ಅದಮ್ಯ ಪ್ರತಿಭೆಯ ‘ಮೈಸೂರಿನ ಗಾನಶ್ರೀ’ ಬಾಲಕಿ ‘ಧನ್ಯಾ’
ಪ್ರತಿಭಾನ್ವಿತ ಯುವ ಸಂಗೀತ ಗಾಯಕಿ ಬಾಲಕಿ ಧನ್ಯಾ. ಎನ್.
–ರಾಘವೇಂದ್ರ ಹಾರಣಗೇರಾ
ಯಾವುದೇ ಕ್ಷೇತ್ರದಲ್ಲಿ ಸಾಧಿಸಿ ಯಶಸ್ಸು ಕಂಡುಕೊಳ್ಳಬೇಕಾದರೆ ಪ್ರಮಾಣಿಕವಾದ ಪ್ರಯತ್ನ, ನಿರ್ಮಲ ಮನಸ್ಸಿನ ಅಭ್ಯಾಸ, ಕಠಿಣ ಪರಿಶ್ರಮ, ಸಾಧಿಸುವ ಛಲ ಇದ್ದರೆ ಯಶಸ್ಸು ತಮ್ಮದಾಗಿಸಿಕೊಳ್ಳಬಹುದು.
ಇಂತಹ ಪ್ರಯತ್ನಗಳ ಮೂಲಕ ಸಂಗೀತ ಕ್ಷೇತ್ರದಲ್ಲಿ ಸಾಧನೆಯ ಹಾದಿಯಲ್ಲಿರುವ ಮೈಸೂರಿನ ಕುವರಿ ಧನ್ಯಾ. ಎನ್ ಅವರು ಬಹುಮುಖ ಪ್ರತಿಭೆಯ ಯುವ ಸಂಗೀತ ಕಲಾವಿದೆ. ಮೈಸೂರಿನ ನಾಗರಾಜು ಹಾಗೂ ಶ್ರೀಮತಿ ಪೂರ್ಣಿಮಾ ಎಂಬ ಸುಸಂಸ್ಕೃತ ದಂಪತಿಗಳ ಪ್ರೀತಿಯ ಮಗಳಾದ ಧನ್ಯಾ ಪಿ.ಯು.ಸಿ ಅಧ್ಯಯನ ಮಾಡುತ್ತಿದ್ದಾರೆ.
ತನ್ನ ಪಠ್ಯದ ಜೊತೆಗೆ ಗುರುಗಳಾದ ವಿದುಷಿ ಶ್ರೀಮತಿ ಪಿ.ಎಸ್ ರಂಜಿನಿ ಅವರ ಹತ್ತಿರ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. ಜೊತೆಗೆ ಡಾ.ತುಳಿಸಿ ಅವರಲ್ಲಿ ಭರತ ನಾಟ್ಯ ಮತ್ತು ಡಾ.ರಾಮಚಂದ್ರ ಅವರ ಹತ್ತಿರ ಗಮಕ ಕಲೆಯಲ್ಲಿ ಅಭ್ಯಾಸ ಮಾಡುತ್ತಿರುವ ಪ್ರತಿಭಾನ್ವಿತ ಸಂಗೀತ, ನೃತ್ಯ, ಗಮಕ ಕಲಾವಿದೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರತಿಭೆಗೆ ವಯಸ್ಸು, ಜಾತಿ, ಪಂಥ ಮುಂತಾದವು ಯಾವುದು ಮುಖ್ಯವಾಗುವುದಿಲ್ಲ ಹಾಗೂ ಇದಕ್ಕೆ ಯಾವುದೇ ತಾರತಮ್ಯಗಳಿಲ್ಲ, ಗಡಿಗಳಿಲ್ಲ. ಪ್ರತಿಭೆಗೆ ನಿರಂತರ ಪ್ರಯತ್ನ, ಶ್ರದ್ಧೆ, ತಾಳ್ಮೆ, ಸಹನೆ ತುಂಬಾ ಮುಖ್ಯವಾಗಿ ಪರಿಣಮಿಸತ್ತವೆ. ಈ ಹಿನ್ನಲೆಯಲ್ಲಿ ಬಾಲಕಿ ಧನ್ಯಾ ಪ್ರಾಮಾಣಿಕತೆ ಮತ್ತು ಪರಿಶ್ರಮದ ಮೂಲಕ ತನ್ನ ಸಂಗೀತ ಅಭ್ಯಾಸದಲ್ಲಿ ತೊಡಗಿಕೊಂಡಿರುವ ಸೃಜನಶೀಲ ಕಲಾವಿದೆ.
ಸಂಗೀತ ಕಲೆಯಲ್ಲಿ ಅನನ್ಯವಾದದ್ದನ್ನು ಸಾಧಿಸುವ ಹಂಬಲವುಳ್ಳ ಧನ್ಯಾ ನಾಡಿನಲ್ಲಿ ನಡೆದ ಅನೇಕ ಸಂಗೀತ, ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ, ಬಹುಮಾನ, ಗೌರವಾದಾರಗಳನ್ನು ಪಡೆದು ತನ್ನ ಪ್ರತಿಭೆಗೆ ಸಾಕ್ಷಿ ಒದಗಿಸಿದ್ದಾರೆ. ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ಹಮ್ಮಿಕೊಂಡ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ” ಮೈಸೂರಿನ ಗಾನಶ್ರೀ” ಎಂಬ ಬಿರುದು ಪಡೆದಿದ್ದಾರೆ.
ಬೆಂಗಳೂರಿನ ಇಸ್ಕಾನ್ ದೇವಸ್ಥಾನ, ಮೈಸೂರಿನ ಗೊಕುಲಮ್, ಕೃಷ್ಣಧಾಮಗಳಲ್ಲಿ, ಗಾನಸಿರಿ ವೇದಾಂತ ಲಹರಿ ವೇದಿಕೆಯಲ್ಲಿ ಹರಿಕಥಾಮೃತಸಾರವನ್ನು ಪ್ರಸ್ತುತಪಡಿಸಿ ಹಿರಿಯ ಸಂಗೀತ ಕಲಾವಿದರ, ವಿದ್ವಾಂಸರ, ಪ್ರೇಕ್ಷಕರ ಗಮನ ಸೆಳೆದಿದ್ದಾರೆ. TV 9 ಪ್ರಸಾರ ವಾಹಿನಿಯ ಪ್ರಾಥಸ್ಮರಣೀಯಾಮಿಯಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ತಿರುಪತಿಯಲ್ಲಿ ನಡೆದ ಓಂಜಲ್ ಸೇವೆ Auditions ನಲ್ಲಿ ಆಯ್ಕೆಯಾಗಿ 24. 4. 2019 ರಲ್ಲಿ ಗಾಯನ ಸೇವೆ ಸಲ್ಲಿಸಿದ್ದಾರೆ. 14.01.2020 ರಂದು ಉಡುಪಿಯ ವಿಶ್ವಕಲಾರ್ಪಣಮ್ ಪಲಿಮಾರು ಪರ್ಯಾಯದ ಕಾರ್ಯಕ್ರಮದಲ್ಲಿ ಭಾವಹಿಸಿ ಸಂತರ ಕೃಪೆಗೆ ಪಾತ್ರರಾಗಿದ್ದಾರೆ.
ತಂದೆ-ತಾಯಿ ಹಾಗೂ ಗುರುಗಳ ಸಂಸ್ಕಾರ, ಮಾರ್ಗದರ್ಶನ, ತರಬೇತಿ ಮತ್ತು ಪ್ರೋತ್ಸಾಹ, ಪ್ರೇರಣೆಯಲ್ಲಿ ಬೆಳೆಯುತ್ತಿರುವ ಕು.ಧನ್ಯಾ ಅವರೆಲ್ಲರನ್ನೂ ಧನ್ಯತಾಭಾವದಿಂದ ಕೃತಜ್ಞತೆಗಳನ್ನು ಅರ್ಪಿಸುತ್ತಾರೆ. ಲಾಕ್ ಡೌನ್ ಸಂದರ್ಭದಲ್ಲಿ ದೇವರನಾಮ ಆನ್ ಲೈನ್ ತರಗತಿ ನಡೆಸಿ ಅದರಿಂದ ಬಂದ ಹಣವನ್ನು ಪ್ರಧಾನಮಂತ್ರಿ ಫಂಡಿಗೆ ಮತ್ತು ಮೈಸೂರಿನಲ್ಲಿರುವ ಗಂಜಿ ಕೇಂದ್ರಕ್ಕೆ ನೀಡಿ ಮಾನವೀಯತೆ ಮೆರಿದಿದ್ದಾಳೆ.
ಯುವ ಸಂಗೀತ ಕಲಾವಿದೆ ಧನ್ಯಾ ಅವರಲ್ಲಿ ನಾಡಿನ ಶ್ರೇಷ್ಠ ಸಂಗೀತ ಕಲಾವಿದೆಯಾಗಿ ಬೆಳೆಯುವ ಎಲ್ಲಾ ಲಕ್ಷಣಗಳು, ಸಾಧ್ಯತೆಗಳು ಕಾಣಬಹುದು. ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಯ ಮೂಲಕ ಹೆಸರಾಂತ ಕಲಾವಿದೆಯಾಗಿ ಬೆಳೆಯಲಿ ಎಂದು ಹಾರೈಸೋಣ.
-ರಾಘವೇಂದ್ರ ಹಾರಣಗೇರಾ ಸಮಾಜಶಾಸ್ತ್ರ ಉಪನ್ಯಾಸಕರು ಶಹಾಪುರ ಜಿ. ಯಾದಗಿರಿ ಮೊ.ನಂ. 9901559873