ಮಾರಕಗಳ ದರ್ಶನ ಹಾಗೂ ಸಂರಕ್ಷಣೆಗಾಗಿ ಪ್ರವಾಸ
ಐತಿಹಾಸಿಕವಾಗಿ ಶಿರವಾಳ ದಕ್ಷಿಣ ಕಾಶಿಯಾಗಿದೆ – ಪಾಟೀಲ್
ಯಾದಗಿರಿ, ಶಹಾಪುರಃ ಐತಿಹಾಸಿಕವಾಗಿ ಸಾಂಸ್ಕೃತಿಕವಾಗಿ ಶಿರವಾಳ ದಕ್ಷಿಣದ ಕಾಶಿಯಂತಿದೆ. ಇಂತಹ ಮಹತ್ವದ ತಾಣಗಳನ್ನು ಪುನರುತ್ಥಾನಗೊಳಿಸದೆ ಹಾಳುಗೆಡವಿದ್ದು, ನಮ್ಮೆಲ್ಲರ ದೌರ್ಭಾಗ್ಯ. ಸ್ಮಾರಕಗಳ ಸಂರಕ್ಷಣೆ ಮಾಡುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಪ್ರಕಟಿಸಿದರು.
ತಾಲ್ಲೂಕಿನ ಶಿರವಾಳ ಗ್ರಾಮದ ಐತಿಹಾಸಿಕ ತಾಣವಾದ ದೇವಾಲಯಗಳ ಸಮ್ಮುಚ್ಛಯ ಸ್ಥಳಕ್ಕೆ ಭೇಟಿ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,
ಶಿರವಾಳ ಈ ದೇವಾಲಯ ಯಾವ ಹಂಪಿಗಿಂತ ಕಡಿಮೆ ಇಲ್ಲ ಎನಿಸುತ್ತಿದೆ. ಇಂತಹ ಮಹತ್ವದ ತಾಣಗಳು ಹಾಳು ಬಿದ್ದಿರುವುದು ದುರ್ದೈವದ ಸಂಗತಿ. ಶಿರವಾಳದಲ್ಲಿ ಸಂಶೋಧಕರ ಪ್ರಕಾರ 360 ದೇವಾಲಯಗಳು, 360 ಬಾವಿಗಳು ಮತ್ತು ಸಾವಿರಾರು ಲಿಂಗಗಳಿವೆ. ಈ ಗ್ರಾಮದ ತುಂಬೆಲ್ಲ ದೇವಾಲಯಗಳಿವೆ. ಇಂತಹ ಅದ್ಭುತ ತಾಣ ನಾನೆಲ್ಲಿ ಕಾಣೆ. ಆದರೆ ಇವುಗಳ ಪುನರುತ್ಥಾನ ಕೆಲಸ ನಡೆಯಬೇಕಿದೆ.
ಗ್ರಾಮಸ್ಥರು, ಅಧಿಕಾರಿಗಳು ರಾಜಕೀಯ ಇಚ್ಛಾಶಕ್ತಿಯಿಂದ ಇವುಗಳ ರಕ್ಷಣೆಯ ಉದ್ದೇಶದಿಂದ ಇಂದು ರಾಜ್ಯದಾದ್ಯಂತ ನಮ್ಮ ಸ್ಮಾರಕಗಳ ದರ್ಶನ ಹಾಗೂ ಅವುಗಳ ರಕ್ಷಣೆಗಾಗಿ ಪ್ರವಾಸ ಕೈಗೊಂಡಿದ್ದೇನೆ.
ಸ್ಮಾರಕ ರಕ್ಷಣೆಗಾಗಿ ಹೊಸ ಚಿಂತನೆಗಳನ್ನು ಮಾಡಿದ್ದು, ಸುಮಾರು ಸಾವಿರ ಸ್ಮಾರಕಗಳನ್ನು ದತ್ತು ನೀಡುವ ಯೋಜನೆ ರೂಪಿಸಿದ್ದೇವೆ. ಸ್ಮಾರಕಗಳ ರಕ್ಷಣೆಗೆ ಮುಂದೆ ಬರುವ ಆಸಕ್ತ ಉದ್ಯಮಿಗಳು, ಸಂಘ, ಸಂಸ್ಥೆಗಳಿಗೆ ದತ್ತು ನೀಡುವ ಮೂಲಕ ಸ್ಮಾರಕಗಳ ಜೀರ್ಣೋದ್ಧಾರ ಕಾರ್ಯ ಮಾಡಲಾಗುತ್ತಿದೆ.
ಹೈದ್ರಾಬಾದನ ಶ್ರೀಮಂತ ಉದ್ಯಮಿ ಹರ್ಷ ಲಾಹೋಟಿ ಅವರು ಚಿತಾಪುರ ತಾಲೂಕಿನ ನಾಗಾವಿ ದೇವಾಲಯ ಸೇರಿದಂತೆ ಪ್ರಮುಖ ನಾಲ್ಕು ತಾಣಗಳ ದತ್ತು ಪಡೆದು, ಜೀರ್ಣೋದ್ಧಾರ ಕಾರ್ಯಕೈಗೊಳ್ಳಲು ಮುಂದಾಗಿದ್ದಾರೆ. ಜೊತೆಗೆ ಅವರೇ ಯಾದಗಿರಿ ಕೋಟೆಯನ್ನು ಸಹ ದತ್ತು ಪಡೆದಿದ್ದು, ಅವುಗಳ ರಕ್ಷಣೆಗೆ ಮುಂದಾಗಿದ್ದಾರೆ. ಆಯಾ ಸ್ಮಾರಕಗಳ ಮುಂದೆ ಅವರು ಕೈಗೊಂಡ ಸ್ವಚ್ಛತೆ, ಜೀರ್ಣೋದ್ಧಾರ ಮಾಹಿತಿಯೊಂದಿಗೆ ನಾಮಫಲಕ ಹಾಕಲಾಗುವದು. ಯಾವುದೇ ಸ್ಮಾರಕಗಳನ್ನು ಅವರ ಸುಪರ್ದಿಗೆ ಕೊಡುವದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಶಿರವಾಳದ ನಂತರ ಶಹಾಪುರ ಪಟ್ಟಣದ ದಿಗ್ಗಿ ಅಗಸಿ ಮತ್ತು ಕನ್ಯಾಕೋಳೂರ ಅಗಸಿ ಸೇರಿದಂತೆ ಬುದ್ಧ ಮಲಗಿದ ದೃಶ್ಯವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಸಣ್ಣ ಕೈಗಾರಿಕೆ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ, ಮಾಜಿ ಎಂಎಲ್‌ಸಿ ಅಮಾತೆಪ್ಪ ಕಂದಕೂರ, ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಮತ್ತು ಸಿಇಓ ಗರೀಮಾ ಪನ್ವಾರ ಸೇರಿದಂತೆ ಪುರಾತತ್ವ ಇಲಾಖೆ ರಾಜ್ಯ ಆಯುಕ್ತರಾದ ದೇವರಾಜ ಇದ್ದರು.
ಬಿಜೆಪಿ ಬರ ಅಧ್ಯಯನ – ಪಾಟೀಲ್ ಆಕ್ರೋಶ
ಬಿಜೆಪಿ ಬರ ಅಧ್ಯಯನ ಎಚ್ ಕೆ.ಪಾಟೀಲ್ ಆಕ್ರೋಶ
ಶಹಾಪುರ ಃ ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ಬಿಜೆಪಿ ಬರ ಅಧ್ಯಯನ ಮಾಡುತ್ತಿದೆ . ರಾಜ್ಯ ಸರ್ಕಾರ ಯಾವ ಕ್ರಮಕ್ಕೆ ಮುಂದಾಗಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಕೇಂದ್ರದ ಬರ ಪರಿಹಾರ ಅನುದಾನ, ದುಡ್ಡು ವಿತರಣೆ ಮಾಡುತ್ತಿಲ್ಲ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರು.
ಸಿಎಂ ಸಿದ್ಧರಾಮಯ್ಯನವರು ಕೇಂದ್ರದ ಪ್ರಧಾನಿ ಮೋದಿ ಸೇರಿದಂತೆ ಅಮಿತ್ ಶಾ ಮತ್ತು ಪ್ರಮುಖರನ್ನು ಭೇಟಿ ಮಾಡಲು ಹೋದರೆ ಸಮಯ ನೀಡುತ್ತಿಲ್ಲ. ರಾಜ್ಯಕ್ಕೆ ಬರಬೇಕಿದ್ದ ಅನುದಾನವನ್ನು ಕೇಂದ್ರ ಕಲ್ಪಿಸುತ್ತಿಲ್ಲ ಎಂದು ದೂರಿದರು.
ಜೊತೆಗೆ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ಇತರೆ ನಾಯಕರು, ರಾಜ್ಯದಲ್ಲಿ ಬರ ಅಧ್ಯಯನ ನಡೆಸುವ ಬದಲು ತಮ್ಮ ಸಂಸದರನ್ನು ಕರೆದೊಯ್ದು ಪ್ರಧಾನಿ ಮೋದಿ ಬಳಿ ರಾಜ್ಯಕ್ಕೆ ಬರಬೇಕಿದ್ದ ಅನುದಾನ ವಿತರಿಸುವ ಕೆಲಸ ಮಾಡಲಿ ಎಂದು ಸವಾಲ್ ಹಾಕಿದರು.