ರುಚಿಯಾದ ಹಲಸಿನ ತೊಳೆ ಸಾರು: ಒಮ್ಮೆ ಟ್ರೈ ಮಾಡಿ ನೋಡಿ

ಬೇಕಾಗುವ ಸಾಮಗ್ರಿಗಳು
ಹಲಸಿನ ತೊಳೆ – ಒಂದು ಚಿಕ್ಕ ಬೌಲ್
ಹಲಸಿನ ಬೀಜ – 10-12
ಕಾಯಿತುರಿ – ಸ್ವಲ್ಪ
ಕೊತ್ತಂಬರಿ ಸೊಪ್ಪು – ಒಂದು ಹಿಡಿಯಷ್ಟು
ಸಣ್ಣ ಮೆಣಸು ಅಥವಾ ಸಾಮಾನ್ಯ ಹಸಿರು ಮೆನಸಿನ ಕಾಯಿ – ಖಾರಕ್ಕೆ ತಕ್ಕಷ್ಟು
ಬೆಳ್ಳುಳ್ಳಿ ಎಸಳು – 5-10
ಅರಿಶಿಣ ಹುಡಿ – ಚಿಟಿಕೆ
ಉದ್ದಿನ ಬೇಳೆ – ಒಂದು ಚಮಚ
ಜೀರಿಗೆ – ಅರ್ಧ ಚಮಚ
ಸಾಸಿವೆ – ಅರ್ಧ ಚಮಚ
ಕರಿಬೇವು – ಸ್ವಲ್ಪ
ಕೊಬ್ಬರಿ ಎಣ್ಣೆ ಒಗ್ಗರಣ್ಗೆ
ನಿಂಬೆ ಹಣ್ಣಿನ ರಸ – ಒಂದು ಚಮಚ
ಮಾಡುವ ವಿಧಾನ
ಮೊದಲು ಹಲಸಿನ ತೊಳೆ ಮತ್ತು ಹಲಸಿನ ಬೀಜವನ್ನು ಬಿಡಿಸಿ ಇಟ್ಟುಕೊಳ್ಳಿ. ಹಲಸಿನ ಬೀಜವನ್ನು ಸ್ವಲ್ಪ ಜಜ್ಜಿ ಇಟ್ಟುಕೊಳ್ಳಿ. ಬೇಯಿಸಲು ಸುಲಭವಾಗುತ್ತದೆ. ಈಗ ಒಂದು ಪಾತ್ರೆ ಯಲ್ಲಿ ಎಣ್ಣೆ ಹಾಕಿ. ಅದು ಬಿಸಿ ಆದಾಗ ಒಂದು ಟೀ ಸ್ಪೂನ್ ಉದ್ದಿನ ಬೆಳೆ ಸ್ವಲ್ಪ ಜೀರಿಗೆ , ಸ್ವಲ್ಪ ಸಾಸಿವೆ ಹಾಕಬೇಕು. ಸಾಸಿವೆ ಸಿಡಿದಾಗ ಸ್ವಲ್ಪ ಕರಿಬೇವಿನ ಎಲೆ ಹಾಕಿ. ನಂತರ ಜಜ್ಜಿಟ್ಟುಕೊಂಡ ಹಲಸಿನ ಬೀಜವನ್ನು ಹಾಕಿ ಸ್ವಲ್ಪ ಹುರಿಯಬೇಕು. ಈಗ ಬಿಡಿಸಿಟ್ಟ ಹಲಸಿನ ತೊಳೆಗಳನ್ನು ಹಾಕಿ ಸ್ವಲ್ಪ ನೀರನ್ನು ಹಾಕಿ ಕುದಿಯಲು ಬಿಡಿ. ನೀರು ಕುದಿಯುತ್ತಿರುವಾಗ ಒಂದು ಚಿಟಿಕೆ ಅರಿಶಿಣ ಸೇರಿಸಿ. ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಈಗ ಒಂದು ಮಿಕ್ಸಿ ಜಾರಿಗೆ ಕಾಯಿತುರಿ, ಬೆಳ್ಳುಳ್ಳಿ ಎಸಳು, ಕೊತ್ತೊಂಬರಿ ಸೊಪ್ಪು, ಮೆಣಸನ್ನು ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಕುದಿಯುತ್ತಿರುವ ಹಲಸಿನ ತೊಳೆ ಮತ್ತು ಬೀಜ ಮಿಶ್ರಣಕ್ಕೆ ಸೇರಿಸಿ. ಮಿಶ್ರಣ ತುಂಬಾ ಗಟ್ಟಿಯಾಗಿ ಇರಬಾರದು . ಸ್ವಲ್ಪ ತೆಳ್ಳಗೆ ಇರುವಂತೆ ನೋಡಿಕೊಳ್ಳಿ. ಚೆನ್ನಾಗಿ ಕುದಿದ ನಂತರ ಇದಕ್ಕೆ ನಿಂಬೆ ಹಣ್ಣಿನ ರಸವನ್ನು ಸೇರಿಸಿ. ತಕ್ಷಣ ಗ್ಯಾಸ್ ಆಫ್ ಮಾಡಿ. ಸ್ವಲ್ಪ ಹುಳಿ ಜಾಸ್ತಿ ಇದ್ದರೆ ಈ ಸಾರು ತುಂಬಾ ಚೆನ್ನಾಗಿ ಇರುತ್ತದೆ. ಇದನ್ನು ಹಾಗೆ ಬಿಸಿ ಬಿಸಿಯಾಗಿ ಕುಡಿಯಲುಬಹುದು. ಅಥವಾ ಅನ್ನದ ಜೊತೆ ಊಟ ಮಾಡಲು ಬಳಸಬಹುದು.