ಆಗಸ್ಟ್ 23 ರಿಂದ 9, 10ನೇ ತರಗತಿ ಶಾಲಾರಂಭ
ಶಾಲಾ ಆರಂಭ ಪೂರ್ವ ಪಾಲಕರು ಮತ್ತು ಶಿಕ್ಷಕರ ಸಭೆ
ಕೊರೊನಾ ಮಾರ್ಗಸೂಚಿ ಪಾಲನೆ ಕಡ್ಡಾಯ- ಪ್ರಮೀಳಾ ಡಿಸೋಜಾ
yadgiri, ಶಹಾಪುರಃ ರಾಜ್ಯ ಸರ್ಕಾರ ಇದೇ ಆಗಸ್ಟ್ 23 ರಿಂದ ಮೊದಲನೇ ಹಂತವಾಗಿ 9 ಮತ್ತು 10 ನೇ ತರಗತಿ ಆರಂಭಿಸಲು ಕೊರೊನಾ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಹಲವಾರು ಕ್ರಮಗಳನ್ನು ಅಳವಡಿಸಿಕೊಂಡು ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ ಎಂದು ಇಲ್ಲಿನ ಸೈಂಟ್ ಪೀಟರ್ಸ್ ಶಾಲೆ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಪ್ರಮಿಳಾ ಡಿಸೋಜಾ ತಿಳಿಸಿದರು.
ನಗರದ ಸೈಂಟ್ ಪೀಟರ್ಸ್ ಶಾಲೆಯಲ್ಲಿ ಶನಿವಾರ ಪಾಲಕರು ಮತ್ತು ಶಿಕ್ಷಕರ ಸಮಿತಿಯಿಂದ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಶಾಲೆಯಲ್ಲಿ ಸರ್ಕಾರ ಸೂಚಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಮಕ್ಕಳೆಲ್ಲರೂ ಪಾಲಿಸಬೇಕು. ಮಾರ್ಗಸೂಚಿಯಂತೆ ಒಂದು ಕೋಣೆಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ ಬೆಂಚ್‍ಗೆ ಇಬ್ಬರಂತೆ ವಿದ್ಯಾರ್ಥಿಗಳನ್ನು ಕೂಡಿಸಲಾಗುವದು.
ಶಾಲೆಗೆ ಸ್ಯಾನಿಟೈಸ್ ಮಾಡಿಸಲಾಗುವದು. ಪ್ರತಿ ಮಗು ಮಾಸ್ಕ್ ಧರಿಸಿಯೇ ಶಾಲೆಗೆ ಬರಬೇಕು. ಮೊದಲು ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ದೃಢಿಕರಣ ಪತ್ರ ನೀಡಬೇಕು. ಅಲ್ಲದೆ ಮಕ್ಕಳು ಶಾಲೆಯಲ್ಲಿ ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ತಿಳಿಸಬೇಕು.
ಸೋಮವಾರ ಬೆಳಗ್ಗೆ 10 ಗಂಟೆಗೆ ಶಾಲೆ ಆರಂಭವಾಗಲಿದೆ ಮದ್ಯಾಹ್ನ 1:30 ಕ್ಕೆ ಮುಗಿಯಲಿದೆ. ಮದ್ಯಾಹ್ನದಲ್ಲಿ ಬ್ರೇಕ್ ನೀಡಲಾಗುವದು. ಆ ವೇಳೆಯು ಮಕ್ಕಳ ಅಂತರ ಕಾಯಲು ಶಿಕ್ಷಕರು ಶ್ರಮಿಸುವರು. ಮಕ್ಕಳಿಗೂ ಪಾಲಕರು ಅಂತರ ಕಾಪಾಡಿಕೊಳ್ಳಲು ತಿಳಿ ಹೇಳಿ ಕಳುಹಿಸಬೇಕು. ಸ್ಯಾನಿಟೈಸರ ಬಳಸಬೇಕು. ಯಾವುದೇ ವಸ್ತು ಮುಟ್ಟಕೂಡದು. ಮುಟ್ಟಿದ್ದಲ್ಲಿ ಕೈ ತೊಳೆಯಬೇಕು. ಶಾಲೆಯಲ್ಲಿ ಸ್ಯಾನಿಟೈಸರ್, ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ.
ಕೋಣೆಗಳ ಸ್ಯಾನಿಟೈಸ್ ಮಾಡಲು ಯಂತ್ರವನ್ನು ಖರೀದಿಸಲಾಗಿದೆ. ಎಲ್ಲಾ ಪಾಲಕರು ಮಕ್ಕಳನ್ನು ಯಾವುದೇ ಆತಂಕವಿಲ್ಲದೆ ಶಾಲೆಗೆ ಕಳುಹಿಸಬಹುದು. ಮನೆಯಲ್ಲೂ ಎಚ್ಚರಿಕೆವಹಿಸಬೇಕು ಎಂದು ತಿಳಿಸಿದರು.
ಸಂಸ್ಥೆಯ ವ್ಯವಸ್ಥಾಪಕರಾದ ಫಾದರ್ ಉಪಸ್ಥಿತರಿದ್ದರು. ಪಿಟಿಎ ಸದಸ್ಯರು ಹಾಗೂ ಶಿಕ್ಷಕರು ಹಾಜರಿದ್ದರು.