ಆಳವಿಲ್ಲದ ಅಗಲ ಹೊಸ ತಲೆಮಾರಿನ ಸಾಹಿತ್ಯ – ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಕಳವಳ
ನಾಡಹಬ್ಬ ಜನಸಾಮಾನ್ಯರ ಹಬ್ಬ, ಸರ್ವರ ಸಹಭಾಗಿತ್ವ ಅತ್ಯಗತ್ಯ: ಹಿರಿಯ ಕವಿ ನಿಸಾರ್ ಅಹಮದ್
ದಸರಾ ಉದ್ಘಾಟಿಸಲಿರುವ ಜೋಗದಸಿರಿಯ ಕವಿ ಜತೆ ವಿನಯವಾಣಿ exclusive ಸಂದರ್ಶನ
ನಿತ್ಯೋತ್ಸವ ಕವಿ ಎಂದೇ ಖ್ಯಾತಿ ಪಡೆದಿರುವ ನಾಡಿನ ನೆಚ್ಚಿನ ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ಈ ಬಾರಿಯ ನಾಡ ದಸರಾ ಉದ್ಘಾಟಿಸಲಿದ್ದಾರೆ. ನಾಳೆಯೇ ನಾಡಹಬ್ಬಕ್ಕೆ ಚಾಲನೆ ನೀಡಲಿರುವ ಹಿರಿಯ ಕವಿ ನಿಸಾರ್ ಅಹಮದ್ ಸರ್ ತಮ್ಮ ಬಿಡುವಿಲ್ಲದ ಬಿಜಿ ಶೆಡ್ಯೂಲ್ ಮದ್ಯೆಯೂ ವಿನಯವಾಣಿ ಸಂಪಾದಕರಾದ ಮಲ್ಲಿಕಾರ್ಜುನ ಮುದನೂರ್ ಜತೆ ಪ್ರೀತಿಯಿಂದ ಮಾತನಾಡಿದ್ದಾರೆ. ಎಕ್ಸಕ್ಲೂಸಿವ್ ಸಂದರ್ಶನ ನೀಡಿದ್ದಾರೆ. ನಿಸಾರ್ ಅಹಮದ್ ಅವರ ಜತೆಗಿನ ಮಾತುಕತೆ ಹೀಗಿದೆ.
ವಿನಯವಾಣಿಃ ಸರ್, ನಾಡಹಬ್ಬ ಕುರಿತು ನಿಮ್ಮ ಅಭಿಪ್ರಾಯ..?
ಕವಿ ನಿಸಾರ್ ಅಹಮದ್: ನಾಡಹಬ್ಬ ದಸರಾ ಇಡೀ ಕರ್ನಾಟಕದ ಹಬ್ಬ ಇದು ಹೇಗೆ ಆಚರಿಸಬೇಕು ಎಂಬುದು ತಾತ್ವಿಕವಾದ ಅರ್ಥ. ಈ ನಾಡು… ಹಲವು ವರ್ಷಗಳ ಹಿಂದೆ ನಮ್ಮ ಸಾಂಸ್ಕೃತಿಕ ಉತ್ಸವಗಳನ್ನು, ಸಾಹಿತ್ಯಿಕ ಉತ್ಸವಗಳನ್ನೂ ನಾಡ ಹಬ್ಬವನ್ನಾಗಿ ಶಾಲಾ ಕಾಲೇಜುಗಳಲ್ಲಿ, ಪ್ರತಿ ಊರುಗಳಲ್ಲಿ ನಾಡಹಬ್ಬವೆಂದು ಆಚರಣೆ ಮಾಡಿದರು. ನಾಡಹಬ್ಬವೆಂಬುದು ಇದೊಂದು ಸಾಂಸ್ಕೃತಿಕವಾದ ಮಹತ್ತರ ಘಟ್ಟವಾಗಿದೆ. ಈಗ ದಸರಾ ಬಂದು ನಾಡಹಬ್ಬವೆಂದು ಅನಿಸಿಕೊಂಡಿದೆ. ಈ ಬಗ್ಗೆ ನನಗೆ ಬಹಳ ಉತ್ಸಹವಿದೆ. ಇಲ್ಲಿ ಧಾರ್ಮಿಕ ಆಚರಣೆಗಳಿವೆ. ಹಿಂದಿನ ವೇದಕಾಲದಿಂದಲೂ ಆಚರಣೆಗೆ ಬಂದಿದೆ. ನವರಾತ್ರಿ ಉತ್ಸವ ಆಚರಣೆಯಲ್ಲಿ ದಸರಾ ಸಾಂಸ್ಕೃತಿಕವಾದ ಉತ್ಸವವಾದರೆ , ನವರಾತ್ರಿ ಧಾರ್ಮಿಕ ಉತ್ಸವವಾಗಿದೆ. ದಸರಾ ಜನ ಸಾಮಾನ್ಯರ ಹಬ್ಬವಾಗಿದೆ.
ನವರಾತ್ರಿ ಉತ್ಸವವು ವೇದ-ಹಿರಿಯರ ಕಾಲದಿಂದಲೂ ಬಂದಿದೆ. ನಾಡಹಬ್ಬವನ್ನು ಆಚರಿಸುವಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ನಮ್ಮ ಭಾಷೆ, ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಬೇಕು. ನಮ್ಮ ನಾಡಿನ ವೈಭವ ಕಣ್ತುಂಬಿಕೊಳ್ಳಬೇಕು. ಇಂತಹ ಹಬ್ಬಗಳಲ್ಲಿ ಭಾಗಿಯಾಗುವ ಮೂಲಕ ಸಾಂಸ್ಕೃತಿಕ, ಜನಪದ ಕಲೆ, ಇತರೆ ಗ್ರಾಮೀಣ ಸೊಗಡಿನ ಮಹತ್ವ ಅರಿಯಬೇಕು. ಇಂತಹ ಹಬ್ಬದಲ್ಲಿ ಭಾಗವಹಿಸುವುದು ನಮ್ಮ ನಾಡಿನ ಸ್ವಾಭಿಮಾನ. ಭಾಷೆ, ಜನಪದ, ಸಾಂಸ್ಕೃತಿಕ, ಸಾಹಿತ್ಯಿಕ, ಹಲವಾರು ಕಲೆಗಳ ಅಭಿರುಚಿ ಹೊಂದಿರಬೇಕು. ಹಾಗೇ ನಮ್ಮಲ್ಲಿ ನಾಡಪ್ರೀತಿ ಮೂಡಬೇಕಾದರೆ ಇಂತಹ ಹಬ್ಬಗಳಲ್ಲಿ ಪಾಲ್ಗೊಳ್ಳುವಿಕೆ ಬಹು ಮುಖ್ಯ.
ವಿನಯವಾಣಿಃ ಹೊಸ ತಲೆಮಾರಿನ ಬರಹಗಾರರಿಗೆ ನಿಮ್ಮ ಸಲಹೆ ಏನು..?
ಕವಿ ನಿಸಾರ್ ಅಹಮದ್: ಹೊಸ ತಲೆಮಾರಿನ ಬರಹಗಾರರೆಂದರೆ ಇವತ್ತೇನಾಗಿದೆ ಎಲ್ಲರೂ ಬರೆಯುತ್ತಿರುವುದು ಒಂದು ರೀತಿಯ ಸಾಮಾಜಿಕ ಮತ್ತು ರಾಜಕೀಯ ವಿಷಯ ಇಟ್ಕೊಂಡು ಬರೆಯುತ್ತಿದ್ದಾರೆ. ಒಳ್ಳೆಯದೇ ಆದರೆ ಇದರಿಂದ ಸಾಹಿತ್ಯಿಕ ಅಗಲ ಹೆಚ್ಚುತ್ತದೆ. ಆಳ ಕಡಿಮೆ. ಇನ್‍ಸೈಡ್ ಸ್ಟೋರಿಯಲ್ಲಿ ಯಾವಾಗ ಒಯಕ್ತಿಕವಾಗಿ ಗಾಳಕ್ಕೆ ಸಿಕ್ಕಲ್ಲಿ ಅಂತರಮುಖಿಗಳಾಗಿ ಮೆಚ್ಚಿಸುವ ಬರದಲ್ಲಿ ಬರೆಯುತ್ತಾ ಹೋಗುವುದರಿಂದ ಗೌರವ ಬರುವುದಿಲ್ಲ. ಬಾಹ್ಯ ಸಮಸ್ಯೆಗಳನ್ನು ಇಟ್ಕೊಂಡು ಒಬ್ಬರಿಗೊಬ್ಬರು ಅದನ್ನೆ ಬರೆಯುತ್ತಾ ಹೋಗುವುದು ಸಮಂಜಸವಲ್ಲ. ಒಬ್ಬರಿಂದ ಒಬ್ಬರು ನಕಲು ಮಾಡುತ್ತಾ ಹೋಗುವುದು ಯಾವ ಪರಿಣಾಮವು ಬೀರುವದಿಲ್ಲ. ಅದು ತಾತ್ಕಾಲಿಕ ಸಮಸ್ಯೆ ಆಗು ಹೋಗುಗಳನ್ನು ತೋರ್ಪಡಿಕೆಗಾಗಿ ಬರೆಯುತ್ತಿದ್ದಾರೆನ್ನಿಸುತ್ತದೆ.
ಈಗಿನವರು ಬಹುತೇಕ ಗುಂಪು ಗುಂಪಾಗಿ ಬರೆಯುತ್ತಿದ್ದಾರೆ. ಇದು ಯಾರಿಗೂ ಅನ್ವಯವಾಗಲ್ಲ. ಎಲ್ಲರೂ ಒಂದೇ ಆಶಯವನ್ನು ಇಟ್ಕೊಂಡು ಬರೆಯುತ್ತಿದ್ದಾರೆ. ಸಾರ್ವಕಾಲಿಕವಾಗಿ ನಡೆದಂತ ಸಾವಿರಾರು ವಿಷಯಗಳಿವೆ ನಮ್ಮಲ್ಲಿ. ಅನ್ಯಾಯ, ದ್ವೇಷ ಅಸೂಯೆಗಳಿವೆ. ಅವುಗಳನ್ನು ವಿಷಯವಾಗಿ ಆರಿಸಿಕೊಳ್ಳಬೇಕು. ಎಲ್ಲರಿಗೂ ಅನ್ವಯವಾಗುವಂತ ಕೆಲವು ಮೂಲಭೂತ ಸಮಸ್ಯೆಗಳಿವೆ ಅವುಗಳನ್ನು ಎತ್ತಿ ತೋರಿಸಬೇಕು. ಜನ ಗುಂಪಿನಲ್ಲಿ ಬರೆಯುತ್ತಿದ್ದಾರೆ. ಹೀಗಾಗಿ ಗಟ್ಟಿತನ ಉಳಿಯುವ ಸಾಹಿತ್ಯ ಕಾಣುತ್ತಿಲ್ಲ. ನಾವು ಯಾವುದೇ ವಿಷಯದ ಬಗ್ಗೆ ಸಂಪೂರ್ಣ ಅಂತರ್ಮುಖಿಗಳಾಗಿ ತುಂಬಾ ಯೋಚಿಸಿ ಬರೆಯಬೇಕು.
ಪ್ರಕೃತಿ, ಧರ್ಮ ಇವೆಲ್ಲ ಜೀವನದ ವಸ್ತುಗಳು. ಒಬ್ಬರ ಜೀವನ ಪರಿಪೂರ್ಣವಾಗಬೇಕಾದರೆ, ಸಾಮಾಜಿಕ ಅಥವಾ ರಾಜಕೀಯವಾದ ಬರಿ ಘೋಷಣೆಗಳೇ ಮುಖ್ಯವಾಗಲ್ಲ. ಸಾಮಾಜಿಕವಾದ ಅಸಮಾನತೆ ಬಗ್ಗೆ ಘೋಷಣೆಗಳು ಹಾಕಿದರೆ ಸರಿಹೋಗಲ್ಲ. ಎಲ್ಲರಿಗೂ ಅನ್ವಯವಾಗುವಂತ ಮೂಲಭೂತ ಸಮಸ್ಯೆಗಳಿವೆ ಅವುಗಳ ಬಗ್ಗೆ ಬರೆಯಬೇಕು. ರಾಮಾಯಣ. ಮಹಾಭಾರತ ಇಂದಿಗೂ ಯಾಕೆ ಮಹಾ ಕಾವ್ಯಗಳು ಎಂದೆನಿಸಿವೆ. ಅವು ಮೂಲಭೂತವಾದ ಜೀವನ ರಹಸ್ಯಗಳನ್ನು ತೋರಿವೆ. ರಹಸ್ಯಗಳನ್ನು ನಾವು ಬೇಧಿಸಬೇಕು. ಬಹುತೇಕ ಎಲ್ಲರೂ ಏಕರೂಪವಾಗಿ ಬರೆಯುತ್ತಿದ್ದಾರೆ. ಸಹನೆ ಕಳೆದುಕೊಂಡು ಬರೆಯುತ್ತಿದ್ದಾರೆ. ಒಂದೇ ವಸ್ತುವನ್ನು ತೆಗೆದುಕೊಂಡು ಅದರ ಮೇಲೆಯೇ ಬರೆಯುತ್ತಿದ್ದಾರೆನ್ನಿಸುತ್ತದೆ. ಇದು ಎಲ್ಲಿಗೆ ಒಯ್ಯುತ್ತದೆ ಕೊನೆಗೆ. ಎಲ್ಲರೂ ಒಂದೇ ರೀತಿ ಬರೆಯುತ್ತಾ ಹೋದರೆ ವೈವಿಧ್ಯಮಯವಾಗಿರೋದಿಲ್ಲ. ಇದು ಆಳವನ್ನು ತಪ್ಪಿಸುತ್ತದೆ. ಇದನ್ನು ಅರಿತು ಹೊಸಬರು ಬರೆಯಬೇಕು. ಮೂಲ ಸಾರ್ವಕಾಲಿಕ ಸಮಸ್ಯೆಗಳನ್ನು ಸಾಹಿತ್ಯದ ಮೂಲಕ ಎತ್ತಿ ತೋರಬೇಕಿದೆ.
ವಿನಯವಾಣಿಃ ತಾವೂ ಪ್ರಸ್ತುತ ವರ್ಷ ನಾಡಹಬ್ಬದ ಉದ್ಘಾಟಕರಾದ ಸಂದರ್ಭದಲ್ಲಿಯೇ ನಾಡಿಗೆ ಮಳೆ, ಜೋಗಕ್ಕೆ ಕಳೆ ಬಂದಿದೆಯಲ್ಲ ಸರ್ ಏನಂತೀರಿ..?
ಕವಿ ನಿಸಾರ್ ಅಹಮದ್ : ಹ್ಹಹ್ಹಹ್ಹ.. ಹೌದು ತುಂಬಾ ಖುಷಿಯಾಗಿದೆ. ಈ ಶರತ್ ಋತುವಿನಲ್ಲಿ ನಮ್ಮ ಭಾರತ ನೆಲದಲ್ಲಿ ಮಳೆಯಾಗುತ್ತದೆ. ಈ ಸಂದರ್ಭದಲ್ಲಿ ಮಳೆಯಾಗಿ ಜೋಗ ತುಂಬಿ ಉಕ್ಕುತ್ತಿರುವುದು ಸಂತಸ ತಂದಿದೆ. ಕಳೆದ ನಾಲ್ಕು ವರ್ಷದಿಂದ ಬರಗಾಲ ಬರಗಾಲ ಅಂತಿದ್ರು. ಇವಾಗ ಜೋಗ ತುಂಬಿಕೊಂಡು ಬಂದಿದೆ. ಬರಗಾಲದಿಂದ ಜೋಗದ ಸಿರಿ ನೋಡಲು ಆಗುತ್ತಿರಲಿಲ್ಲ. ಈಗಿನ ಸಂದರ್ಭದಲ್ಲಿ ಜೋಗ ಉಕ್ಕುತ್ತಿರುವುದು ಅತೀವ ಆನಂದ. ಮಳೆಯಾದರೂ ಅತಿ ಮಳೆಯಾಗಿದೆ ಎನ್ನುವರು ಕೆಲವರಿದ್ದಾರೆ. ಅಲ್ಲದೆ ಮಳೆಯಿಂದ ಇಡಿ ನೆಲೆಕ್ಕೆ ಕಳೆ, ಅಚ್ಚ ಹಸಿರು ಬೆಳೆ, ಮರ,ಗಿಡ ಪ್ರಕೃತಿ ಸೊಬಗಿನ ಸವಿ ಕಾಣಬಹುದು. ಈ ಶುಭ ಸಂದರ್ಭ ಸಂತಸ ತಂದಿದೆ.
ವಿನಯವಾಣಿಃಕನ್ನಡ ಭಾಷೆ ಉಳಿಯಲು ಯಾವ ಕ್ರಮ ಅಗತ್ಯ ಎನಿಸುತ್ತದೆ..?
ಕವಿ ನಿಸಾರ್ ಅಹಮದ್: ಕನ್ನಡ ಭಾಷೆ, ಮಾತೃ ಭಾಷೆಗೆ ಪ್ರೀತಿ ಜಾಸ್ತಿ. ಅದನ್ನು ಕಡೆಗಣಿಸುವುದು ತರವಲ್ಲ. ನಾನು ಮೊದಮೊದಲು ಕವಿತೆ ಬರೆಯಲಾರಂಭಿಸಿದಾಗ, ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸಿದಾಗ ಹಲವರು ನನ್ನನ್ನು ತಾತ್ಸರ ಭಾವನೆಯಿಂದ ನೋಡಿದವರಿದ್ದಾರೆ. ಇವರು ಕನ್ನಡ ಭಾಷೆಯಲ್ಲಿ ಸಾಹಿತ್ಯ ಬರೆಯುತ್ತಾರಾ ಅಂತ. ನಾನು ಮಾತ್ರ ಬರೆಯುತ್ತಾ ಬರೆಯುತ್ತಾ ಹೋದೆ. ಕನ್ನಡವನ್ನೆ ಪ್ರೀತಿಸಿದೆ, ಆರಾಧಿಸಿದೆ. ಕನ್ನಡವೇ ನನ್ನ ಉಸಿರಾಯಿತು. ಕನ್ನಡವನ್ನು ಪ್ರೀತಿಯಿಂದ ಕಾಣಬೇಕು. ಕನ್ನಡ ಭಾಷೆಗೆ ಮಮತೆ, ಕನಿಕರ ಜಾಸ್ತಿ ಇದರಿಂದ ನಾನು ಬೆಳೆದೆ. ಕನ್ನಡಕ್ಕೆ ನಮ್ಮ ತನುಮನ ಅರ್ಪಿಸಿದರೆ ಅದು ಬೆಳೆಯುತ್ತದೆ, ನಮ್ಮನ್ನು ಬೆಳೆಸುತ್ತದೆ. ಪ್ರಸ್ತುತ ಕನ್ನಡಾಂಬೆಯ ಆರಾಧಕನಾದ ನಾನು ಇಂದು ನಾಡಹಬ್ಬದ ಉದ್ಘಾಟಿಸುವ ಸಂದರ್ಭ ಬಂದೊದಗಿದೆ. ನೆಲದ ಭಾಷೆ ಬಗ್ಗೆ ಅಭಿಮಾನ, ಸ್ವಾಭಿಮಾನ ಜೊತೆಗೆ ಮುಖ್ಯವಾಗಿ ಕನ್ನಡ ಭಾಷೆ ಬಳಕೆ ಅಗತ್ಯ. ಅದು ಖಂಡಿತ ನಮ್ಮನ್ನ ಬೆಳೆಸುತ್ತದೆ. ತಾನು ಬೆಳೆಯುತ್ತದೆ ಆ ಶಕ್ತಿ ನಮ್ಮ ಕನ್ನಡ ಭಾಷೆಗಿದೆ ಎಂಬುದಕ್ಕೆ ನಾನೇ ಸಾಕ್ಷಿ.
ವಿನಯವಾಣಿ: ಧನ್ಯವಾದಗಳು ಸರ್, ಬಿಡುವಿಲ್ಲದ ಸಮಯದಲ್ಲೂ ವಿನಯವಾಣಿ ಜತೆ ಮಾತನಾಡಿದ್ರಿ.
ಕವಿ ನಿಸಾರ್ ಅಹಮದ್: ಸರಿ ಸರಿ… ಅಂದಹಾಗೇ ನಿಮ್ಮ ವಿನಯವಾಣಿ ಬಳಗಕ್ಕೂ ನಿಮಗೂ ಶುಭವಾಗಲಿ…
ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್.
Thank u sir