ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯ- ಪಾಟೀಲ್
ಮೌಲ್ಯ ಶಿಕ್ಷಣ ಪ್ರೇರಣಾ ಕಮ್ಮಟ ಸಮಾರೋಪ ಸಮಾರಂಭ
ಯಾದಗಿರಿ,ಶಹಾಪುರಃ ದೇಶದ ಭವಿಷ್ಯ ನಿರ್ಧರಿಸುವಂಥ ಶೈಕ್ಷಣಿಕ ಕ್ಷೇತ್ರದ ಪ್ರಗತಿಯಲ್ಲಿ ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರ ಪಾತ್ರ ಬಹು ಮಹತ್ವ ಪೂರ್ಣವಾದದ್ದು ಎಂದು ಯಾದಗಿರಿ ಜಿ.ಪಂ. ಅಧ್ಯಕ್ಷ ರಾಜಶೇಖರಗೌಡ ಪಾಟೀಲ ಹೇಳಿದರು.
ನಗರದ ಶ್ರೀಸಾಯಿ ವಿದ್ಯಾನಿಕೇತನ ವಸತಿ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಬೀದರ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಶಹಾಪುರ ಹಾಗೂ ದಿ.ಬಾಪೂಗೌಡ ದರ್ಶನಾಪೂರ ಎಜ್ಯುಕೇಶನ್ ಟ್ರಸ್ಟ್ ಸಂಯುಕ್ತಾಶ್ರಯದಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ಶಿಕ್ಷಕರಿಂದ ಬೋಧನಾ ಶಿಬಿರ ಹಾಗೂ ಮೌಲ್ಯ ಶಿಕ್ಷಣ ಪ್ರೇರಣಾ ಕಮ್ಮಟದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕಾಗಿ ಪ್ರತಿಷ್ಠಾನ ನಡೆಸಿದ ಒಂದು ವಾರದ ಶಿಬಿರ ಯಶಸ್ವಿಯಾಗಿ ನಡೆದಿದ್ದು, ಮಕ್ಕಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದರು. ಇಂತಹ ಶಿಕ್ಷಣ ಪ್ರಗತಿಗೆ ಪೂರಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುಬೇಕು ಎಂದರು.
ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಮಾತನಾಡಿ, ಶಿಕ್ಷಕರು ಪರಿಶ್ರಮದಿಂದ ಕಾರ್ಯನಿರ್ವಹಿಸಿದರೆ ವಿದ್ಯಾರ್ಥಿಗಳ ಜೀವನದಲ್ಲಿ ಯಶಸ್ಸು ನಿಶ್ಚಿತ ಎಂದು ಅಭಿಪ್ರಾಯಪಟ್ಟರು. ಕಠಿಣ ಪರಿಶ್ರಮ, ಸಮಯ ಪ್ರಜ್ಞೆ ಹಾಗೂ ನಿರಂತರ ಅಭ್ಯಾಸದಿಂದ ವಿದ್ಯಾರ್ಥಿಗಳು ನಿಶ್ಚಿತವಾಗಿ ಗುರಿ ತಲುಪಲು ಸಾಧ್ಯ. ಕಲಿಕೆಗೆ ಪೂರಕವಾದ ಶಾಲಾ ವಾತಾವರಣ ಹಾಗೂ ಪಾಲಕರು ಸಹ ವಿದ್ಯಾರ್ಥಿಗಳ ಪ್ರಗತಿಗೆ ಕಾರ್ಯ ಪ್ರವೃತ್ತರಾಗುವಂತೆ ಕರೆ ನೀಡಿದರು.
ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ಪ್ರಸನ್ನಕುಮಾರ ಮಾತನಾಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ತಮ್ಮ ಸಮಯದ ಸದುಪಯೋಗ ಪಡೆದುಕೊಂಡು ಶಿಕ್ಷಕರ ಮಾರ್ಗದರ್ಶನದಂತೆ ಮುನ್ನಡೆದರೆ ಫಲಿತಾಂಶದಲ್ಲಿ ನಿರೀಕ್ಷಿಸಿದಂತೆ ಪ್ರಗತಿಯಾಗುತ್ತದೆ ಎಂದರು.
ಖ್ಯಾತ ಮಕ್ಕಳ ತಜ್ಞ ಡಾ.ಸುದತ್ ದರ್ಶನಾಪುರÀ ಅಧ್ಯಕ್ಷತೆ ವಹಿಸಿದ್ದರು. ಸದಾಶಿವಪ್ಪಗೌಡ ರೊಟ್ನಡಗಿ, ನೋಡಲ್ ಅಧಿಕಾರಿ ಮಲ್ಲಪ್ಪ ಯರಗೋಳ, ವಿಷಯ ಪರಿವೀಕ್ಷಕರಾದ ವೀರಣ್ಣ ಕನ್ನಳ್ಳಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಕನಕಪ್ಪ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಶೋಕಕುಮಾರ ಕೆಂಭಾವಿ, ಚನ್ನಾರೆಡ್ಡಿ ಪಾಟೀಲ ದರ್ಶನಾಪೂರ, ಭೀಮನಗೌಡ ತಳೇವಾಡ, ಮಡಿವಾಳಪ್ಪ ಪಾಟೀಲ, ರೇಣುಕಾ ಪಾಟೀಲ್, ಸಿ.ಎಸ್.ದೇಸಾಯಿ ಮತ್ತಿತರರು ಹಾಜರಿದ್ದರು.
ಯಾದಗಿರಿ ಜಿಲ್ಲೆಯ 47 ಪ್ರೌಢ ಶಾಲೆಗಳ 256 ವಿದ್ಯಾರ್ಥಿಗಳು ಒಂದು ವಾರದ ಶಿಬಿರದಲ್ಲಿ 30 ಸಂಪನ್ಮೂಲ ಶಿಕ್ಷಕರಿಂದ ತರಬೇತಿ ಪಡೆದರು. ದಿನನಿತ್ಯ ಬೆಳಿಗ್ಗೆ ಪ್ರಾರ್ಥನೆ, ಚಿಂತನ, ಯೋಗಾಸನ ಹಾಗೂ ಸಂಜೆ ಪ್ರೇರಣಾ ಉಪನ್ಯಾಸ, ರಸಪ್ರಶ್ನೆ, ಚರ್ಚಾಸ್ಪರ್ಧೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಸಹ ಶಿಕ್ಷಕ ರಾಜಾಸಾಹೇಬ ಬಳಿಗಾರ ನಿರೂಪಿಸಿದರು. ಪ್ರಶಾಂತ ಯಾಳಗಿ ಸ್ವಾಗತಿಸಿದರು. ವೀರಭದ್ರ ಬಡಿಗೇರ ವಂದಿಸಿದರು.