ಇನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ & ಶೇರ್ ಮಾಡುವಾಗ ಹುಷಾರ್!
ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಬರಹಗಳನ್ನು ಪೋಸ್ಟ್ ಮಾಡುತ್ತಾರೆ. ಇನ್ನೂ ಕೆಲವರು ಅಂಥ ಪೋಸ್ಟ್ ಗಳನ್ನು ಶೇರ್ ಮಾಡ್ತಾರೆ. ಆದರೆ, ಇನ್ನು ಮುಂದೆ ಪ್ರಚೋದನಕಾರಿ ಪೋಸ್ಟ್ ಮತ್ತು ಶೇರ್ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಮುಲಾಜಿಲ್ಲದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಲು ಸಜ್ಜಾಗಿದೆ.
ಈಗಾಗಲೇ ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ಸೋಷಿಯಲ್ ಮೀಡಿಯಾ ಮೂಲಕ ಪ್ರಚೋದನಕಾರಿ ಬರಹಗಳನ್ನು ಪೋಸ್ಟ್ ಮಾಡಿದವರ ವಿರುದ್ಧ ಒಟ್ಟು 106 ಕ್ರಿಮಿನಲ್ ಕೇಸ್ ಗಳನ್ನು ದಾಖಲಿಸಲಾಗಿದೆ. ಆ ಮೂಲಕ ಪರೇಶ್ ಮೆಸ್ತಾ ಸಾವಿನ ಕುರಿತು ಪ್ರಚೋದನಾತ್ಮಕ ಸುದ್ದಿ ಹಬ್ಬಿಸಿ ಗಲಭೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಲಾಗಿದೆ. ಐಪಿಸಿ ಸೆಕ್ಷನ್ 153, 153(ಎ) , 505, 295(ಎ), 504 ಮತ್ತು 506 ಹಾಗೂ 2018ರ ಮಾಹಿತಿ ಮತ್ತು ತಂತ್ರಗ್ನಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ವಾಟ್ಸಪ್ ಮತ್ತು ಫೇಸ್ ಬುಕ್ ನಂಥ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚೋದನಕಾರಿ ಸಂದೇಶ ರವಾನಿಸುವವರು ಎಚ್ಚರವಾಗಿರಬೇಕಿದೆ. ಇಲ್ಲವೇ ಕಾನೂನು ಕ್ರಮ ಎದುರಿಸಲು ಸಿದ್ದರಾಗಬೇಕಿದೆ ಎಂಬುದಾಗಿ ಈ ಮೂಲಕ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.