ಹೋರಾಟಗಾರ ಎಸ್.ಆರ್.ಹಿರೇಮಠ ರಾಜಕೀಯಕ್ಕೆ ಎಂಟ್ರಿ..!
ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ರಾಜಕೀಯಕ್ಕೆ ಎಂಟ್ರಿ..!
ಧಾರವಾಡಃ ಜನ ಸಂಗ್ರಾಮ ಪರಿಷತ್‍ನ ಮಹಾಮೈತ್ರಿಯೊಂದಿಗೆ ನಾವು ಚುನಾವಣೆ ಅಖಾಡಕ್ಕೆ ಇಳಿಯಲಿದ್ದೇವೆ. ಮಹಾಮೈತ್ರಿ ಮೂಲಕ ರಾಜಕೀಯಕ್ಕೆ ಬರುವುದು ಶತಸಿದ್ಧ ಎಂದು ಹೋರಾಟಗಾರ ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ಹೇಳಿದರು.
ನಗರದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ನಾನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಅಲ್ಲದೆ ಈಗಾಗಲೇ 2018ರ ರಾಜ್ಯ ವಿಧಾನಸಭೆ ಚುನಾವಣೆಗೆ ಮಹಾಮೈತ್ರಿ ಅಡಿಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ನಮ್ಮೊಂದಿಗೆ ಆಮ್ ಆದ್ಮಿ ಪಾರ್ಟಿ, ಸ್ವರಾಜ್ ಇಂಡಿಯಾ, ಕರ್ನಾಟಕ ಶಕ್ತಿ ಸಂಘಟನೆ ಸೇರಿದಂತೆ ಸಿಪಿಐ ಹಾಗೂ ಸಿಪಿಐಎಂ ಪಕ್ಷಗಳು ಒಂದಾಗಿ ಬರಲು ನಿರ್ಧರಿಸಿವೆ. ಈ ಕುರಿತು ಸಮಾಲೋಚನೆ ನಡೆಸಿದ್ದು, ಕೂಡಲೇ ಚುನಾವಣೆಗೆ ಜನ ಸಂಗ್ರಾಮ ಪರಿಷತ್ ಮಹಾಮೈತ್ರಿ ಕಾಯೋನ್ಮುಖವಾಗಲಿದೆ. ರಾಜ್ಯದಲ್ಲಿ ಹೊಸ ಮನ್ವಂತರ ಶುರು ಮಾಡಲಿದ್ದು ಅಭಿವೃದ್ಧಿಯ ಸಂಚಲನ ಮೂಡಿಸಲಿದ್ದೇವೆ. ರಾಜ್ಯದಲ್ಲಿ ನೂತನ ಸಂಗ್ರಾಮವೇ ನಡೆಯಲಿದೆ ಎಂದು ತಿಳಿಸಿದರು.
ಹಿರೇಮಠ ಅವರು ದೇಶವೇ ಬೆಚ್ಚಿ ಬೀಳುವಂತ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದವರು. ನ್ಯಾಯಾಂಗದ ಮೂಲಕ ಬಿಸಿ ಭ್ರಷ್ಟರಿಗೆ ಮುಟ್ಟಿಸಿದವರು. ಹಲವಾರು ರಾಜಕಾರಣಿಗಳ ಭ್ರಷ್ಟಾಚಾರವನ್ನು ಬಯಲಿಗೆಳೆದು ಹೆಸರು ವಾಸಿಯಾದ ಸಾಮಾಜಿಕ ಕಾರ್ಯಕರ್ತರು. ಸಮಾಜ ಪರಿವರ್ತನೆ ಸಂಘಟನೆಯ ಪ್ರಮುಖರಾದ ಎಸ್.ಆರ್.ಹಿರೇಮಠ ಈ ಬಾರಿ ರಾಜಕೀಯಕ್ಕೆ ಎಂಟ್ರಿ ಕೊಡುವ ವಿಚಾರ ವ್ಯಕ್ತಪಡಿಸಿದ್ದಾರೆ. ಮುಂಬರುವ ಚುನಾವಣೆಗೆ ಹೊಸ ರಂಗು ಮೂಡಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.