ಪ್ರಮುಖ ಸುದ್ದಿ

ಭಗವದ್ಗೀತೆ ಸರ್ವಧರ್ಮ ಸಮನ್ವಯದ ವಿಶ್ವಕೋಶ: ಲಕ್ಷ್ಮಣ

ಶ್ರೀಕೃಷ್ಣ ಜನ್ಮ ದಿನಾಚರಣೆ

ಅಲೌಕಿಕತೆಯಿಂದ ಲೌಕಿಕತೆಗೆ ಒಯ್ಯುವ ಗೀತೆ.. ಪುಣ್ಯ ಸಾಧನ

ಶಹಾಪುರ: ಶ್ರೀಕೃಷ್ಣಪರಮಾತ್ಮನ ಶ್ರೀಮುಖದಿಂದ ಹೊರಟ ಪರಮ ರಹಸ್ಯಮಯ ಭಗವದ್ಗೀತೆಯು ಸರ್ವಧರ್ಮ ಸಮನ್ವಯದ ವಿಶ್ವಕೋಶವಾಗಿದೆ ಎಂದು ಶಿಕ್ಷಕ ಲಕ್ಷ್ಮಣ ಲಾಳಸೇರಿ ತಿಳಿಸಿದರು.

ತಾಲೂಕಾ ಆಡಳಿತದಿಂದ ನಗರಸಭೆ ಆವರಣದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಠಮಿ ಕುರಿತು ಉಪನ್ಯಾಸ ನೀಡಿದ ಅವರು, ಸ್ವತಃ ಕೃಷ್ಣನು ಅರ್ಜುನನ್ನು ನಿಮಿತ್ತವಾಗಿಸಿ ಮನುಕುಲಕ್ಕೆ ಉಪದೇಶ ನೀಡಿದ್ದು, ಪರಮ ಶಾಂತಿಗಾಗಿ ಗೀತೆಯ ಅಧ್ಯಯನ ಅವಶ್ಯಕವಾಗಿದೆ. ಬದುಕಿಗೆ ಶಾಶ್ವತ ಸುಖ ಸಿಗಬೇಕಾದರೆ ಪ್ರತಿಯೊಬ್ಬರು ಗೀತೆಯನ್ನು ಪಠಿಸಬೇಕು. ಅಲೌಕಿಕತೆಯಿಂದ ಲೌಕಿಕತೆಗೆ ನಮ್ಮನ್ನು ಕರೆದೊಯ್ಯಲು ಗೀತೆ ಪುಣ್ಯ ಸಾಧನ ವಾಗಿದೆ.

ಯಾದವ ಕುಲ ಸಂಜಾತರಾದ ಭಗವಾನ್ ಶ್ರೀಕೃಷ್ಣನು ಸರ್ವರ ಆರಾಧ್ಯ ದೈವವಾಗಿದ್ದು, ಧರ್ಮಕ್ಕೆ ಕುಂದುಂಟುದಾಗ ಮತ್ತೆ ಅವತಾರವೆತ್ತಿ ಬಂದು ಧರ್ಮರಕ್ಷಣೆ ಮಾಡುತ್ತೇನೆ. ಶಿಷ್ಟರ ಪರಿಪಾಲನೆ ದುಷ್ಟರಿಗೆ ಶಿಕ್ಷೆ ಇದು ಪರಮಾತ್ಮನ ಸಂದೇಶವಾಗಿದ್ದು, ದುಷ್ಟವಾದ ಕಾರ್ಯಗಳತ್ತ ಗಮನ ನೀಡದೆ ಪ್ರತಿಯೊಬ್ಬರು ಸ್ವಾಸ್ಥ್ಯ ಸಮಾಜದತ್ತ ಮುನ್ನಡೆಯಬೇಕು ಎಂದರು.

ಸುದೀಪ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಾಯಬಣ್ಣ ಪುರ್ಲೆ ಮಾತನಾಡಿ, ಯಾದವ ಸಮಾಜ ಪ್ರತಿಯೊಂದು ರಂಗದಲ್ಲಿ ಸಂಘಟಿತರಾಗಬೇಕು, ಶಿಕ್ಷಣ ನಮ್ಮೆಲ್ಲರ ಮೂಲ ಮಂತ್ರವಾಗಬೇಕು ಎಂದರು. ಯಾದವ ಸಮಾಜದ ತಾಲೂಕಾ ಅಧ್ಯಕ್ಷ ನಾರಾಯಣ ಯಾದವ, ಹಿರಿಯ ಮುಖಂಡ ಮಹಾದೇವಪ್ಪ ಸಾಲಿಮನಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ ಸೋಮಶೇಖರ ಹಾಗರಗುಂಡಿಗಿ, ಸಣ್ಣನಿಂಗಣ್ಣ ನಾಯ್ಕೋಡಿ, ನಾಗಪ್ಪ ತಹಶೀಲ್ದಾರ, ನಗರ ಯೋಜನಾ ಅಧ್ಯಕ್ಷ ಸಲೀಂ ಸಂಗ್ರಾಮ, ರಾಜುಗೌಡ ಉಕ್ಕಿನಾಳ, ಶರಣಗೌಡ ಮುದ್ನಾಳ, ವಿಠಲ್, ಮಾಳಪ್ಪ ಯಾದವ ಸೇರಿದಂತೆ ಯಾದವ ಸಮಾಜದ ಹಲವಾರು ಮುಖಂಡರು ಭಾಗವಹಿಸಿದ್ದರು. ಸೂರ್ಯಕಾಂತ ಕಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿಹೆಚ್ಚು ಅಂಕಪಡೆದ ಯಾದವ ಸಮಾಜದ ಇಬ್ಬರು ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುಂಚೆ ಸಿ.ಬಿ.ಕಮಾನದಿಂದ ನಗರಸಭೆ ವರೆಗೂ ಶ್ರೀಕೃಷ್ಣನ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು. ಮಕ್ಕಳು ಶ್ರೀಕೃಷ್ಣ ರಾಧೆ ವೇಷಧರಿಸಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button