ಮುಖ್ಯಮಂತ್ರಿ ಸಿದ್ಧರಾಮಯ್ಯ ಸಿದ್ಧ ಭಾಷಣ ಓದಿದ್ದೇಕೆ?
ಸಿದ್ಧ ಭಾಷಣ ಓದಿ ಅಚ್ಚರಿ ಮೂಡಿಸಿದ ಸಿಎಂ ಸಿದ್ಧರಾಮಯ್ಯ
ಮೈಸೂರು: ಸಮಾಜವಾದದಿಂದ ಬೆಳೆದು ಬಂದಿರುವ ಸಿಎಂ ಸಿದ್ಧರಾಮಯ್ಯ ಅವರ ಭಾಷಣ ಅಂದರೆ ಅವರ ವಿರೋಧಿಗಳೂ ಸಹ ಕೇಳಲು ಬಯಸುತ್ತಾರೆ. ವ್ಯಂಗ್ಯ, ಹಾಸ್ಯ, ಮೊನಚು, ತಿವಿತ ಮಿಶ್ರಿತ ಭಾಷಣ. ಸಮಕಾಲೀನ ಸಂದರ್ಭಗಳ ಬಗ್ಗೆ ಉದಾಹರಣೆಗಳ ಸಮೇತ ತಮ್ಮದೇ ಆದ ಶೈಲಿಯಲ್ಲಿ ಅಪ್ಪಟ ಮೈಸೂರಿನ ಮಣ್ಣಿನ ಭಾಷೆಯ ಮೂಲಕ ನಾಡಿನ ಜನರ ಮನಗೆದ್ದವರು ಸಿದ್ಧರಾಮಯ್ಯ. ಹೀಗಾಗಿ, ಸಿದ್ಧರಾಮಯ್ಯ ಭಾಷಣವೆಂದರೆ ಜನ ಸೇರುತ್ತಾರೆ. ಆದರೆ, ಇಂದು ಮಾತ್ರ ಸಿದ್ಧರಾಮಯ್ಯ ಸಿದ್ಧ ಭಾಷಣ ಓದಿ ಸಭಿಕರನ್ನು ಅಚ್ಚರಿಗೊಳಪಡಿಸಿದರು. ಸಿಎಂ ಸಿದ್ಧರಾಮಯ್ಯ ಅವರ ಭರ್ಜರಿ ಭಾಷಣದ ನಿರೀಕ್ಷೆಯಲ್ಲಿದ್ದವರನ್ನು ನಿರಾಸೆಗೊಳಿಸಿದರು.
ಮೈಸೂರಿನಲ್ಲಿ 83 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದ ಸಿಎಂ ಸಿದ್ಧರಾಮಯ್ಯ ಚಾಚೂ ತಪ್ಪದೆ ಸಿದ್ಧ ಭಾಷಣವನ್ನು ಓದಿ ಮುಗಿಸಿದರು. ಕನ್ನಡ ನಾಡು ನುಡಿ ಎತ್ತಿ ಹಿಡಿಯುವುದು ನಮ್ಮ ಕರ್ತವ್ಯ. ನಮ್ಮ ನಾಡಿಗೆ ನಾಡಗೀತೆ ಇರುವಂತೆ ನಾಡಧ್ವಜವೂ ಬೇಕು ಎಂದು ಅಭಿಪ್ರಾಯಪಟ್ಟರು.
ಇದು ಚುನಾವಣಾ ವರ್ಷವಾಗಿದ್ದು ಮೊದಲೇ ಅನೇಕ ವಿವಾದಗಳು ಸರ್ಕಾರವನ್ನು ಕಾಡುತ್ತಿವೆ. ಹೀಗಾಗಿ, ಸಾಹಿತ್ಯ ಸಮ್ಮೇಳನದಲ್ಲಿ ಭಾಷಣ ಮಾಡುವ ಭರದಲ್ಲಿ ಮತ್ತೊಂದು ಎಡವಟ್ಟು ಆಗುವುದು ಬೇಡ. ನಾಡು ನುಡಿಯ ವಿಷಯದಲ್ಲಿ ಹೆಚ್ಚು ಕಮ್ಮಿ ಆದರೆ ತಮ್ಮ ಜೊತೆಗೆ ಕಾಂಗ್ರೆಸ್ ಪಕ್ಷದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಸಿಎಂ ಸಿದ್ಧರಾಮಯ್ಯ ಜಾಗೃತಿ ವಹಿಸಿ ಸಿದ್ಧ ಭಾಷಣ ಓದಿದ್ದಾರೆ ಎಂದು ಸಭಿಕರು ತಮ್ಮದೇ ಆದ ಮಾತುಕತೆಗಳಲ್ಲಿ ಮುಳುಗಿದ್ದರು.