ಗಿಣಿ ಮತ್ತು ಗೂಬೆ ಮಕ್ಕಳಿಗಾಗಿ ಪುಟ್ಟ ಕತೆ ಓದಿ
ಗಿಣಿ ಮತ್ತು ಗೂಬೆ ಮಕ್ಕಳಿಗೊಂದು ಪುಟ್ಟ ಕತೆ
✍️shivakumar uppin
–
ಕಾಡಲ್ಲಿ ಸೊಗಸಾಗಿದ್ದ ಮುದ್ದು ಗಿಣಿಯೊಂದು ನದಿ ತಟದ ತಗ್ಗಿನಲ್ಲಿನ ನೀರು ಕುಡಿಯಲು ಹೋದಾಗ ಅಲ್ಲಿ ಗೂಬೆಯನ್ನು ನೋಡುತ್ತೆ. ‘ನನಗಿಂತ ಇದು ಅಂದವಾಗಿದೆಯಲ್ಲ’ ಅಂತ ಭಾವಿಸುವ ಮುಗ್ಧ ಗಿಣಿ, ಅದರ ಸ್ನೇಹ ಮಾಡಿಕೊಳ್ಳುತ್ತದೆ. ದಿನಗಳೆದಂತೆ ಎರಡರ ಸ್ನೇಹ ಗಾಢವಾಗುತ್ತದೆ. ಗೂಬೆಯ ಜತೆ ಒಮ್ಮೆ ಹಳ್ಳಕ್ಕೆ ಹೋಗಿ ಬಂದ ಈ ಗಿಣಿ ಮೊದಲು ತಾನು ನದಿಯ ಪಕ್ಕದಲ್ಲೇ ನೀರು ಕಡಿಯುತ್ತಿದ್ದೆ ಎನ್ನುವುದನ್ನೇ ಮರೆಯುತ್ತದೆ.
‘ನಾನು ಜಗತ್ತು ನೋಡಿದ್ದೇ ಗೂಬೆಯಿಂದ, ಇಷ್ಟು ದಿನ ನಾನು ಕತ್ತಲ ಗೂಡಲ್ಲಿದ್ದೆ’ ಅಂದುಕೊಳ್ಳಲು ಪ್ರಾರಂಭಿಸುತ್ತೆ. ನನಗೆ ಗೂಬೆಯಿಂದ ಒಳ್ಳೆಯ ಸ್ನೇ’ಹಿತ’ರು ಸಿಕ್ಕರು ಅಂತ ತಿಳಿದುಕೊಳ್ಳುತ್ತದೆ ಗಿಣಿ! ನಿಜಕ್ಕೆ ಗಿಣಿಗೆ ಅದರ ಗುಣದ ಅರಿವೇ ಇರುವುದಿಲ್ಲ.
ಇದರ ಲಾಭ ಪಡೆದ ಗೂಬೆ, ಗಿಣಿಯನ್ನು ಸರಿಯಾಗಿ ಬಳಸಿಕೊಂಡು ಹಾರಾಡಿಸುತ್ತೆ. ‘ಗಿಣಿ ಮೇಲೆ ಗೂಬೆ ಕೂತಿದೆ’ ಅಂತ ಉಳಿದ ಹಕ್ಕಿಗಳು ಇವನ್ನು ನೋಡಿ ನಗುತ್ತವೆ. ಇದರ ಪರಿವಿಲ್ಲದ ಗಿಣಿ, ಅದಕ್ಕಿಂತ ತಾನು ಚಂದ ಅಂತ ಮರೆತು ಗೂಬೆಯ ಕುಟುಂಬದ ಜತೆಗೂ ಬೆರೆತು, ಅವುಗಳ ಹಿಂಡು ಸೇರುತ್ತದೆ. ತಾನೂ ‘ಹಾಗೇ ಆದಂತೆ’ ವರ್ತಿಸುತ್ತದೆ ತನ್ನ ಅಂದವೇ ಮರೆತ ಗಿಣಿ.
ಹೀಗಿರುವಾಗ ಗಿಣಿಗೆ ತನ್ನವರ ಮೇಲೇ ಕೋಪ ಬರಲು ಶುರುವಾಗುತ್ತೆ. ‘ತಾನೇ ಸರಿ ಇಲ್ಲ’ ಅಂತ ಅಂದುಕೊಳ್ಳುತ್ತೆ. ಗೂಬೆ ಕಾರಣಕ್ಕೆ ತನ್ನ ಮನೆಯನ್ನೂ ಮರೆತು ಅಲೆಯುತ್ತದೆ. ತಾನಾಡುವ ಮಾತೂ ಮರೆತು ‘ಗೂಬೆ ನಾದ’ ಕಲಿಯುತ್ತದೆ.
ಮಕ್ಕಳಿಗೂ ಗೂಬೆಯ ಸೊಗಸು ಬೋಧಿಸುವ ಮುಗ್ಧ ಗಿಣಿಗೆ, ತನಗರಿವಿಲ್ಲದೇ ದಡ್ಡನಂತಾಗಿದ್ದೂ ಗೊತ್ತಾಗುವುದಿಲ್ಲ! ಹೇಳಲು ಬಂದ ತನ್ನ ಬಳಗವನ್ನೇ ಗಿಣಿ ಬೈಯ್ಯುತ್ತದೆ. ಭ್ರಮೆಯಲ್ಲಿರುವ ಅದಕ್ಕೆ ಗೂಬೆಯೇ ಸರ್ವಸ್ವ. ಗೂಬೆಯಿಂದ ತೊಂದರೆಯಾಗಿದ್ದು ಅನ್ನಿಸಿ, ಒಮ್ಮೊಮ್ಮೆ ತನ್ನ ಬಳಗದ ಮುಂದೆ ನೋವು ತೋಡಿಕೊಳ್ಳುವ ಗಿಣಿ, ಮತ್ತೆ ಗೂಬೆ ಸಂಪರ್ಕಕ್ಕೆ ಬಂದಾಗ ಅದೆಲ್ಲ ಮರೆತು ಬಿಡುತ್ತೆ.
ಗೂಬೆಯಿಂದಲೇ ತಾನು ಎಲ್ಲ ನೋಡಿದ್ದು ಅಂತ ಭಾವಿಸುತ್ತೆ. ತನ್ನದೇ ಸರಿ, ತಾನೇ ಚಂದ ಅಂದುಕೊಳ್ಳುವ ಗಿಣಿಗೆ ಬೇರೆ ಗಿಣಿಗಳು ಎಷ್ಟು ಹೇಳಿದರೂ ತಿಳಿಯಲ್ಲ. ಹೀಗೇ ಆಗಿ ಅದರ ಹೆಸರೇ ‘ಗೂಬೆ ಗಿಣಿ’ ಅಂತ ಆಗುತ್ತೆ. ಹಾರಲು, ಹಾಡಲು, ಕೊನೆಗೆ ಮಾತಾಡಲೂ ಮರೆತು ಹೋಗುತ್ತೆ.
ಇದರಿಂದ ಗಿಣಿ ತನ್ನ ಬಳಗದಿಂದ ದೂರವಾಗಿ ಒಂಟಿಯಾಗುತ್ತೆ. ಅದರ ಮೇಲೆ ಅದಕ್ಕೇ ನಿಯಂತ್ರಣ ತಪ್ಪಿ, ಜಾಣೆಯಾಗಿದ್ದ ಗಿಣಿ ಮಂಕಾಗುತ್ತೆ. ಅದರ ಗೂಡಲ್ಲೂ ನೆಮ್ಮದಿ ಇಲ್ಲವಾಗುತ್ತೆ. ಯಾರೂ ಅದರ ಮಾತು ಕೇಳದಂತಾಗಿ ರೋಸಿ ಹೋಗುತ್ತೆ.
ಗೂಬೆ ‘ನಿನ್ನೊಂದಿಗೆ ನಾನೀದೀನಿ’ ಅಂತ ಹೇಳುತ್ತದಾದರೂ ಇದಿಲ್ಲದಿದ್ದಾಗ ಗಿಣಿಯ ಬಗ್ಗೆಯೇ ಹಿಂದೆ ಆಡಿಕೊಳ್ಳುತ್ತದೆ. ಗೊತ್ತಿದ್ದೂ ಗಿಣಿಗೆ ಏನೂ ಮಾಡಲಾಗದೇ ಕೊನೆಗೆ ತನ್ನ ಸೌಂದರ್ಯವೇ ಕಳೆದುಕೊಳ್ಳುತ್ತದೆ. ಹುಚ್ಚನಾಗಿ ಕತ್ತಲೆಂದುಕೊಂಡಿದ್ದ ಗೂಡೂ ಬಿಟ್ಟು, ತನ್ನ ಬಳಗವೂ ತೊರೆದು ಗಿಡದ ‘ಪೊಟರೆ’ಯಲ್ಲಿ ಕೂಡಬೇಕಾಗುತ್ತೆ.
ನೀತಿ; ಯಾರ ಜತೆಗೆ ನಾವಿರುತ್ತೇವೊ ಹಾಗೇ ನಮ್ಮ ನಡುವಳಿಕೆಯೂ ರೂಪುಗೊಳ್ಳುತ್ತದೆ. ಹಾಗಾಗಿ ‘ನಮ್ಮತನ’ದ ಅರಿವು ನಮಗಿರಬೇಕು.
–ಶಿವಕುಮಾರ್ ಉಪ್ಪಿನ, ಕವಿ, ಲೇಖಕ.