ಕಲಬುರಗಿ: ಮಠದ ಅಂಗಳದಲ್ಲಿ ನಾಗಿಣಿ ನೃತ್ಯ!
ನಾಗಿಣಿ ನೃತ್ಯದ ಬಗ್ಗೆ ಸ್ವಾಮೀಜಿ
ಹೇಳಿದ್ದೇನು ಗೊತ್ತಾ?
ಬಹುಕಾಲದಿಂದಲೂ ದೇವರು ಹಾವಿನ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ ಎಂಬ ನಂಬಿಕೆಯಿದ. ಅಂತೆಯೇ ಸಂಪ್ರದಾಯವಾದಿಗಳು ನಾಗದೇವನನ್ನು ಭಕ್ತಿಯಿಂದ ಪೂಜಿಸುತ್ತಾರೆ. ನಾಗರಪಂಚಮಿ ಹೆಸರಿನಲ್ಲಿ ವಿಶಿಷ್ಟ ಆಚರಣೆಗಳ ಹಬ್ಬವನ್ನೇ ಆಚರಿಸಲಾಗುತ್ತದೆ. ಆದ್ರೆ, ಮತ್ತೊಂದು ಕಡೆ ಬಸವಾದಿ ಶರಣರು ಕಲ್ಲ ನಾಗರಕ್ಕೆ ಹಾಲನೆರವರಯ್ಯ ನಿಜನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯ ಎಂದು ಹೇಳುವ ಮೂಲಕ ಹಾವನ್ನು ದೇವರೆನ್ನುವವದರ ಬಗ್ಗೆ ವಿಡಂಬನೆ ಮಾಡಿದ್ದಾರೆ.
ಆದರೆ, ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಿಗ್ಗಾಂವ್ ಗ್ರಾಮದ ಪಂಚಗೃಹ ಹಿರೇಮಠದಲ್ಲಿಂದು ನಾಗರಹಾವೊಂದು ಪ್ರತ್ಯಕ್ಷವಾಗಿ ಭಕ್ತರಲ್ಲಿ ದಿಗಿಲು ಮೂಡಿಸಿದೆ.
ಮೂರು ದಿನಗಳ ಹಿಂದೆ ಮಠದ ಆವರಣ ಪ್ರವೇಶಿಸಿದ ನಾಗರಹಾವು ಮಠದಲ್ಲಿ ಗಂಟೆ ಬಾರಿಸುವ ವೇಳೆ ಹೆಡೆ ಬಿಚ್ಚಿ ಆಡಿದೆ. ಬಳಿಕ ಮಠದೊಳಗಿನ ಕೋಣೆಗೆ ಸರಸರನೆ ಹೋಗಿ ಹೆಡೆ ಬಿಚ್ಚಿ ಆಡತೊಡಗಿದೆ. ಮಠದೊಳಗೆ ನಾಗಿಣಿ ನೃತ್ಯವಾಡುತ್ತಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿದೆ. ಬೆಳಗ್ಗೆ ಬಂದಿದ್ದ ಹಾವು ಸುಮಾರು ಐದು ತಾಸುಗಳ ಕಾಲ ಮಠದಲ್ಲೇ ಇದ್ದು ಮಠಕ್ಕೆ ಬಂದ ಭಕ್ತರೆಲ್ಲರಿಗೂ ದರ್ಶನ ನೀಡಿದೆ.
ಅಲ್ಲದೆ ಮಠದಲ್ಲಿದ್ದಷ್ಟು ಕಾಲ ಹೆಡೆ ಬಿಚ್ಚಿ ತಲೆದೂಗುತ
ಆಡುವುದರಲ್ಲಿ ತಲ್ಲೀನವಾಗಿದೆ. ಆದರೆ, ಯಾರೊಬ್ಬರಿಗೂ ಭುಸ್ ಅಂದಿಲ್ಲ, ತೊಂದರೆ ನೀಡಿಲ್ಲ. ಸಂಜೆ ಹೊತ್ತಿಗೆ ತಾನಾಗಿಯೇ ಮಠದಿಂದ ಮಾಯವಾಗಿ ಹೋಗಿದೆ ಅಂತ ಭಕ್ತ ಸಮೂಹ ತಿಳಿಸಿದೆ. ಅಂತೆಯೇ ನಾಗರಹಾವು ಮಠದಲ್ಲಿ ನಾಗಿಣಿ ನೃತ್ಯ ಮಾಡಿದ್ದನ್ನು ಕೆಲವರು ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಹಾವಿನ ವಿಡಿಯೋ ಈಗ ವೈರಲ್ ಆಗಿದೆ.
ಮಠದ ಪೀಠಾಧಿಪತಿಯಾದ ಸಿದ್ಧವೀರ ಶಿವಾಚಾರ್ಯ ಸ್ವಾಮೀಜಿಗೆ ಈ ಬಗ್ಗೆ ಕೇಳಿದಾಗ ಮಠದ ಶಕ್ತಿಯಿಂದಾಗಿ ಆದಿಶೇಷ ಬಂದು ಹೋಗಿದ್ದಾನೆ. ಇದರಿಂದ ಜನರಿಗೆ ಒಳಿತಾಗಲಿ ಎಂದು ಹೇಳಿದ್ದಾರೆ.
ಮಠಕ್ಕೆ ನಾಗರಹಾವು ಬಂದು ಹೋಗಿದ್ದು ಈಗ ಜಿಲ್ಲೆಯ ಎಲ್ಲೆಡೆ ಸುದ್ದಿ ಹಬ್ಬಿದ್ದು ಮಠಕ್ಕೆ ಭೇಟಿ ಕೊಡುವವರ ಸಂಖ್ಯೆ ಹೆಚ್ಚಿದೆ. ಭಕ್ತರಿಗೆ ಒಳಿತು ಮಾಡುವ ಕಾರಣಕ್ಕೆ ದೇವರು ನಾಗರಹಾವಿನ ರೂಪದಲ್ಲಿ ಬಂದು ಹೋಗಿದ್ದಾನೆಂದು ನಂಬಿರುವ ಜನ ಈಗ ನಾಗರಹಾವು ಬಂದು ಹೋದ ಜಾಗಕ್ಕೆಲ್ಲಾ ನಮಸ್ಕರಿಸಿ ಪುನೀತ ಭಾವ ಅನುಭವಿಸುತ್ತಿದ್ದಾರೆ.