ಅಯೋಧ್ಯ ಶ್ರೀ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣೆಗೆ ಚಾಲನೆ
ಶ್ರೀರಾಮಚಂದ್ರ ಸದ್ಗುಣಗಳ ಸಾಗರ: ವಿಜಯ ಮಹಾಂತೇಶ
ಶಹಾಪುರ: ಸತ್ಯ, ಸೌಹಾರ್ದತೆ, ದಯೆ, ಕ್ಷಮೆ, ಪ್ರತಿಜ್ಞಾ ಪಾಲನೆ, ತೇಜಸ್ಸು ಹೀಗೆ ಎಲ್ಲಾ ಉತ್ತಮ ಗುಣಗಳಿಂದ ಕೂಡಿದ ಪ್ರಭು ಶ್ರೀರಾಮಚಂದ್ರ ಸದ್ಗುಣಗಳ ಸಾಗರ ಎಂದು ಅಭಿಯಾನ ಸಮಿತಿಯ ವಕ್ತಾರ ವಿಜಯ ಮಹಾಂತೇಶ ತಿಳಿಸಿದರು.
ನಗರದ ಕುಂಬಾರ ಓಣಿ ಹಿರೇಮಠದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಷ್ಟ್ರದಲ್ಲಿ ಅಷ್ಟೆ ಅಲ್ಲ ವಿಶ್ವದಲ್ಲಿ ಮರ್ಯಾದ ಪುರುಷೋತ್ತಮನೆಂದು ಆತನ ಪ್ರತಿಯೊಂದು ಕರ್ಮವೂ ಅನುಕರಣೆ ಮಾಡಲು ಯೋಗ್ಯವಾಗಿದ್ದು, ಜಗತ್ತಿನಾದ್ಯಂತ ಶ್ರೀರಾಮ ಜಪ ನಡೆದಿದೆ. ಧರ್ಮ ರಕ್ಷಣೆಗಾಗಿ ಮತ್ತು ಲೋಕ ಕಲ್ಯಾಣಕ್ಕಾಗಿಯೇ ಅವತರಿಸಿದ ಶ್ರೀರಾಮಚಂದ್ರನು, ಸಮಸ್ತ ಲೋಕದ ಜನತೆಗೆ ಧರ್ಮ, ಸತ್ಯದ ದಾರಿ ತೋರಿದ ಮಹಾಪ್ರಭುವಾಗಿದ್ದು, ಶ್ರೀರಾಮ ಮಂದಿರ ನಿರ್ಮಾಣ 492 ವರ್ಷದ ಹೋರಾಟದ ಫಲವಾಗಿದೆ. ರಾಮಮಂದಿರ ರಾಷ್ಟ್ರ ಮಂದಿರ, ವಿಶ್ವ ಮಂದಿರವಾಗಿ ಹೊರಹೊಮ್ಮಿದ ನಂತರವೇ ರಾಮ ಮಂದಿರಕ್ಕಾಗಿ ತ್ಯಾಗ, ಬಲಿದಾನಗೊಂಡವರ ಆತ್ಮಕ್ಕೆ ಶಾಂತಿ ದೊರೆಯಲಿದೆ ಎಂದರು.
ಪ್ರಾಸ್ತಾವಿಕವಾಗಿ ಯುವ ಮುಖಂಡ ಸುಧೀರ ಚಿಂಚೋಳಿ ಮಾತನಾಡಿ, ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬ ಭಕ್ತರು ಯೋಗ್ಯತಾನುಸಾರ ನಿಧಿ ಸಮರ್ಪಣಾ ಭಾವದಿಂದ ನೀಡಿ ಮಂದಿರ ಕಾರ್ಯಕ್ಕೆ ಕೈ ಜೋಡಿಸಬೇಕು.
ನಾಲ್ಕು ಲಕ್ಷ ಹಳ್ಳಿಗಳಲ್ಲಿ ನಿಧಿ ಸಮರ್ಪಣೆ ನಡೆಯಲಿದೆ. ಇದರಿಂದ ಶ್ರೀರಾಮನ ಜೀವನ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ರಾಮಭಕ್ತಿ, ರಾಷ್ಟ್ರ ಶಕ್ತಿಯಾಗುವ ಸಂಕಲ್ಪ ನಮ್ಮೆಲ್ಲರದ್ದಾಗಿದೆ ಎಂದರು.
ವೇದಿಕೆ ಮೇಲೆ ಸಿದ್ದೇಶ್ವರ ಶಿವಾಚಾರ್ಯರು, ಸೂಗುರೇಶ್ವರ ಶಿವಾಚಾರ್ಯರು, ಗುರುಪಾದ ಮಹಾಸ್ವಾಮಿಗಳು, ನಿಜಗುಣ ದೇವರು ಸಾನಿಧ್ಯ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ತಿಪ್ಪಣ್ಣ ಹೂಗಾರ, ಮಾಜಿ ಶಾಸಕ ಗುರು ಪಾಟೀಲ ಶಿರವಾಳ, ಮಲ್ಲಣ್ಣ ಮಡಿ,್ಡ ಘೇವರಚಂದ ಜೈನ, ಮಾಂಗಿಲಾಲ ಜೈನ, ಶರಣಪ್ಪ ಮುಂಡಾಸ, ಕರವೇ ಉ.ಕ ಸಂಚಾಲಕ ಶರಣು ಗದ್ದುಗೆ, ಮಲ್ಲಿಕಾರ್ಜುನ ಚಿಲ್ಲಾಳ, ರಾಜುಗೌಡ ಉಕ್ಕಿನಾಳ, ಗುರು ಕಾಮಾ, ಬಸವರಾಜ ಆನೇಗುಂದಿ, ಅರವಿಂದ ಉಪ್ಪಿನ, ಸಂತೋಷ ಬಾಸುತ್ಕರ್, ರೇಖು ಚೌವ್ಹಾಣ, ರಾಘವೇಂದ್ರ ಯಕ್ಷಿಂತಿ, ಅಶೋಕ, ಅಪ್ಪಣ್ಣ ದಶವಂತ, ದೇವಿಂದ್ರಪ್ಪ ಕನ್ಯಾಕೋಳೂರು, ಮಲ್ಲಿಕಾರ್ಜುನ ಕಂದಕೂರ, ಸತೀಶ ಪಂಚಭಾವಿ ಇದ್ದರು.
ಇದೇ ಸಂದರ್ಭದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಮತ್ತು ಸಿದ್ದಗಂಗಾ ಶಿವಕುಮಾರ ಸ್ವಾಮಿಗಳ ಭಾವಚಿತ್ರಕ್ಕೆ ಗೌರವ ಸಮರ್ಪಿಸಲಾಯಿತು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀರಾಮನ ಅಲಂಕಾರ ವಾಹನದ ಮೆರವಣಿಗೆ ಮೂಲಕ ನಿಧಿ ಸಂಗ್ರಹಿಸಲಾಯಿತು. ಅನೀಲ ಬಿರಾದಾರ ನಿರೂಪಿಸಿದರು. ವಾಸುದೇವಾಚಾರ್ಯ ಸಗರ ಪ್ರಾರ್ಥಿಸಿದರು. ಸ್ವಾತಿ ಕಲ್ಬುರ್ಗಿ ಶ್ರೀರಾಮನ ಭಜನೆ ಪ್ರಸ್ತುತ ಪಡಿಸಿದರು.