ಶಹಾಪುರಃ ಮಾವಿನ ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ
ಶಹಾಪುರಃ ಮಾವಿನಕೆರೆ ಭರ್ತಿಯಾದಲ್ಲಿ ಅಂತರಜಲ ಹೆಚ್ಚಾಗುವುದು ಇದರಿಂದ ನಗರದ ಜನತೆಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗುವುದಿಲ್ಲ ಎಂದು ದಿನೇಶ ಜೈನ್ ಹೇಳಿದರು. ಗುರುವಾರ ನಗರದ ಮಾವಿನಕೆರೆಗೆ ನೀರು ತುಂಬಿಸುವ ಹಿನ್ನೆಲೆಯಲ್ಲಿ ಕೆರೆಯ ಪಕ್ಕದ ಗುಡ್ಡದಿಂದ ಕೆರೆವರೆಗೂ ನಾಲಾ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಳೆಗಾಲ ಸಂದರ್ಭದಲ್ಲಿ ಈ ಗುಡ್ಡದ ಮೇಲಿನ ನೀರು ಹರಿದು ಪೋಲಾಗುವುದನ್ನು ತಪ್ಪಿಸಲು ಮತ್ತು ಪೋಲಾಗುವ ನೀರು ಸಮರ್ಪಕವಾಗಿ ಕೆರೆಯಲ್ಲಿ ಸಂಗ್ರಹಿಸುವ ನಿಟ್ಟಿನಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆ ಭಾರತೀಯ ಜೈನ್ ಸಂಘಟನೆ ಸಹಭಾಗಿತ್ವದಲ್ಲಿ ನಡೆಯುತ್ತಿದೆ.
ಇದು ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು ಕೆರೆಗಳಿಗೆ ಹೂಳೆತ್ತುವ ಕಾರ್ಯವನ್ನು ಸಮಪರ್ಕವಾಗಿ ಯಶಸ್ವಿಗೊಳಿಸಿದ್ದ ಭಾರತೀಯ ಜೈನ ಸಂಘಟನೆ ಜಿಲ್ಲೆಯಲ್ಲಿ ಹಲವು ಕೆರೆಗಳಿಗೆ ನೀರು ಸಂಗ್ರಹಗೊಳ್ಳಲು ಅನೂಕೂಲ ಕಲ್ಪಿಸಲಾಗಿದೆ.
ಇದರಿಂದ ಅಂತರಜಲ ಪುನಶ್ಚೇತನಗೊಂಡಿದೆ ಎಂದರು. ಮಾವಿನ ಕೆರೆಯಲ್ಲಿ ನೀರು ಸಂಗ್ರಹಗೊಂಡಲ್ಲಿ ನಗರದ ಕೊಳವೆ ಬಾವಿಗಳಲ್ಲಿ ನೀರು ಬರಲಿದೆ. ಜನ ಜಾನುವಾರುಗಳಿಗೂ ಕೆರೆ ನೀರು ಉಪಯೋಗವಾಗಲಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದಪ್ಪ ಕಿಣ್ಣಿ ಸಾಹು, ಭೀಮಸೇನರಾವ್ ಪದಕಿ, ನಗರಸಭೆ ಮಾಜಿ ಸದಸ್ಯ ಬಸವರಾಜ ಆನೇಗುಂದಿ, ಜೆ.ಇ.ಕಳಕಯ್ಯ ಸ್ವಾಮಿ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.