ಪ್ರಮುಖ ಸುದ್ದಿ

ಪರರ ಕಷ್ಟ ಪರಿಹಾರಕ್ಕಾಗಿ ಶ್ರಮಿಸುವವನೇ ದೊಡ್ಡವ – ಅನ್ನದಾನ ಶ್ರೀ

ಮಾಜಿ ಶಾಸಕ ಶಿವಶೇಖರಪ್ಪ ಗೌಡರ ಪುಣ್ಯಸ್ಮರಣೆ- ನುಡಿ ನಮನ

ಯಾದಗಿರಿ, ಶಹಾಪುರ: ಅಧಿಕಾರವಿರಲಿ ಇಲ್ಲದಿರಲಿ ಸದಾಕಾಲ ಸರ್ವ ಸಮುದಾಯಗಳ ಶ್ರೇಯೋಭಿವೃದ್ಧಿ ಬಯಸುವ ಗುಣ ಹೊಂದಿದ್ದ, ದಿ.ಶಿವಶೇಖರಪ್ಪ ಗೌಡರು ಸಗರನಾಡಿನ ಕಳಕಳಿಯ ಜನ ನಾಯಕರಾಗಿದ್ದರು ಎಂದು ಬೆಂಗಳೂರಿನ ಅನ್ನದಾನ ಮಹಾಸ್ವಾಮೀಜಿ ತಿಳಿಸಿದರು.

ತಾಲೂಕಿನ ಶಿರವಾಳ ಗ್ರಾಮದಲ್ಲಿ ಸೋಮವಾರ ನಡೆದ ದಿ.ಶಿವಶೇಖರಪ್ಪಗೌಡ ಶಿರವಾಳರ 10ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಹುಜನ ಹಿತಾಯ ಬಹುಜನ ಸುಖಾಯ ತತ್ವ ಅಳವಡಿಸಿಕೊಂಡಿದ್ದ ಗೌಡರು ದಾಸೋಹ, ಕೃಷಿ, ಕಾಯಕ ಜೊತೆ ಸರ್ವರೂ ಸಂತೃಪ್ತ ಜೀವನ ನಡೆಸಬೇಕು ಎಂಬ ಭಾವನೆ ಉಳ್ಳವರಾಗಿದ್ದರು. ಸದಾ ಪರರ ಸಂಕಷ್ಟ ನಿವಾರಣೆಗಾಗಿ ಶ್ರಮಿಸುವವನೇ ದೊಡ್ಡ ವ್ಯಕ್ತಿ. ಅಂತಹ ಗುಣ ಹೊಂದಿದ್ದ ಶಿವಶೇಖರಪ್ಪಗೌಡರು ಇಂದು ಅಪಾರ ಅಭಿಮಾನಿ ಬಳಗ ಹಿತೈಷಿಗಳನ್ನು ಹೊಂದಿದ್ದಾರೆ. ಅವರ ಗುಣಗಾನಕ್ಕೆ ಇಲ್ಲಿ ನೆರೆದ ಜನರೇ ಸಾಕ್ಷಿ.

ಅವರು ಕೃಷ್ಣ ಕಾಡಾ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕಾಲುವೆಗಳ ಮೂಲಕ ಹೊಲಗಾಲುವೆಗಳಿಗೆ ನೀರುಣಿಸಿ ರೈತರ ಹಿತ ಕಾಪಾಡಿದವರು. ಮೂರು ಬಾರಿ ಶಾಸಕರಾಗಿದ್ದರು. ಒಮ್ಮೆ ತಮಗೆ ಬಂದ ಸಚಿವ ಸ್ಥಾನವನ್ನು ಹುಮನಬಾದ್ ನ ಸ್ನೇಹಿತರು ಒಬ್ಬರು ಬೇಡಿರುವ ಕಾರಣ ಉದಾರ ಭಾವನೆಯಿಂದ ಬಿಟ್ಟುಕೊಟ್ಟವರು ಈ ಘಟನೆ ನನ್ನ ಕಣ್ಣೆದುರೆ ಮಾತುಗಳು ನಡೆದಂತವು ಎಂದು ಉಲ್ಲೇಖಿಸಿದರು.

ಹತ್ತು ಹಲವು ಜನಪರ ಕಾರ್ಯ ಮಾಡುವ ಮೂಲಕ ಜನಮಾನಸದಲ್ಲಿ ಅಚ್ಚಅಳಿಯದೆ ಉಳಿದ ಗೌಡರು, ಯಾವುದೇ ಆಸೆ ಆಕಾಂಕ್ಷೆ ಹೊಂದಿರಲಿಲ್ಲ. ಜನ ಸೇವೆಗೆ ಅಧಿಕಾರವೇ ಬೇಕು ಎಂಬ ಭಾವನೆ ಅವರಲ್ಲಿ ಇರಲಿಲ್ಲ. ಅವರು ಧಾರ್ಮಿಕ ನೆಲೆಗಟ್ಟಿನಲ್ಲಿ ಬೆಳೆದು ಬಂದವರು ಹಾಗೇ ಮುಂದುವರೆದಿದ್ದಾರೆ. ಪ್ರಸ್ತುತ ಻ವರ ಮಗ ಗುರು ಪಾಟೀಲರು ಸಹ ಧಾರ್ಮಿಕ ನೆಲೆಯಲ್ಲಿ ಅಪ್ಪ ತೋರಿದ ಸನ್ಮಾರ್ಗದಲ್ಲಿಯೇ ನಡೆಯುತ್ತಿದ್ದಾರೆ.

ಸದಾ ಜನೋಪಚಾರಿ ಕೆಲಸ ಬಡವರ ಕಣ್ಣೀರು ಒರೆಸುವಲ್ಲಿ ಶ್ರಮಿಸಿದ ಗೌಡರ ಹೆಸರ ಅಜರಾಮರವಾಗಿ ಉಳಿದಿದೆ ಎನ್ನಲು ಈ ಕಾರ್ಯಕ್ರಮವೇ ಸಾಕ್ಷಿ ಎಂದರು.

ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಮಾತನಾಡಿ, ಶಿರವಾಳ ಗೌಡರು ಸದಾಕಾಲ ಹಸನ್ಮುಖಿಯಾಗಿ ಎಲ್ಲರೊಂದಿಗೆ ಬೆರೆಯುವ ಮನೋಧರ್ಮದವರು. ಅವರ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಮರೆಯುವಂತಿಲ್ಲ, ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡುವಲ್ಲಿ ಅವರು ಮೇಲ್ಪಂಕ್ತಿಯಾಗಿದ್ದರು ಎಂದರು.

ಕೊಪ್ಪಳದ ಗವಿಸಿದ್ದೇಶ್ವರ ಮಠದ ಸಿದ್ಧಲಿಂಗ ದೇವರು ಮಾತನಾಡಿ, ಗುರುಕಾರುಣ್ಯದಲ್ಲಿ ಜೀವನದ ಸಂತೃಪ್ತಿ ಹೊಂದಿದ್ದ ಶಿರವಾಳ ಗೌಡರು, ಕಲ್ಯಾಣ ಕರ್ನಾಟಕ ಭಾಗದ ಮೌಲ್ಯಯುಕ್ತ ರಾಜಕಾರಣಿಯಾಗಿದ್ದರು ಎಂದು ಗುಣಗಾನ ಮಾಡಿದರು.
ಪುಣ್ಯಸ್ಮರಣೆ ಕಾರ್ಯಕ್ರಮದ ವೇದಿಕೆ ಮೇಲೆ ಫಕೀರೇಶ್ವರ ಮಠದ ಗುರುಪಾದ ಶ್ರೀ, ಕುಂಬಾರಗೇರಿ ಮಠದ ಸೂಗುರೇಶ್ವರ ಶಿವಾಚಾರ್ಯರು, ಗುಂಬಳಾಪುರ ಮಠದ ಸಿದ್ಧೇಶ್ವರ ಶಿವಾಚಾರ್ಯರು, ನಾಗಠಾಣ ಮಠದ ಸೋಮಶೇಖರ ಶಿವಾಚಾರ್ಯರು, ಚರಬಸವೇಶ್ವರ ಗದ್ದುಗೆಯ ವೇ.ಮೂ.ಬಸವಯ್ಯ ಶರಣರು, ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಶ್ರೀಗಳು, ಕುಕನೂರು ಮಠದ ಚೆನ್ನಮಲ್ಲ ಮಹಾಸ್ವಾಮೀಜಿ, ಮದ್ರಿಕಿಯ ಶೀಲವಂತೇಶ್ವರ ಮಠದ ಶ್ರೀ, ದೋರನಹಳ್ಳಿಯ ಶಿವಲಿಂಗರಾಜೇಂದ್ರ ಶಿವಾಚಾರ್ಯರು, ಕಡಕೋಳ ಮಠದ ರುದ್ರಮುನಿ ಶಿವಾಚಾರ್ಯರು, ಹೊಸಕೇರಾದ ನಿಜಾನಂದಸ್ವಾಮಿಗಳು, ಚಿಟಗುಪ್ಪ ಮುರುಘೇಂದ್ರ ಶ್ರೀ, ಗೋಗಿಯ ಶರಣಬಸಪ್ಪ ದೇವರು, ವೇದಮೂರ್ತಿ ಚನ್ನಯ್ಯ ಸ್ವಾಮಿಗಳು, ಲಕ್ಕುಂಡಿಯ ಶರಣಯ್ಯ ಸ್ವಾಮಿಗಳು, ಲೋಕಾಪುರದ ಮಹಾಂತ ದೇವರು, ಚಂದ್ರಶೇಖರ ಶಾಸ್ತ್ರಿಗಳು, ಶಾಂತಯ್ಯ ಸ್ವಾಮಿಗಳು, ಎಲಿಕೂಡಲಿ ಬಸವರಾಜ ಶಾಸ್ತ್ರಿಗಳು ಸೇರಿದಂತೆ ಮಾಜಿ ಶಾಸಕ ಗುರು ಪಾಟೀಲ್, ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಮಲ್ಲಣ್ಣ ಮಡ್ಡಿ, ಡಾ.ಮಲ್ಲಣ್ಣಗೌಡ ಉಕ್ಕಿನಾಳ, ಡಾ.ಚಂದ್ರಶೇಖರ ಸುಬೇದಾರ ಹಾಗೂ ಗಣ್ಯರು, ಶಿರವಾಳ ಗೌಡರ ಕುಟುಂಬ ವರ್ಗದವರು, ಗ್ರಾಮದ ಸಮಸ್ತ ಜನತೆ, ಅಭಿಮಾನಿ ಬಳಗ ಭಾಗವಹಿಸಿತ್ತು. ಸಂಗೀತ ಬಳಗದಿಂದ ಪುಣ್ಯಮಯ ಗೀತೆಗಳು ಪ್ರಸ್ತುತಪಡಿಸಲಾಯಿತು.

ಇದೇ ಸಂದರ್ಭದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ತಹಶೀಲ್ದಾರ ಜಗನ್ನಾಥರಡ್ಡಿ, ಸಿಪಿಐ ಹನುಮರಡ್ಡೆಪ್ಪ, ಪಿಎಸ್‍ಐ ರಾಜಕುಮಾರ ಸೇರಿದಂತೆ ಇತರೆ ಅಧಿಕಾರಿಗಳು ಗಣ್ಯರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button