ಯಡಿಯೂರಪ್ಪ ಸರ್ಕಾರಕ್ಕಾಗಿ ಚಾಮುಂಡೇಶ್ವರಿ ಮೊರೆಹೋದ ಶೋಭಾ ಕರಂದ್ಲಾಜೆ
ಮೈಸೂರು: ದೋಸ್ತಿ ಸರ್ಕಾರ ತೊಲಗಲಿ, ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಬರಲಿ ಎಂದು ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಚಾಮುಂಡೇಶ್ವರಿ ದೇವಿ ಮೊರೆ ಹೋಗಿದ್ದಾರೆ. ಬರಿಗಾಲಲ್ಲಿ ಚಾಮುಂಡೇಶ್ವರಿ ಬೆಟ್ಟ ಏರಿದ ಶೋಭಾ ಕರಂದ್ಲಾಜೆ ದೇವಿ ದರ್ಶನ ಪಡೆದು ಯಡಿಯೂರಪ್ಪ ಸರ್ಕಾರಕ್ಕಾಗಿ ಬೇಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು ಈವರೆಗೆ ನಾನು ದೇವಿಗೆ ಈರೀತಿಯ ಯಾವುದೇ ಬೇಡಿಕೆ ಇಟ್ಟಿರಲಿಲ್ಲ. ಆದರೆ, ಇಂದು ರಾಜ್ಯದಲ್ಲಿರುವ ಜನವಿರೋಧಿ, ಶಾಸಕ ವಿರೋಧಿ, ರೈತ ವಿರೋಧಿ ಸರ್ಕಾರ ತೊಲಗಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಬರಲಿ ಎಂದು ಕೇಳಿಕೊಂಡಿದ್ದೇನೆ ಎಂದಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ವಿಶ್ವಾಸ ಮತ ಯಾಚನೆ ಪ್ರಸ್ತಾಪ ಮಂಡಿಸಿದ್ದಾರೆ. ಆದರೆ, ಈಗ ವಿಶ್ವಾಸ ಮತ ಸೋಲುವ ಭೀತಿಯಲ್ಲಿ ಮುಂದೂಡುವ ತಂತ್ರ ರೂಪಿಸಿ ಕಾಲಹರಣ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್ ಸೂಚನೆಗೂ ಗೌರವ ಇಲ್ಲ, ರಾಜ್ಯಪಾಲರ ಸೂಚನೆಗೂ ಬೆಲೆ ನೀಡದೆ ಅಂದಾ ದರ್ಬಾರ್ ನಡೆಸುತ್ತಿರುವ ಸರ್ಕಾರ ತೊಲಗಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ.