ಶೈಕ್ಷಣಿಕ ಪ್ರಗತಿಯಿಂದ ಸಮಾಜ ಸುಧಾರಣೆ ಸಾಧ್ಯ-ದರ್ಶನಾಪುರ
ಶಿವಶರಣ ಮಾದಾರ ಚನ್ನಯ್ಯ ಜಯಂತ್ಯುತ್ಸವ
ಯಾದಗಿರಿ, ಶಹಾಪುರಃ ದಲಿತ ಸಮುದಾಯಗಳು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಿದ್ದಲ್ಲಿ ಮಾತ್ರ ಸಮಾಜ ಅಭಿವೃದ್ಧಿಗೆ ಪೂರಕವಾಗಲಿದೆ. ಸಮುದಾಯದ ಮುಖಂಡರು ಈ ಕುರಿತು ಗಮನ ಹರಿಸುವ ಮೂಲಕ ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಕಾರ್ಯ ಮಾಡಬೇಕೆಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ತಾಲೂಕು ದಲಿತ ಸಮುದಾಯಗಳ ಸಮನ್ವಯ ಸಮಿತಿ ಆಶ್ರಯದಲ್ಲಿ ನಗರದ ಜೀವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಿವಶರಣ ಮಾದರ ಚನ್ನಯ್ಯನವರ ಜಯಂತಿ ಮತ್ತು ನ್ಯಾ.ಸದಾಶಿವ ಆಯೋಗ ಕುರಿತು ಚರ್ಚೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವಕರು ಸಾಮಾಜಿಕವಾಗಿ ಸಕರಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು. ಮಾದಿಗ ಸಮುದಾಯ ಒಗ್ಗಟ್ಟಿನಿಂದ ಸಮಾಜದ ಸುಧಾರಣೆಯತ್ತ ಸಾಗಬೇಕು. ಸರ್ಕಾರದಿಂದ ದೊರೆಯುವ ಸಕಲ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಬೆಳೆಯಬೇಕಿದೆ. ಆ ನಿಟ್ಟಿನಲ್ಲಿ ಸಮುದಾಯ ಸಂಘಟನಾತ್ಮಕ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಕರೆ ನೀಡಿದರು.
ದಿವ್ಯ ಸಾನ್ನಿಧ್ಯವಹಿಸಿದ್ದ ಚಿಗರಳ್ಳಿಯ ಸಿದ್ಧಬಸವ ಕಬೀರ ಮಹಾಸ್ವಾಮಿಗಳು ಮತನಾಡಿ, ಮಾದಿಗ ಸಮುದಾಯ ವಂಚಿತ ಮನೋಭಾವನೆಗಳನ್ನು ದೂರ ತಳ್ಳಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದ ಸುಧಾರಣೆಗೆ ಯುವ ಶಕ್ತಿ ಪ್ರೇರಣೆಯಾಗಬೇಕು.
ಸ್ವಾರ್ಥ ದುರಾಸೆಗಳಿಂದ ದೂರಾವಾಗಿ ಸಮುದಾಯ ಏಳ್ಗೆಗೆ ಕಳಕಳಿಯಿಂದ ಶ್ರಮವಹಿಸಬೇಕು ಎಂದು ತಿಳಿಸಿದರು.
ದಲಿತ ಮಾದಿಗ ಸಮನ್ವಯ ಸಮಿತಿ ರಾಜ್ಯ ಅಧ್ಯಕ್ಷ ಲಿಂಗರಾಜ ತಾರಫೈಲ್ ಮತನಾಡಿ, ಸಮಾಜದ ಯುವಕರು ಒಗ್ಗೂಡಿ ಸಮುದಾಯದ ಪ್ರಗತಿಗೆ ಶ್ರಮಿಸಬೇಕು. ಯುವ ಶಕ್ತಿ ಒಗ್ಗೂಡಿದಲ್ಲಿ ಎಂತಹ ಕಠಿಣ ಸಮಸ್ಯೆಯಾದರೈ ಸುಲಭವಾಗಿ ಪರಿಹಾರ ದೊರೆಯಲಿದೆ ಎಂದರು.
ನಿಂಗಣ್ಣ ಕದರಾಪುರ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ವಾಸುದೇವ ಕಟ್ಟಿಮನಿ, ಮುಖಂಡರಾದ ರುದ್ರಪ್ಪ ಹುಲಿಮನಿ, ಪಂಡಿತ ನಿಂಬೂರೆ ಮಾತನಾಡಿದರು.
ಮುಖಂಡರಾದ ಶಾಂತಪ್ಪ ಗುತ್ತೇದಾರ, ಮರೆಪ್ಪ ಕಟ್ಟಿಮನಿ, ಶಂಕ್ರಪ್ಪ ಶ್ಯಾಣೆನೋರ್, ಶರಣಪ್ಪ ಕ್ಯಾತನಾಳ, ಜೆಟ್ಟೆಪ್ಪ ಕೆಂಭಾವಿ, ಮಲ್ಲಪ್ಪ ಗೋಗಿ, ವಿಜಯಕುಮಾರ ಎದುರಮನಿ ಉಪಸ್ಥಿರಿದ್ದರು. ಹಣಮಂತ ಬೇಟೆಗಾರ, ಹೊನ್ನಪ್ಪ ನಾಟೇಕಾರ, ಸುನೀಲ್ ಹಳಿಸಗರ, ಲಕ್ಷ್ಮಣ ದೇವಿನಗರ, ಮಲ್ಲಪ್ಪ ಅಚಕೇರಿ, ಶಿವು ದೊಡ್ಮನಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
ಮುಂಚಿತವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಶಿವಶರಣ ಮಾದರ ಚನ್ನಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು. ಧರ್ಮಣ್ಣ ಬಡಿಗೇರ ನಿರೂಪಿಸಿದರು. ರಾಜಪ್ಪ ಹೊಸ್ಕೇರಾ ಪ್ರಾರ್ಥಿಸಿದರು. ಹಯ್ಯಾಳಪ್ಪ ದೋರನಳ್ಳಿ ಸ್ವಾಗತಿಸಿದರು. ಚನ್ನಬಸವ ಇಟಗಿ ವಂದಿಸಿದರು.