ನೂತನ ಸ್ಪೀಕರ್ : ವಿಶ್ವೇಶ್ವರ ಹೆಗಡೆ ಕಾಗೇರಿ ನಡೆದು ಬಂದ ಹಾದಿ
ಬೆಂಗಳೂರು : ರಮೇಶ್ ಕುಮಾರ್ ರಾಜೀನಾಮೆಯಿಂದ ತೆರವಾಗಿದ್ದ ಲೋಕಸಭಾದ್ಯಕ್ಷರ ಸ್ಥಾನಕ್ಕೆ ಹಿರಿಯ ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಂದ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಇಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸ್ಪೀಕರ್ ಆಗಿ ಘೋಷಿಸುವುದೊಂದೆ ಬಾಕಿಯಿದೆ.
ಕಾಗೇರಿ ಹಿನ್ನೆಲೆ
ಶಿರಸಿ ಕ್ಷೇತ್ರದ ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಜುಲೈ 10, 1961ರಂದು ಜನಿಸಿದ್ದು ಬರೂರಿನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದಿದ್ದಾರೆ. ಧಾರವಾಡದಲ್ಲಿ ವಾಣಿಜ್ಯ ಪದವಿ, ಶಿರಸಿಯಲ್ಲಿ ಕಾನೂನು ಪದವಿ ಪಡೆದಿದ್ದಾರೆ. ಎಬಿವಿಪಿ ಕಾರ್ಯಕರ್ತರಾಗಿದ್ದ ಕಾಗೇರಿ 1981ರಲ್ಲಿ ಅಸ್ಸಾಂ ಉಳಿಸಿ ಚಳುವಳಿ, ಅಘನಾಶಿನಿ ಆಂದೋಲನದಲ್ಲಿ ಪಾಲ್ಗೊಂಡಿದ್ದರು. 1990ರಲ್ಲಿ ಬಿಜೆಪಿ ಮೂಲಕ ರಾಜಕಾರಣ ಪ್ರವೇಶಿಸಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದರು.
1994ರಲ್ಲಿ ಅಂಕೋಲಾ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿ ಸತತ 3 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2008ರಿಂದ ಈವರೆಗೆ ಶಿರಸಿ ಕ್ಷೇತ್ರದಿಂದ 3ಸಲ ಶಾಸಕರಾಗಿ ಆಯ್ಕೆ ಆಗಿದ್ದಾರೆ. 2008ರಲ್ಲಿ ಬಿಜೆಪಿ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಆರು ಬಾರಿ ಶಾಸಕರಾಗಿರುವ ಕಾಗೇರಿ ಅನುಭವಿ ರಾಜಕಾರಣಿ, ಉತ್ತಮ ವಾಗ್ಮಿ ಆಗಿದ್ದಾರೆ.