ಪ್ರಮುಖ ಸುದ್ದಿ
ಕಳ್ಳರು 5 ಕಿರಾಣಿ ಅಂಗಡಿ ಕದ್ದರು, ಪೊಲೀಸರು ಬೆಳಿಗ್ಗೆ ಎದ್ದರು?
ಯಾದಗಿರಿ : ನಗರದ ಗಂಜ್ ಪ್ರದೇಶದಲ್ಲಿ ಕಳೆದ ರಾತ್ರಿ ಸರಣಿ ಕಳ್ಳತನ ನಡೆದಿದೆ. ಒಂದಲ್ಲ, ಎರಡಲ್ಲ ಐದು ಕಿರಾಣಿ ಅಂಗಡಿಗಳ ಕಳ್ಳತನ ನಡೆದಿದೆ. ಅಂಗಡಿಗಳ ಶಟರ್ ಬೀಗ ಮುರಿದು ಕಳ್ಳರು ಕೈಚಳಕ ತೋರಿದ್ದಾರೆ. ಅಂಗಡಿಗಳಲ್ಲಿನ ನಗದು ಹಾಗೂ ಕೆಲವೆಡೆ ದಿನಸಿ ವಸ್ತುಗಳನ್ನು ಕದ್ದು ಪರಾರಿ ಆಗಿದ್ದಾರೆ. ಸಿದ್ದಯ್ಯ ಶೆಟ್ಟಿ, ಗೋಪಾಲ್, ಮಲ್ಲಯ್ಯ ಶೆಟ್ಟಿ, ಫರೀದ್ ಹಾಗೂ ವೆಂಕಟೇಶ ಎಂಬವರಿಗೆ ಸೇರಿದ ಅಂಗಡಿಗಳ ಕಳ್ಳತನ ನಡೆದಿದೆ ಎಂದು ತಿಳಿದು ಬಂದಿದೆ.
ಐದು ಕಿರಾಣಿ ಅಂಗಡಿಗಳ ಕಳ್ಳತನ ನಡೆದರೂ ಸಹ ಯಾರೊಬ್ಬರಿಗೂ ಸುಳಿವು ಸಿಕ್ಕಿಲ್ಲ. ರಾತ್ರಿ ಕಳೆದು ಬೆಳಗಾದ ಬಳಿಕವೇ ಕಳ್ಳತನದ ಕೃತ್ಯ ಬಯಲಾಗಿದೆ. ನಗರಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೀಗಾಗಿ, ರಾತ್ರಿ ವೇಳೆ ಪೊಲೀಸರ ಗಸ್ತು ಹೆಚ್ಚಿಸುವ ಮೂಲಕ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಸರಣಿ ಕಳ್ಳತನ ಮಾಡಿದ ಕಳ್ಳರನ್ನು ಶೀಘ್ರಗತಿಯಲ್ಲಿ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.