ಹಿಂಗಾರಿನಲ್ಲಿ ಸಾಸಿವೆ ಬೆಳೆಯಲು ಉತ್ತಮ ಸಮಯ
ನಾಯ್ಕಲ್‍ಃ ಸಾಸಿವೆ ಬೆಳೆ ತರಬೇತಿ ಕಾರ್ಯಕ್ರಮ
ಯಾದಗಿರಿ, ಶಹಾಪುರಃ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಭೀಮರಾಯನಗುಡಿ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಸಾಸಿವೆ ಬೆಳೆ ಯೋಜನೆ ಇವರ ಸಹಯೋಗದಲ್ಲಿ ಹಿಂಗಾರಿನಲ್ಲಿ ಸಾಸಿವೆ ಬೆಳೆಯ ತಳಿಗಳ ಆಯ್ಕೆ ತರಬೇತಿ ಕಾರ್ಯಕ್ರಮ ತಾಲೂಕಿನ ನಾಯ್ಕಲ್ ಗ್ರಾಮದ ಮಲ್ಲಿಕಾರ್ಜುನ ರೆಡ್ಡಿ ಇವರ ಜಮೀನಿನಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಕೃಷಿ ವಿಸ್ತರಣಾ ಮುಂದಾಳು ಡಾ.ಎಸ್.ಎನ್.ಹೊನ್ನಾಳಿ ಮಾತನಾಡಿ, ಮುಂಗಾರು ಭತ್ತದ ಕಟಾವಿನ ನಂತರ ಭೂಮಿಯನ್ನು ಉಳುಮೆ ಮಾಡದೆ ಭತ್ತದ ಸಾಲುಗಳ ಮಧ್ಯೆ ಕಟಾವು ಮಾಡಿದ ತಕ್ಷಣ ಸಾಸಿವೆ ಬಿತ್ತನೆ ಮಾಡಬೇಕು.
ಈ ರೀತಿ ಮಾಡುವುದರಿಂದ ಭೂಮಿಯಲ್ಲಿರುವ ಉಳಿದ ತೇವಾಂಶವನ್ನು ಬಳಸಿಕೊಂಡು ಹಿಂಗಾರಿನಲ್ಲಿ ಸಾಸಿವೆಯನ್ನು ಬೆಳೆಯಬಹುದು. ಅದರಲ್ಲೂ ಅಚ್ಚುಕಟ್ಟು ಭಾಗದ ಕೊನೆಯ ರೈತರ ಹೊಲಗಳಿಗೆ ಹಿಂಗಾರಿನಲ್ಲಿ ಎರಡನೇಯ ಬೆಳೆ ಬೆಳೆಯಲು ನೀರು ಲಭ್ಯವಾಗುವುದಿಲ್ಲ. ಅಂತಹ ಹೊಲಗಳಿಗೆ ಅತೀ ಸೂಕ್ತವಾದ ಬೆಳೆ ಸಾಸಿವೆಯಾಗಿದೆ ಎಂದು ತಿಳಿಸಿದರು.
ಹಾಗೂ ಡಾ.ಅರುಣ್ ಕುಮಾರ್ ತಳಿ ಅಭಿವೃದಿ ಶಾಸ್ತ್ರ, ಕೃಷಿ ಮಹಾವಿದ್ಯಾಲಯ, ಭೀಮರಾಯನಗುಡಿ ಯವರು ಸಾಸಿವೆ ಬೆಳೆಯ ತಳಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮಲ್ಲಿಕಾರ್ಜುನ್ ರೆಡ್ಡಿ, ಭೂಪಾಲರೆಡ್ಡಿ, ಮಹದೆವರೆಡ್ಡಿ ಮತ್ತು ಬಾಷುಮಿಯಾ ಸೇರಿದಂತೆ ಸುತ್ತಮುತ್ತಲ ಗ್ರಾಮದ ರೈತರು ಭಾಗವಹಿಸಿದ್ದರು.