ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 3990 ವಿದ್ಯಾರ್ಥಿ ಹಾಜರು, 140 ಗೈರು
ಕೊಠಡಿ ಪ್ರವೇಶಕ್ಕೂ ಮುನ್ನಾ ತಪಾಸಣೆ, ಮಾಸ್ಕ್ ವಿತರಣೆ
ಶಹಾಪುರಃ ಕೊರೊನಾ ವೈರಸ್ ಭಯದ ಕರಿ ನೆರಳಿನಲ್ಲಿಯೇ ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಮೊದಲ ಪೇಪರ್ ಕನ್ನಡವನ್ನು ವಿದ್ಯಾರ್ಥಿಗಳು ಬಿಡಿಸಿದರು.
ಕೊಠಡಿ ಪ್ರವೇಶಕ್ಕೂ ಮುನ್ನಾ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾಗಿ ಸ್ಕ್ರೀನಿಂಗ್ ಮಾಡಲಾಯಿತು. ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದ್ದು ಎಲ್ಲಾ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸುತ್ತಿರುವದು ಕಂಡು ಬಂದಿತು.
ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದ ಶಿಕ್ಷಣ ಇಲಾಖೆ ಪಾಲಕರ ಮೆಚ್ಚುಗೆಗೆ ಪಾತ್ರವಾಯಿತು. ಒಟ್ಟು 4131 ವಿದ್ಯಾರ್ಥಿಗಳಲ್ಲಿ 3991 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 140 ಜನ ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಬಿಇಓ ರುದ್ರಗೌಡ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ. ತಾಲೂಕಿನಲ್ಲಿ 16 ಪರೀಕ್ಷಾ ಕೇಂದ್ರಗಳು ಸ್ಥಾಪಿಸಲಾಗಿತ್ತು. ಎಲ್ಲಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಸೇರಿದಂತೆ ಸಮರ್ಪಕ ವ್ಯವಸ್ಥೆ ಮಾಡಲಾಗಿತ್ತು. ನೆಗಡಿ, ಕೆಮ್ಮು ಜ್ವರ ಬಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೋಣೆಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು ಎಂದು ಅವರು ವಿವರಿಸಿದರು.
ಕಂಟೋನ್ಮೆಂಟ್ ಜೋನ್ ನಲ್ಲಿರುವ 194 ವಿದ್ಯಾರ್ಥಿಗಳಲ್ಲಿ 113 ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 81 ಜನ ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಭೀಮರಾಯನ ಗುಡಿ ಪಪೂ ಕಾಲೇಜಿನಲ್ಲಿ ನಡೆದ ಪರೀಕ್ಷೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಾಲಲಿ ಮಾರ್ಕ್ ಮಾಡಿದ ಬಿಳಿ ಡೇರೆಯಡಿ ನಿಂತು ತಪಾಸಣೆ ಮಾಡಿಕೊಂಡು ಪರೀಕ್ಷಾ ಕೊಠಡಿಗೆ ತೆರಳುವ ವ್ಯವಸ್ಥೆ ಮಾಡಲಾಗಿತ್ತು. ಇದರಂತೆ ಎಲ್ಲಾ ಕೇಂದ್ರಗಳಲ್ಲಿ ಸುವ್ಯವಸ್ಥೆ ಮಾಡಿರುವದು ಕಂಡು ಬಂದಿತು. ಪ್ರತಿ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದರು. ಅಲ್ಲದೆ ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಸಹ ಮಾಡಲಾಗಿತ್ತು.