ಜೆಡಿಎಸ್ – ಬಿಜೆಪಿಗೆ ಟ್ವಿಟ್ ಮೂಲಕ ಸವಾಲೆಸೆದ ಟಗರು
ಖಾಸಗಿ ಮಾತುಕತೆಯ ವಿಡಿಯೋದ ತಪ್ಪು ವ್ಯಾಖ್ಯಾನ ಬಿಜೆಪಿ ವಿರುದ್ಧ ಟಗರು ಆಕ್ರೋಶ
ವಿವಿ ಡೆಸ್ಕ್ಃ ನಾನು ಜಾತಿವಾದಿ ಅಲ್ಲ, ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿರುವ ನಾನು ಅಂಬೇಡ್ಕರ್,ಗಾಂಧೀಜಿ, ಬಸವಣ್ಣ ಮತ್ತು ಕುವೆಂಪು ಅವರ ಚಿಂತನೆಯಿಂದ ಪ್ರೇರಿತನಾದ ಜಾತ್ಯತೀತ. ಅವರ ಚಿಂತನೆಗಳ ಫಲವೇ ನನ್ನ ಸರ್ಕಾರದ ಯೋಜನೆಗಳಾಗಿದ್ದವು. ಇದು ನನ್ನ ಜಾತಿವಿನಾಶದ ಹಾದಿ. ನಿಮ್ಮದು ಯಾವ ಹಾದಿ? ಎಂದು ಸಿದ್ರಾಮಯ್ಯ ಟ್ವಿಟ್ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿಯನ್ನು ಪ್ರಶ್ನಿಸಿದ್ದಾರೆ.
ನನ್ನ ಮನೆಯಲ್ಲಿ ನಡೆದ ಖಾಸಗಿ ಮಾತುಕತೆಯ ವಿಡಿಯೋದ ತಪ್ಪು ವ್ಯಾಖ್ಯಾನವನ್ನು ಬಿಜೆಪಿ ನಾಯಕರು ಪ್ರಚಾರ ಮಾಡುತ್ತಾ ವಿಕೃತಾನಂದ ಪಡುತ್ತಿದ್ದಾರೆ. ಇದು ನನಗೆ ಹೊಸತಲ್ಲ. ಈ ಸುಳ್ಳಿನ ಕತ್ತಲನ್ನು ಸತ್ಯದ ಬೆಳಕು ಅಳಿಸಿ ಹಾಕುತ್ತೆ. ನನ್ನ ರಾಜಕೀಯ ವಿರೋಧಿಗಳಿಗೆ ಇದೇ ನನ್ನ ದೀಪಾವಳಿ ಸಂದೇಶ ಎಂದು ಟ್ವಿಟ್ ಮಾಡುವ ಮೂಲಕ ಮಾರ್ಮಿಕ ಸಂದೇಶ ನೀಡಿದ್ದಾರೆ.
ನಾನು ಜಾತಿ ರಾಜಕೀಯ ಮಾಡುತ್ತಿದ್ದೇನೆ ಎಂದು ಆರೋಪಿಸುವವರು ಅವರ ಪಕ್ಷಗಳ ನೀತಿ ಮತ್ತು ಕಾರ್ಯಕ್ರಮಗಳಲ್ಲಿ ಗಾಂಧಿ ಅಂಬೇಡ್ಕರ್, ಬಸವಣ್ಣ ಮತ್ತು ಕುವೆಂಪು ವಿಚಾರಧಾರೆಗಳೆಷ್ಟು ಇವೆ ಎನ್ನುವುದನ್ನು ಬಹಿರಂಗ ಪಡಿಸಲಿ. ಇದರ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ದ. ಇದು ನನ್ನ ಸವಾಲು ಕೂಡಾ ಹೌದು ಎಂದು ಜೆಡಿಎಸ್ ಮತ್ತ ಬಿಜೆಪಿ ಯವರಿಗೆ ಟ್ವಿಟ್ ಮೂಲಕ ಟಗರು ತಿವಿದಿದೆ.