ಶಿಲೆಯಲಿ ಸ್ವರ ನುಡಿಸಿದ ನಾಡಲಿ ಫೋನಲಿ ಪಕ್ಷಿಚಿತ್ರ ಸೆರೆ ಹಿಡಿವ ಯುವ ಪ್ರತಿಭೆ!
-ವಿನಯ ಮುದನೂರ್
ಶಿಲೆಗಳು ಸಂಗೀತವ ಹಾಡಿವೆ…. ಈ ಹಾಡು ನೆನೆದರೆ ಸಾಕು ಹಂಪಿಯ ಚಿತ್ರಣವೇ ಕಣ್ಣೆದುರು ಸರಿದಾಡುತ್ತದೆ. ಸ್ಮೃತಿ ಪಟಲದಲಿ ಇತಿಹಾಸದ ಪುಟಗಳು ಆಕಾಶದಲ್ಲಿ ತೇಲುವ ಗಾಳಿಪಟ ದಾರದ ಹುಂಡಿಯನ್ನು ಬಿಚ್ಚಿಕೊಂಡಂತೆ ಬಿಚ್ಚಿಕೊಳ್ಳುತ್ತವೆ. ಅಂಥ ಅಪರೂಪದ ಹಂಪಿಯಲ್ಲಿ ಇತಿಹಾಸ ಸಾರುವ ಸ್ಮಾರಕಗಳು ಮಾತ್ರವಲ್ಲದೆ ಜೀವ ವೈವಿಧ್ಯದ ತಾಣವೂ ಹೌದು. ಸ್ಥಳೀಯರಷ್ಟೇ ಪ್ರಮಾಣದ ವಿದೇಶಿಯರೂ ಹಂಪಿಗೆ ಭೇಟಿ ನೀಡಿದಂತೆ ಸ್ಥಳೀಯ ಪಕ್ಷಿಗಳಷ್ಟೇ ಅಲ್ಲದೆ ವಿದೇಶಿ ಪಕ್ಷಿಗಳು ಸಹ ವಿವಿಧ ಕಾಲಮಾನಗಳಲ್ಲಿ ಹಂಪಿ ಪರಿಸರದಲ್ಲಿ ಆಶ್ರಯ ಪಡೆಯುತ್ತವೆ.
ಹಂಪಿಯ ಸ್ಮಾರಕಗಳು, ಪರಿಸರದ ಬಗ್ಗೆ ಈಗಾಗಲೇ ಅನೇಕರು ಫೋಟೋಗ್ರಫಿಯನ್ನು ಮಾಡಿದ್ದಾರೆ. ಇತಿಹಾಸ, ಸಮಕಾಲೀನಿ ಸ್ಥಿತಿಯ ಬಗ್ಗೆ ಅನೇಕ ಕೃತಿಗಳೂ ಹೊರಬಂದಿವೆ. ಅನೇಕರು ಹಂಪಿಯಿಂದಲೇ ಖ್ಯಾತಿಯ ಉತ್ತುಂಗಕ್ಕೇರಿದ್ದಾರೆ. ಆದರೆ, ಓರ್ವ ಯುವಕ ಮಾತ್ರ ಪರಿಸರ ಪ್ರೇಮಿಯಾಗಿ ಎಲೆ ಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿದ್ದಾನೆ. ಆತನ ಹೆಸರು ಶಬರೀಶ್ ರವಿ. ಕಮಲಾಪುರದ ಮೂಲದ ಶಬರೀಶ ರವಿ ಓದುತ್ತಿರುವುದು ಡಿಪ್ಲೋಮಾ ಎಲೆಕ್ಟ್ರಿಕಲ್. ತನ್ನ ವಿದ್ಯಭ್ಯಾಸದ ಜೊತೆಗೆ ಪರಿಸರ ಪ್ರೀತಿಯನ್ನೂ ಮೈಗೂಡಿಸಿಕೊಂಡಿರುವ ಶಬರೀಶ್ ರವಿ ತನ್ನದೇ ಕಾರ್ಯಶೈಲಿಯ ಮೂಲಕ ವಿಭಿನ್ನ ಹೆಜ್ಜೆ ಇಟ್ಟಿದ್ದಾನೆ. ಕೇವಲ ಮೊಬೈಲ್ ನಿಂದ ನೂರಾರು ಬಗೆಯ ಪಕ್ಷಿಗಳ ಸುಂದರ ಚಿತ್ರಗಳನ್ನು ತೆಗೆದು, ಅವುಗಳ ಬಗ್ಗೆ ಅಧ್ಯಯನ ಮಾಡುವ ಮೂಲಕ ಹೆಸರಾಂತ ಛಾಯಾಗ್ರಾಹಕರಲ್ಲಿ ಬೆರಗು ಮೂಡಿಸಿದ್ದಾನೆ.
ಅಂದಹಾಗೇ ಶಬರೀಶ್ ರವಿ ಬಳಿ ಯಾವುದೇ ಡಿಎಸ್ ಎಲ್ ಆರ್ ಕ್ಯಾಮರಾ ಇಲ್ಲವೇ ಇಲ್ಲ. ಇರುವುದು ಕೇವಲ ಸಾಧಾರಣ ಸ್ಮಾರ್ಟ್ ಫೋನ್ ಮಾತ್ರ. ಆದರೆ, ಬೈನಾಕುಲರ್ ಬಳಸಿ ಪಕ್ಷಿಗಳನ್ನು ವೀಕ್ಷಿಸಿ ಅದರ ಲೆನ್ಸ್ ಗೆ ಮೊಬೈಲ್ ಕ್ಯಾಮರಾ ಹೊಂದಿಸಿ ದೂರದ ಪಕ್ಷಿಗಳ ಆಕ್ಷನ್ ಚಿತ್ರಗಳನ್ನು ಸೆರೆಹಿಡಿಯುವ ಚಾಕಚಕ್ಯತೆಯನ್ನು ಶಬರೀಶ್ ಕರಗತ ಮಾಡಿಕೊಂಡಿದ್ದಾನೆ. ನೂರಾರು ಪಕ್ಷಿಗಳ ಚಿತ್ರಗಳನ್ನು ಸೆರೆ ಹಿಡಿದಿದ್ದಷ್ಟೇ ಅಲ್ಲದೆ ಅವುಗಳ ಸೂಕ್ಷ್ಮತೆ, ಕಾಲಮಾನ, ಜೀವನ ಕ್ರಮದ ಬಗ್ಗೆಯೂ ಸಾಕಷ್ಟು ಅಧ್ಯಯನ ಮಾಡಿದ್ದಾನೆ. ಪಕ್ಷಿಗಳು ಮೊಟ್ಟೆ ಹಾಕುವುದು, ಮರಿಗಳನ್ನು ಮಾಡುವುದು ಮತ್ತು ರಕ್ಷಣೆ ಹೀಗೆ ಎಲ್ಲವನ್ನೂ ತಿಳಿದುಕೊಂಡಿದ್ದಾನೆ.
ಖ್ಯಾತ ಛಾಯಾಗ್ರಾಹಕರಾದ ಪಂಪಯ್ಯಸ್ವಾಮಿ ಮಳೇಮಠ ಹಾಗೂ ಇತರರ ಛಾಯಾಚಿತ್ರಗಳಿಗೆ ಮನಸೋತ ಶಬರೀಶ್ ರವಿ ಕಳೆದ ಒಂದು ವರ್ಷದಿಂದ ಪಕ್ಷಿಗಳ ಹುಚ್ಚು ಹಚ್ಚಿಕೊಂಡಿದ್ದಾರೆ. ಪರಿಸರ, ಪಕ್ಷಿಗಳ ಹಿಂದೆ ಬಿದ್ದು ಹಂಪಿಯ ಪರಿಸರಕ್ಕೆ ಚಿರಪರಿಚಿತನಾಗಿದ್ದಾನೆ. ಇಂಡಿಯನ್ ಪಿಟ್ಟಾ, ಮರ ಕುಟಿಗೆ, ಕಳ್ಳಿಪೀರಾ ಸೇರಿದಂತೆ ನಾನಾ ಬಗೆಯ ವಿದೇಶಿ ಹಕ್ಕಿಗಳು ಹಾಗೂ ದರೋಜಿ ಕರಡಿ ಧಾಮಾದಲ್ಲಿನ ಕರಡಿಗಳ ಅಪರೂಪದ ಚಿತ್ರಗಳು ಶಬರೀಶನ ಕ್ಯಾಮಾರಾದಲ್ಲಿ ಸೆರೆಯಾಗಿವೆ. ಫೇಸ್ ಬುಕ್ ಪೇಜ್ ನಲ್ಲಿ ಶಬರೀಶ್ ರವಿ ಕ್ಲಿಕ್ಕಿಸಿದ ಸುಂದರ ಚಿತ್ರಗಳಿಗೆ ಅನೇಕ ಚಿತ್ರಪ್ರೇಮಿಗಳು ಫಿದಾ ಆಗಿದ್ದಾರೆ.
ಹಂಪಿಯ ಪರಿಸರ ವೀಕ್ಷಿಸಲು ತೆರಳುವ ಅನೇಕರು ಶಬರೀಶ್ ರವಿಯನ್ನು ಭೇಟಿ ಆಗಲು ಇಚ್ಛಿಸುತ್ತಾರೆ. ಯಾವ ಸ್ಥಳದಲ್ಲಿ ಯಾವೆಲ್ಲಾ ಪಕ್ಷಿಗಳು ಕಾಣ ಸಿಗುತ್ತವೆ. ಸಾಕಷ್ಟು ಸಲ ಹಂಪಿ ವೀಕ್ಷಿಸಿದ ಬಳಿಕವೂ ನೋಡದೇ ಉಳಿದಿರುವ ತಾಣಗಳ ಬಗ್ಗೆ ತಿಳಿಯುತ್ತಾರೆ. ಸ್ನೇಹಜೀವಿ ಶಬರೀಶ್ ರವಿ ಎಲ್ಲರೊಂದಿಗೂ ಬೆರೆಯುತ್ತಾನೆ. ಹೆಮ್ಮೆಯೊಂದಿಗೆ ತನ್ನೂರಿನ ಬಗ್ಗೆ ತನಗೆ ತಿಳಿದ ಎಲ್ಲಾ ಮಾಹಿತಿಯನ್ನೂ ಬಿಂಕವಿಲ್ಲದೆ ಹಂಚಿಕೊಳ್ಳುತ್ತಾನೆ. ಯುವ ಸಮೂಹ ಬರೀ ಫೇಸ್ ಬುಕ್ , ವಾಟ್ಸಪ್ , ಚಾಟಿಂಗ್ ಅದೂ ಇದೂ ಅಂತ ಸಮಯ ವ್ಯರ್ಥ ಮಾಡುತ್ತಿರುವ ಕಾಲಘಟ್ಟದಲ್ಲಿ ಈ ಹುಡುಗ ಪರಿಸರ ಪ್ರೇಮ ಬೆಳಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಇಂಥ ಯುವಕರೇ ಇಂದಿನ ಕಾಲದ ಯುವಕರಿಗೆ ಯೂತ್ ಐಕಾನ್ ಆಗಬೇಕಲ್ಲವೇ.? ನೀವೂ ಸಹ ಹಂಪಿಗೆ ಹೋದರೆ ಹಳೆಯ ಹಂಪಿ ವೀಕ್ಷಿಸುವುದರ ಜೊತೆಗೆ ಈ ಹೊಸ ಹುಡುಗನನ್ನೂ ಒಮ್ಮೆ ಭೇಟಿಯಾಗಿ ಬೆನ್ನುತಟ್ಟಿ ಬರ್ತೀರಾ ಅಲ್ವಾ?
ಚಿತ್ರಗಳು : ಶಬರೀಶ್ ರವಿ